
ಮೈಸೂರು: ಮೈಸೂರು ರೇಷ್ಮೆಗೆ ಪ್ರಸಿದ್ಧಿಯಾದ ಅರಮನೆ ನಗರಿಯಲ್ಲಿ ಸದ್ಯದಲ್ಲೇ ರೇಷ್ಮೆ ವಸ್ತು ಸಂಗ್ರಹಾಲಯ ತಲೆ ಎತ್ತಲಿದ್ದು, ದೇಶದ ಮೊದಲ ಪೂರ್ಣ ಪ್ರಮಾಣದ ಮ್ಯೂಸಿಯಂ ಆಗಲಿದೆ.
ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆಗೆ ಮುಂದಾಗಿದ್ದು, ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.
ಮೈಸೂರಿನಲ್ಲಿ 125 ಎಕರೆಯಷ್ಟು ವಿಶಾಲವಾದ ಆವರಣದಲ್ಲಿರುವ ಸಂಸ್ಥೆಯ (ಸಿಎಸ್‌ಆರ್‌ಟಿಐ) 2–3 ಎಕರೆ ವಿಸ್ತೀರ್ಣದಲ್ಲಿ ಸಂಗ್ರಹಾಲಯ ರೂಪು ತಾಳಲಿದೆ. ಒಟ್ಟು ₹15–20 ಕೋಟಿ ವೆಚ್ಚ ಅಂದಾಜಿಸಿದ್ದು, ಕೇಂದ್ರ ಸಂಸ್ಕೃತಿ ಸಚಿವಾಲಯವು ₹5 ಕೋಟಿ ನೀಡಲಿದೆ. ಉಳಿದದ್ದನ್ನು ಜವಳಿ ಸಚಿವಾಲಯ ಹಾಗೂ ವಿವಿಧ ಯೋಜನೆಗಳಿಂದ ಭರಿಸಲು ಯೋಜಿಸಲಾಗಿದೆ.
‘ಸದ್ಯ ಯೋಜನೆಯ ಪ್ರಾಥಮಿಕ ವರದಿಗೆ ಕೇಂದ್ರವು ಅನುಮತಿ ನೀಡಿದ್ದು, ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಸಿದ್ಧತೆ ಸದ್ಯದಲ್ಲೇ ಆರಂಭ ಆಗಲಿದೆ. ಲಭ್ಯವಿರುವ ಅನುದಾನ ಬಳಸಿ ಮೊದಲ ಹಂತದ ಕಾಮಗಾರಿ ಆರಂಭ ಆಗಲಿದೆ’ ಎಂದು ಕೇಂದ್ರ ರೇಷ್ಮೆ ಮಂಡಳಿ ಜಂಟಿ ಕಾರ್ಯದರ್ಶಿ (ತಾಂತ್ರಿಕ) ನರೇಶ್ ಬಾಬು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಸಂಗ್ರಹಾಲಯ ಸ್ಥಾಪನೆ ಸಂಬಂಧ ಅಧಿಕಾರಿಗಳ ತಂಡವು ಈಗಾಗಲೇ ಚೀನಾ, ಇಟಲಿಗೆ ಅಧ್ಯಯನ ಪ್ರವಾಸ ಕೈಗೊಂಡು, ಎಲ್ಲ ಸಾಧ್ಯತೆಗಳ ಸಹಿತ ಕಾರ್ಯಯೋಜನೆಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಏನಿರಲಿದೆ ಸಂಗ್ರಹಾಲಯದಲ್ಲಿ?: ‘ರೇಷ್ಮೆಗೆ ಸಂಬಂಧಿಸಿದ ಸಮಗ್ರ ಇತಿಹಾಸ ಹಾಗೂ ಮಾಹಿತಿವುಳ್ಳ ಮೊದಲ ಮ್ಯೂಸಿಯಂನಲ್ಲಿ ಇಡೀ ಭಾರತದಲ್ಲಿರುವ ರೇಷ್ಮೆ ಕೃಷಿ ಮತ್ತು ವೈವಿಧ್ಯಮಯ ಉತ್ಪನ್ನಗಳ ಮಾಹಿತಿಯನ್ನು ಒಂದೇ ಸೂರಿನ ಅಡಿ ತರಲಾಗುವುದು. ರೇಷ್ಮೆ ಕೃಷಿ ಆರಂಭದಿಂದ ಹಿಡಿದು ಉತ್ಪನ್ನಗಳ ಉತ್ಪಾದನೆವರೆಗೆ ಪ್ರತಿ ಹಂತದ ಬೆಳವಣಿಗೆಯನ್ನು ದಾಖಲಿಸಲಿದೆ’ ಎಂದು ರೇಷ್ಮೆ ಮಂಡಳಿ ಅಧಿಕಾರಿಗಳು ಹೇಳುತ್ತಾರೆ.
ಮೈಸೂರು ಸಿಲ್ಕ್ ಮಾತ್ರವಲ್ಲದೆಯೇ ದೇಶದಲ್ಲಿನ ಇನ್ನಿತರ ಪ್ರಸಿದ್ಧ ರೇಷ್ಮೆ ಕೈಗಾರಿಕೆಗಳು, ಜಿಐ ಉತ್ಪನ್ನಗಳ ಸಾಂಕೇತಿಕ ಪ್ರದರ್ಶನ ಇಲ್ಲಿರಲಿದೆ. ಶತಮಾನಗಳಷ್ಟು ಹಳೆಯದಾದ ಪರಂಪರೆಯ ಸಂಗ್ರಹಗಳ ಪ್ರದರ್ಶನಕ್ಕೂ ಯೋಜನೆ ರೂಪಿಸಲಾಗುತ್ತಿದೆ.
ಪ್ರವಾಸೋದ್ಯಮಕ್ಕೆ ಪೂರಕ
ರಾಜ್ಯದಲ್ಲಿ ರೇಷ್ಮೆ ಕೃಷಿ ಮತ್ತು ವೈವಿಧ್ಯಮಯ ಉತ್ಪನ್ನಗಳ ಉತ್ಪಾದನೆಗೆ ಮೂಲವೇ ಮೈಸೂರು. 18ನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ಕಾಲದಲ್ಲಿ ಹಳೇ ಮೈಸೂರು ಭಾಗದಲ್ಲಿ ರೇಷ್ಮೆ ಕೃಷಿ ಆರಂಭಗೊಂಡು ಉಪಕಸುಬಾಗಿಯೂ ಜನಪ್ರಿಯ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಇಲ್ಲಿಯೇ ರೇಷ್ಮೆ ನೇಯ್ಗೆ ಕಾರ್ಖಾನೆ ಆರಂಭವಾಗಿ ಇಂದಿಗೂ ಗುಣಮಟ್ಟದ ರೇಷ್ಮೆಸೀರೆಗಳ ಉತ್ಪಾದನೆಗೆ ಹೆಸರುವಾಸಿ. ಅದರ ಮುಂದುವರಿದ ಭಾಗವಾಗಿ ಪೂರ್ಣ ಪ್ರಮಾಣದ ವಸ್ತು ಸಂಗ್ರಹಾಲಯ ಆರಂಭವಾಗಲಿದೆ. ‘ವಸ್ತು ಸಂಗ್ರಹಾಲಯ ಸ್ಥಾಪನೆ ಆದರೆ ಒಟ್ಟಾರೆ ಉತ್ಪಾದನೆಯ ಜೊತೆಗೆ ಪ್ರವಾಸೋದ್ಯಮದ ಬೆಳವಣಿಗೆಗೂ ಪೂರಕವಾಗಲಿದೆ ಎನ್ನುವುದು ಪ್ರವಾಸೋದ್ಯಮ ವಲಯದ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.