
ಮೈಸೂರು: ‘ಎಲ್ಲೆಲ್ಲಿ ಕೈಗಾರಿಕಾ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಮೂಲಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಳಂಬ ಆಗಿದೆಯೋ ಅಲ್ಲೆಲ್ಲಾ ಉದ್ಯಮಿಗಳಿಗೆ ಅನುಷ್ಠಾನದ ಅವಧಿಯನ್ನು ವಿಸ್ತರಿಸಬೇಕು’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉದ್ಯಮಿಗಳ ಸಭೆ ನಡೆಸಿದ ಅವರು, ‘ಸೌಕರ್ಯಗಳನ್ನೇ ಒದಗಿಸದೆ, ನಿವೇಶನವನ್ನೇ ಹಸ್ತಾಂತರಿಸಿದರೆ ನೀವು ಉದ್ಯಮ ಸ್ಥಾಪಿಸಲು ನೀಡಿದ್ದ ಇಂತಿಷ್ಟು ವರ್ಷಗಳ ಅವಧಿ ಮುಗಿಯಿತು ಎನ್ನುವುದು ನ್ಯಾಯಸಮ್ಮತವಲ್ಲ. ಇದು ಮೈಸೂರಿಗೆ ಮಾತ್ರವೇ ಸೀಮಿತವಾಗಿಲ್ಲ. ರಾಜ್ಯದಲ್ಲಿ ಎಲ್ಲೆಲ್ಲಿ ಆಗಿದೆಯೋ ಅದನ್ನು ಪರಿಶೀಲಿಸಬೇಕು. ಕೆಐಎಡಿಬಿಯಲ್ಲಿ ಈ ಬಗ್ಗೆ ನಿರ್ಣಯವನ್ನೇ ಕೈಗೊಳ್ಳಬೇಕು. ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ನಿರ್ದೇಶನ ನೀಡಿದರು.
‘ಇಲಾಖೆಯಲ್ಲಿ ಸಮಗ್ರವಾಗಿ ಬದಲಾವಣೆ ಮಾಡುವುದಕ್ಕಾಗಿಯೇ ಎಲ್ಲ ಜಿಲ್ಲೆಗಳಲ್ಲೂ ಉದ್ಯಮಿಗಳ ಸಭೆ ನಡೆಸಿ ಅಭಿಪ್ರಾಯ, ಸಲಹೆಗಳನ್ನು ಆಲಿಸುತ್ತಿದ್ದೇನೆ. ಹಿಂದೆಲ್ಲಾ ಬಹಳಷ್ಟು ತಪ್ಪುಗಳಾಗಿವೆ. ಹೀಗಾಗಿ, ಸುಧಾರಣೆಗೆ ಹಾಗೂ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಕಾಟಾಚಾರಕ್ಕೆ ಸಭೆ ನಡೆಸಲು ಬಂದಿಲ್ಲ. ಕೈಗಾರಿಕೆ ಅಭಿವೃದ್ಧಿಯಲ್ಲಿ ರಾಜ್ಯವನ್ನು ಮಾದರಿಯನ್ನಾಗಿ ಮಾಡಬೇಕು ಎನ್ನುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ’ ಎಂದರು.
‘ಎಲ್ಲರೂ ಭಾವಿಸಿದಂತೆ ಕೈಗಾರಿಕಾ ಇಲಾಖೆಗೆ ಹೆಚ್ಚಿನ ಬಜೆಟ್ ಇಲ್ಲ. ದಿನಗೂಲಿ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ವಿಶೇಷ ಹೂಡಿಕೆ ಪ್ರದೇಶ (ಸ್ಪೆಷಲ್ ಇನ್‌ವೆಸ್ಟ್‌ಮೆಂಟ್ ರೀಜನ್– ಎಸ್ಐಆರ್)ಗಳೆಂದು ಘೋಷಿಸಿದ ನಂತರ, ಅಲ್ಲಿನ ತೆರಿಗೆಯು ಆಯಾ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದರಲ್ಲಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.