ADVERTISEMENT

‘ಪರಿಸರ ಸಮಸ್ಯೆ: ಆದಿವಾಸಿಗಳಲ್ಲಿ ಪರಿಹಾರ’

ಜ್ಞಾನ ಬಳಸಿಕೊಳ್ಳುವುದು ಇಂದಿನ ತುರ್ತು: ಸಿ.ಮಾದೇಗೌಡ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 5:53 IST
Last Updated 21 ನವೆಂಬರ್ 2025, 5:53 IST
<div class="paragraphs"><p>ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಗುರುವಾರ ಆಯೋಜಿಸಿದ್ದ&nbsp;ಬಿರ್ಸಾ ಮುಂಡಾ ಜಯಂತಿ ಪ್ರಯುಕ್ತ ಗುರುವಾರ ಆಯೋಜಿಸಿದ್ದ ‘ಭಾಷೆ, ಸಂಸ್ಕೃತಿ ಮತ್ತು ಜ್ಞಾನ ಪದ್ಧತಿಗಳು’ ಕುರಿತ ವಿಚಾರ ಸಂಕಿರಣವನ್ನು&nbsp;ನಿರ್ದೇಶಕ ಪ್ರೊ.ಶೈಲೇಂದ್ರ&nbsp;ಮೋಹನ್ ಉದ್ಘಾಟಿಸಿದರು. </p></div>

ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಗುರುವಾರ ಆಯೋಜಿಸಿದ್ದ ಬಿರ್ಸಾ ಮುಂಡಾ ಜಯಂತಿ ಪ್ರಯುಕ್ತ ಗುರುವಾರ ಆಯೋಜಿಸಿದ್ದ ‘ಭಾಷೆ, ಸಂಸ್ಕೃತಿ ಮತ್ತು ಜ್ಞಾನ ಪದ್ಧತಿಗಳು’ ಕುರಿತ ವಿಚಾರ ಸಂಕಿರಣವನ್ನು ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ಉದ್ಘಾಟಿಸಿದರು.

   

ಪ್ರಜಾವಾಣಿ ಚಿತ್ರ 

ಮೈಸೂರು: ‘ಕಾಡಿನೊಂದಿಗೆ ಜೀವ ಬೆಸೆದುಕೊಂಡಿರುವ ಆದಿವಾಸಿ ಸಮುದಾಯಗಳ ಜ್ಞಾನ ಬಳಸಿ, ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಇಂದಿನ ತುರ್ತಾಗಿದೆ’ ಎಂದು ಬಿಳಿರಂಗನಬೆಟ್ಟದ ಅಶೋಕ ಪರಿಸರ ಸಂಶೋಧನಾ ಮತ್ತು ವಿಜ್ಞಾನ ಸಂಸ್ಥೆಯ ಯೋಜನ ವ್ಯವಸ್ಥಾಪಕ ಸಿ.ಮಾದೇಗೌಡ ಪ್ರತಿಪಾದಿಸಿದರು.

ಮಾನಸಗಂಗೋತ್ರಿಯ ಭಾರತೀಯ ಭಾಷಾ ಸಂಸ್ಥಾನದಲ್ಲಿ ಬಿರ್ಸಾ ಮುಂಡಾ ಜಯಂತಿ ಪ್ರಯುಕ್ತ ಗುರುವಾರ ಆಯೋಜಿಸಿದ್ದ ‘ಭಾಷೆ, ಸಂಸ್ಕೃತಿ ಮತ್ತು ಜ್ಞಾನ ಪದ್ಧತಿಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಪರಿಸರ ಸಂರಕ್ಷಕರಾಗಿರುವ ಅವರಿಗೆ ಹುಲಿ, ಆನೆಗಳ ವರ್ತನೆ, ಗುಣ ಸ್ವಭಾವ ಗೊತ್ತಿದೆ. ಗಿಡಮೂಲಿಕೆಗಳಲ್ಲಿನ ಔಷಧ ಜ್ಞಾನ ಗೊತ್ತಿದೆ. ಹೀಗಾಗಿ ಕಾಡಿನೊಂದಿಗಿನ ಸಂಬಂಧವನ್ನು ಬೇರ್ಪಡಿಸುವ ಕೆಲಸವನ್ನು ಆಗಬಾರದು. ಅವರ ಹಕ್ಕಾಗಿರುವ ಕಿರು ಅರಣ್ಯ ಉತ್ಪನ್ನ ಸಂಗ್ರಹಕ್ಕೆ ಅವಕಾಶ ಕೊಡಬೇಕು’ ಎಂದರು.

‘ಜಲಾಶಯಗಳ ನಿರ್ಮಾಣ, ಗಣಿಗಾರಿಕೆ ಕಾರಣ ಕಾಡಿನ ನಾಶವು ನೂರಾರು ವರ್ಷದಿಂದ ಅವ್ಯಾಹತವಾಗಿ ನಡೆದಿದೆ. ಹುಲಿ ಯೋಜನೆ, ಅರಣ್ಯ ಕಾಯ್ದೆಗಳು ಅವರನ್ನು ಕಾಡಿನಾಚೆಗೆ ದೂಕಿವೆ. ಅದರಿಂದ ಸಾವಿರಾರು ವರ್ಷದಿಂದ ಪರಿಸರದ ಒಡನಾಟದಿಂದ ಕಂಡುಕೊಂಡಿದ್ದ ಅವರ ಜ್ಞಾನ ನಶಿಸುತ್ತಿದೆ. ಬುಡಕಟ್ಟು ಭಾಷೆಗಳು ಅಳಿವಿನಂಚಿಗೆ ಬಂದಿವೆ’ ಎಂದು ಕಳವಳ ವ್ಯಕ್ತಪಡಿಸಿದರು. 

‘ಅಭಿವೃದ್ಧಿ ಯೋಜನೆಗಳಿಂದ ಮೊದಲು ತಬ್ಬಲಿಗಳಾಗುವುದು ಕಾಡಿನ ಮಕ್ಕಳೇ ಆಗಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಕಾಫಿ, ಟೀ ತೋಟಗಳಿಗಾಗಿ ಕಾಡನ್ನು ಸವರಿದರು. ಬೆಲೆಬಾಳುವ ಮರಗಳು ರಫ್ತಾದವು. ಅರಣ್ಯ ಹಕ್ಕುಗಳಿಗಾಗಿ ಬಿರ್ಸಾ ಮುಂಡಾ ಕ್ರಾಂತಿಯನ್ನೇ ನಡೆಸಿದರು. ಸ್ವಾತಂತ್ರ್ಯ ನಂತರ ನದಿ ಕಣಿವೆ ಯೋಜನೆ, ಗಣಿಗಾರಿಕೆ ಅರಣ್ಯ ನುಂಗಿದವು. ಅವರಿಗೆ ಪುನರ್ವಸತಿಯೂ ಸರಿಯಾಗಿ ನಡೆಯಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

‘ದೇಶದಲ್ಲಿ 58 ಹುಲಿ ಸಂರಕ್ಷಿತ ಪ್ರದೇಶಗಳಿದ್ದು, 65 ಸಾವಿರ ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿದೆ. ಬಿಳಿಗಿರಿರಂಗನ ಬೆಟ್ಟ ಪ್ರದೇಶವನ್ನು 2011ರಲ್ಲಿ ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಲಾಯಿತು. ಆಗ 25 ಹುಲಿಗಳಿದ್ದವು, ಈಗ 68 ಆಗಿವೆ. 12 ಸಾವಿರ ಸೋಲಿಗರು ಸಂತ್ರಸ್ತರಾಗಿದ್ದಾರೆ. ಅವರಿಗೆ ಪುನರ್ವಸತಿಯೂ ಇಲ್ಲವಾಗಿದೆ. ನಾಗರಹೊಳೆ, ಬಂಡೀಪುರದ ಬುಡಕಟ್ಟು ಜನರ ಸ್ಥಿತಿಯೂ ಇದೇ ಆಗಿದೆ’ ಎಂದರು. 

ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್, ಉಪನಿರ್ದೇಶಕ ಪ್ರೊ.ಧರ್ಮೇಶ್ ಫರ್ನಾಂಡೀಸ್, ಸಂಯೋಜಕ ಸುಜೊಯ್ ಸರ್ಕಾರ್ ಪಾಲ್ಗೊಂಡಿದ್ದರು.   

‘ಆದಿವಾಸಿಗಳ ಭಾಷೆ ಉಳಿಸಿ’  ‘ಆದಿವಾಸಿಗಳು ಎಲ್ಲರಂತೆ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಅವರ ಮಾತೃಭಾಷೆಗಳ ಉಳಿವು ಆಗಬೇಕಿದೆ. ಆದಿವಾಸಿಗಳ ಭಾಷೆ ಮತ್ತು ಸಂಸ್ಕೃತಿ ಕುರಿತ ಪಠ್ಯಗಳನ್ನು ಸೇರಿಸಬೇಕು’ ಎಂದು ಮಾದೇಗೌಡ ಸಲಹೆ ನೀಡಿದರು.  ‘ಆದಿವಾಸಿ ಸಂಸ್ಕೃತಿ ಅವರ ಆಚಾರ-ವಿಚಾರಗಳು ಮುಂದಿನ ಪೀಳಿಗೆಗ ದಾಟಿಸಲು ಅಕಾಡೆಮಿ ವಲಯದಿಂದ ಪೂರಕ ಕಾರ್ಯ ಮಾಡಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.