ADVERTISEMENT

ಮೈಸೂರು| ಸಂವಿಧಾನದ ಉಳಿವಿಗೆ ಹೋರಾಟ ಅಗತ್ಯ: ಬಿ.ಜೆ. ವಿಜಯ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 13:12 IST
Last Updated 26 ಜನವರಿ 2026, 13:12 IST
   

ಮೈಸೂರು: ‘ದೇಶದ ಸಂವಿಧಾನದ ಉಳಿವಿಗಾಗಿ ಎರಡನೇ ಮಹಾಕ್ರಾಂತಿಯನ್ನು ಆರಂಭಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಹೇಳಿದರು.

ಕಾಂಗ್ರೆಸ್ ನಗರ ಹಾಗೂ ಜಿಲ್ಲಾ ಸಮಿತಿ ಸಹಯೋಗದಲ್ಲಿ ಇಲ್ಲಿನ ಇಂದಿರಾಗಾಂಧಿ ಕಾಂಗ್ರೆಸ್ ಭವನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಭಾರತದ ಸಮಗ್ರ ಬಲಿಷ್ಠತೆಗಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಲಕ್ಷಾಂತರ ಸೇನಾನಿಗಳು ಬಲಿದಾನ ಮಾಡಿದ್ದಾರೆ. ಇದನ್ನು ಜಗತ್ತು ಮರೆಯಲು ಸಾಧ್ಯವಿಲ್ಲ. ಅಂತೆಯೇ ಇತಿಹಾಸವನ್ನು ತಿರುಚಲು ಯಾರಿಂದಲೂ ಆಗುವುದಿಲ್ಲ. ದೇಶದ ಇಂದಿನ ಸುಭದ್ರ ಸರ್ಕಾರ ಮತ್ತು ಸಮಗ್ರತೆಗೆ ಡಾ.ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನದ ಮೂಲ ಬೇರುಗಳೇ ಕಾರಣ’ ಎಂದರು.

ADVERTISEMENT

‘ರಾಜಕಾರಣಿಗಳು ಶಾಸಕ, ಸಚಿವ ಆಗುವುದು ಬಹುದೊಡ್ಡ ಸಾಧನೆಯಲ್ಲ. ಅಂತಹ ಜವಾಬ್ದಾರಿ ಸ್ಥಾನಗಳನ್ನು ಸಾಮಾಜಿಕ ಬದ್ಧತೆ ಮತ್ತು ದೇಶದ ಹಿತಕ್ಕಾಗಿ ಬಳಸಿಕೊಳ್ಳಬೇಕು. ಅದು ನಿಜವಾದ ಸಾಧನೆ ಎನಿಸುತ್ತದೆ. ಸಾರ್ವಜನಿಕ ಜೀವನದಲ್ಲಿ ದೇಶದ ಹಿತಾಸಕ್ತಿಗೆ ಬದಲಾಗಿ ಜಾತಿ, ಧರ್ಮ ಹಾಗೂ ಸ್ವಾರ್ಥದ ಮನೋಭಾವ ಹೊಂದಿದರೆ ಭಾರತ ಮತ್ತೊಮ್ಮೆ ಅಪಾಯದ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ’ ಎಂದು ಹೇಳಿದರು.

ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ, ಪಕ್ಷದ ಪದಾಧಿಕಾರಿಗಳಾದ ಚಿಕ್ಕಣ್ಣ, ಭಾಸ್ಕರ್ ಗೌಡ, ಎಂ. ಶಿವಣ್ಣ, ರಮೇಶ್, ನಾಗರಾಜ್, ಎಡತಲೆ ಮಂಜುನಾಥ್, ಶಿವಪ್ರಸಾದ್, ಮೋದಾಮಣಿ, ಎಂ.ಕೆ. ಅಶೋಕ್, ಶಾಮ ಯೋಗೀಶ್, ನಾಗೇಶ್, ವೆಂಕಟಸುಬ್ಬಯ್ಯ, ಸುನಂದ್‌ಕುಮಾರ್, ಡೈರಿ ವೆಂಕಟೇಶ್, ಸುಜಾತಾ, ತೊರೆಮಾವು ಗಿರೀಶ್, ಸುರೇಶ್ ಪಾಳ್ಯ, ಮೊಸಿನ್ ಖಾನ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.