ADVERTISEMENT

ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆ ಶೇ 87ರಷ್ಟು ಹೆಚ್ಚಳ

ಎಸಿಎಫ್ ಮಹಾದೇವು ಮಾಹಿತಿ; ಸಫಾರಿ ಕೇಂದ್ರದಲ್ಲಿ ವಿಶ್ವ ಹುಲಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 4:59 IST
Last Updated 30 ಜುಲೈ 2021, 4:59 IST
ಎಚ್.ಡಿ.ಕೋಟೆ ತಾಲ್ಲೂಕಿನ ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ವೀಕ್ಷಕ ಹುದ್ದೆಯಿಂದ ಅರಣ್ಯ ರಕ್ಷಕ ಹುದ್ದೆಗೆ ಬಡ್ತಿ ಪಡೆದ 16 ಸಿಬ್ಬಂದಿಗೆ ಸ್ಟಾರ್ ಕ್ಲಿಪ್ಪಿಂಗ್ ಮಾಡಲಾಯಿತು
ಎಚ್.ಡಿ.ಕೋಟೆ ತಾಲ್ಲೂಕಿನ ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ವೀಕ್ಷಕ ಹುದ್ದೆಯಿಂದ ಅರಣ್ಯ ರಕ್ಷಕ ಹುದ್ದೆಗೆ ಬಡ್ತಿ ಪಡೆದ 16 ಸಿಬ್ಬಂದಿಗೆ ಸ್ಟಾರ್ ಕ್ಲಿಪ್ಪಿಂಗ್ ಮಾಡಲಾಯಿತು   

ಎಚ್.ಡಿ.ಕೋಟೆ: ‘ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಶೇ 87ರಷ್ಟು ಹೆಚ್ಚಳವಾಗಿದೆ’ ಎಂದು ಎಸಿಎಫ್ ಎಸ್.ಪಿ.ಮಹಾದೇವು ತಿಳಿಸಿದರು.

ತಾಲ್ಲೂಕಿನ ಅಂತರಸಂತೆ ವನ್ಯಜೀವಿ ವಲಯ ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಗುರುವಾರ ನಡೆದ ‘ವಿಶ್ವ ಹುಲಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2014ರಲ್ಲಿ ನಡೆದ ಹುಲಿ ಗಣತಿಯಲ್ಲಿ ಒಟ್ಟು 72 ಮತ್ತು 2018ರಲ್ಲಿ 125 ಹಾಗೂ 2020ರಲ್ಲಿ 135 ಹುಲಿಗಳು ಕಂಡು ಬಂದಿವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಕೊಡಗು ಜಿಲ್ಲೆಯಿಂದ 285 ಚದರ ಕಿ.ಮೀ ಪ್ರದೇಶ ಸೇರಿಸಿ 1955ರಲ್ಲಿ ನಾಗರಹೊಳೆ ಅಭಯಾರಣ್ಯವೆಂದು, 1983ರಲ್ಲಿ 286 ಚದರ ಕಿ.ಮೀ. ಪ್ರದೇಶ ಸೇರ್ಪಡೆಗೊಳಿಸಿ ಒಟ್ಟು 571 ಚದರ ಕಿ.ಮೀ. ಪ್ರದೇಶವನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವೆಂದು ಘೋಷಿಸ ಲಾಯಿತು. 2007ರಲ್ಲಿ 643 ಚದರ ಕಿ.ಮೀ. ವ್ಯಾಪ್ತಿಯನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವೆಂದು ಕರೆಯಲಾಯಿತು. ನಂತರ 2019ರಲ್ಲಿ ಹೆಚ್ಚುವರಿಯಾಗಿ 200.57 ಚದರ ಕಿ.ಮೀ. ಬಫರ್ ಪ್ರದೇಶವನ್ನು ಸೇರಿಸಲಾಯಿತು. ಈ ಪ್ರದೇಶವು ಸದ್ಯ 843.93 ಚದರ ಕಿ.ಮೀ.ಗಳಷ್ಟು ವ್ಯಾಪ್ತಿಯನ್ನು ಹೊಂದಿದೆ’ ಎಂದರು.

ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಮೋಹನ್ ರಾಜ್‌ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಧಿಕೃತ ಲಾಂಛನ ಬಿಡುಗಡೆ ಮಾಡಿದರು.

‘ಸಾರಿಸ್ಕಾದಲ್ಲಿ ಕಳ್ಳ ಬೇಟೆಯಿಂದ ಹುಲಿಯನ್ನು ಸಾಯಿಸಿದ್ದರು. ಇದರಿಂದಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಹುಲಿ ಸಂರಕ್ಷಣೆ ಮಾಡಲು ಯೋಜನೆ ಜಾರಿಗೊಳಿಸಿದ್ದರು. ಹುಲಿ ಸಂರಕ್ಷಣೆಯಿಂದಾಗಿ ಆನೆ ಸೇರಿದಂತೆ ಸಾಕಷ್ಟು ವನ್ಯಪ್ರಾಣಿಗಳ ಬದುಕು ಉತ್ತಮವಾಯಿತು. ಹಾಗೆಯೇ ಅರಣ್ಯ, ಜಲ ಸಂಪತ್ತು ಸಂರಕ್ಷಣೆ ಆಯಿತು’ ಎಂದು ಅವರು ಹೇಳಿದರು.

16 ಸಿಬ್ಬಂದಿಗೆ ಅರಣ್ಯ ವೀಕ್ಷಕ ಹುದ್ದೆಯಿಂದ ಅರಣ್ಯ ರಕ್ಷಕ ಹುದ್ದೆಗೆ ಬಡ್ತಿ ನೀಡಿದ್ದು, ಅವರಿಗೆ ಸ್ಟಾರ್ ಕ್ಲಿಪ್ಪಿಂಗ್ ಮಾಡಲಾಯಿತು.

ಎಸಿಎಫ್ ಎ.ವಿ.ಸತೀಶ್, ಕೆ.ಪಿ.ಗೋಪಾಲ್, ವಲಯ ಅರಣ್ಯಾಧಿಕಾರಿಗಳಾದ ಸಿದ್ದರಾಜು, ಸಂತೋಷ ಹೂಗಾರ್, ಮಧು, ನಮನನಾಯಕ್, ಗಿರೀಶ್, ಹನುಮಂತ ರಾಜು, ಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.