ಹುಣಸೂರು: ‘ಯುವಕರಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರ ಮತ್ತು ಮೌಲ್ಯವನ್ನು ಜಾಗೃತಗೊಳಿಸಿದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ’ ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಹೇಳಿದರು.
ತಾಲ್ಲೂಕಿನ ಬಿಳಿಕೆರೆ ಹೋಬಳಿ ಬೋಳನಹಳ್ಳಿ ಮಾತೆ ಮಾಳಿಗೇಶ್ವರಿ ಸಪ್ತಪದಿ ಮಂದಿರ ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದಲ್ಲಿ ಶ್ರೀಮಂತರಾಗುವುದು ತಪ್ಪಲ್ಲ ಆದರೆ ವಾಮ ಮಾರ್ಗದ ಶ್ರೀಮಂತಿಕೆ ದೇಶದ ಭವಿಷ್ಯಕ್ಕೆ ಕುತ್ತಾಗಲಿದ್ದು, ಆಳುವ ಸರ್ಕಾರಗಳು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ಆಪತ್ತು ನಿಯಂತ್ರಿಸಲು ಸಾಧ್ಯ’ ಎಂದರು.
‘ಭ್ರಷ್ಟಾಚಾರ ನಿರ್ಮೂಲನೆ ಒಬ್ಬರಿಂದ ಅಸಾಧ್ಯ, ಈ ದಾಹ ನೀಗಿಸಲು ಸಾಮಾಜಿಕವಾಗಿ ಪ್ರತಿಯೊಬ್ಬರು ಪ್ರಯತ್ನಿಸಿದಲ್ಲಿ ಅಂಕುಶ ಹಾಕಬಹುದು. ಆಳುವ ಸರ್ಕಾರ ಅಥವಾ ಕಾನೂನುಗಳಿಂದ ನಿಯಂತ್ರಕ್ಕೆ ಅಲ್ಪಪ್ರಮಾಣದ ಯಶಸ್ಸು ಸಿಗಬಹುದು. ಆದರೆ ಸಮಾಜವೇ ಎಚ್ಚೆತ್ತುಕೊಳ್ಳುವುದರಿಂದ ಸಂಪೂರ್ಣ ನಿಯಂತ್ರಣ ಸಾಧ್ಯ’ ಎಂದರು.
ಶೈಕ್ಷಣಿಕ ಜಾಗೃತಿ: ‘ಮಕ್ಕಳಲ್ಲಿ ಶಾಲಾ ಶಿಕ್ಷಣ ಹಂತದಲ್ಲೇ ಪಠ್ಯಕ್ರಮದ ಮೂಲಕ ಭ್ರಷ್ಟಾಚಾರ ನಿಯಂತ್ರಣ ಹಾಗೂ ಜಾಗೃತಿಗೊಳಿಸುವ ಕೆಲಸವಾಗಬೇಕು. ಆಗ ಸಮಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಬಹುದಾಗಿದೆ’ ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮಾತನಾಡಿ, ‘ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತೀಯರನ್ನು ಇಬ್ಬಾಗ ಮಾಡಲು ಲಾರ್ಡ್ ಮೆಕಾಲೆಯ ಜಾತಿ, ಧರ್ಮ, ಆಚಾರ, ವಿಚಾರ ಹಾಗೂ ಶಿಕ್ಷಣ ಬಳಸಿದ ತಂತ್ರಗಾರಿಕೆ ಅಳವಡಿಸಿಕೊಂಡು ದೇಶವನ್ನಾಳಿದರು. ಆದರೆ ಬ್ರಿಟಿಷರು ದೇಶ ಬಿಟ್ಟು ಹೋಗಿದ್ದರೂ ಅಂದು ಲಾರ್ಡ್ ಮೆಕಾಲೆ ಬಳಸಿದ ತಂತ್ರಗಾರಿಕೆ ಇಂದಿಗೂ ಜೀವಂತವಾಗಿರುವುದು ದುರಂತ’ ಎಂದರು.
‘ದೇಶದ ಸಮಗ್ರ ಅಭಿವೃದ್ಧಿಗೆ ಶಿಕ್ಷಣ ಅತಿ ಮುಖ್ಯವಾಗಿದ್ದು ಸರ್ವರಿಗೂ ಶಿಕ್ಷಣ ನೀಡುವುದರಿಂದ ತಪ್ಪು ಸರಿಗಳ ಅವಲೋಕಿಸುವ ಮನಸ್ಥಿತಿ ಬರಲಿದೆ. ಹೀಗಾಗಿ ಶಿಕ್ಷಣಕ್ಕೆ ಒತ್ತು ನೀಡುವುದರೊಂದಿಗೆ ಭಾರತೀಯ ಧಾರ್ಮಿಕ ಸಂಸ್ಕೃತಿಯನ್ನು ಉಳಿಸುವುದು ಅಷ್ಟೇ ಮುಖ್ಯವಾಗಿದೆ’ ಎಂದರು.
ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಆದಿಚುಂಚನಗಿರಿ ಶಾಖಾಮಠದ ಸೋಮೇಶ್ವರನಾಥ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಬಿ.ಶ್ರೀನಿವಾಸೇಗೌಡ ಮತ್ತು ಹೈಕೋರ್ಟ್ ವಕೀಲರಾದ ಸಿ.ಎನ್.ಕಾಮತ್, ಬಿ.ಎಸ್.ನಾಗರಾಜ್ ಮಾತನಾಡಿದರು.
ಸೂಕ್ತ ವಿಚಾರಣೆ ಅಗತ್ಯವಿತ್ತು: ಬೇಸರ
‘ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮನೆಯಲ್ಲಿ ಕೋಟಿಗಟ್ಟಲೇ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪೀಂ ಕೋರ್ಟ್ ಸಾಧಾರಣ ವ್ಯಕ್ತಿಯನ್ನು ಗಮನಿಸುವ ಮಾದರಿಯಲ್ಲೇ ವಿಚಾರಣೆ ನಡೆಸಿ ತೀರ್ಪು ನೀಡಬೇಕಿತ್ತು’ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು. ‘ಸರಿಯಾದ ಕ್ರಮದಲ್ಲಿ ವಿಚಾರಣೆ ಮಾಡದೇ ಆರೋಪಿ ನ್ಯಾಯಮೂರ್ತಿಯನ್ನು ಅಹಮದಾಬಾದ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದ್ದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.