
ಮೈಸೂರು: ‘ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ಘನತೆ ಮತ್ತು ಸಮಾನ ಅವಕಾಶವನ್ನು ಖಾತರಿಪಡಿಸುತ್ತದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.
ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದ ಆವರಣದಲ್ಲಿ ಸೋಮವಾರ ನಡೆದ 77ನೇ ಗಣರಾಜೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಗಣರಾಜ್ಯೋತ್ಸವವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲ ಮೌಲ್ಯಗಳ ದ್ಯೋತಕವಾಗಿದೆ. ನಾಗರಿಕರಿಗೆ ಅವರ ಹಕ್ಕುಗಳ ಜೊತೆಗೆ ಅವರ ಕರ್ತವ್ಯಗಳನ್ನು ನೆನಪಿಸುವ ದಿನವೂ ಆಗಿದೆ’ ಎಂದರು.
‘ಸಂವಿಧಾನ ಶಿಲ್ಪಿಯಾದ ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ ಮತ್ತು ದಮನಿತರ ಸಬಲೀಕರಣವನ್ನು ಬಲವಾಗಿ ಪ್ರತಿಪಾದಿಸಿದರು. ಶಿಕ್ಷಣವನ್ನು ವಿಮೋಚನೆ ಮತ್ತು ಪ್ರಗತಿಗೆ ಪ್ರಬಲ ಸಾಧನವೆಂದು ಪರಿಗಣಿಸಿದ್ದರು. ಪ್ರಜಾಪ್ರಭುತ್ವವು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯಲ್ಲಿ ಬೇರೂರಿರಬೇಕೆಂದು ದೃಢವಾಗಿ ನಂಬಿದ್ದರು’ ಎಂದು ಹೇಳಿದರು.
ಕುಲಸಚಿವರಾದ ಎಂ.ಕೆ. ಸವಿತಾ, ಪ್ರೊ.ಎನ್. ನಾಗರಾಜ, ಸಿಂಡಿಕೇಟ್ ಸದಸ್ಯರು, ಶೈಕ್ಷಣಿಕ ಮಂಡಳಿ ಸದಸ್ಯರು, ನಿಕಾಯಗಳ ಡೀನ್‌ಗಳು, ನಿರ್ದೇಶಕರು, ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕರಾದ ಪ್ರೊ. ಗುರುಸಿದ್ದಯ್ಯ ಸಿ., ಸುಷ್ಮಾ ಎಸ್.ಎನ್. ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.