ADVERTISEMENT

ಮೈಸೂರು: 84 ಕಿ.ಮೀ. ಉದ್ದದ ‘ಹೊಸ ಪಥ’ ನಿರ್ಮಾಣ

ಪ್ರಮುಖ ಪಟ್ಟಣಗಳಿಗೆ ಬೈಪಾಸ್‌: ಪ್ರಯಾಣದ ಅವಧಿ ಕಡಿತ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 5:36 IST
Last Updated 30 ಜನವರಿ 2026, 5:36 IST
ಮೈಸೂರು ತಾಲ್ಲೂಕಿನ ಯಲಚಹಳ್ಳಿ ಬಳಿ ನಡೆದಿರುವ ಕಾಮಗಾರಿ –ಪ್ರಜಾವಾಣಿ ಚಿತ್ರ
ಮೈಸೂರು ತಾಲ್ಲೂಕಿನ ಯಲಚಹಳ್ಳಿ ಬಳಿ ನಡೆದಿರುವ ಕಾಮಗಾರಿ –ಪ್ರಜಾವಾಣಿ ಚಿತ್ರ   

ಮೈಸೂರು: ಮೈಸೂರು–ಕುಶಾಲನಗರ ಹೆದ್ದಾರಿಯ 92 ಕಿ.ಮೀ. ಪೈಕಿ 84 ಕಿ.ಮೀ. ಉದ್ದದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೊಸತಾಗಿ ನಿರ್ಮಿಸುತ್ತಿದೆ. ಬೆಂಗಳೂರಿನಿಂದ ಕುಶಾಲನಗರಕ್ಕೆ ಹೋಗುವವರು ಮೈಸೂರಿನ ಸಂಪರ್ಕಕ್ಕೆ ಬಾರದೆಯೇ ಪ್ರಯಾಣ ಮುಂದುವರಿಸಬಹುದು.

ಬೆಂಗಳೂರು–ಮೈಸೂರು ಹೊಸ ಹೆದ್ದಾರಿಗೆ ಹೊಂದಿಕೊಂಡಂತೆಯೇ ಶ್ರೀರಂಗಪಟ್ಟಣ ಬೊಮ್ಮೂರು ಅಗ್ರಹಾರ ಗ್ರಾಮದ ಬಳಿ ವರ್ತುಲ ಮಾದರಿಯ ‘ಟ್ರಂಪೆಡ್’ ರಸ್ತೆ ನಿರ್ಮಾಣವಾಗಲಿದ್ದು, ಇದು ಕುಶಾಲನಗರ ಹೆದ್ದಾರಿಗೆ ‘ಸೇತುವೆ’ ಆಗಲಿದೆ. ಬೆಂಗಳೂರು ಕಡೆಯಿಂದ ಹೊಸ ಹೆದ್ದಾರಿಯಲ್ಲಿ ಬಂದಷ್ಟೇ ವೇಗವಾಗಿ ವಾಹನಗಳು ಕುಶಾಲನಗರ ಕಡೆಗೆ ತಿರುಗಿ, ಯಾವ ಅಡೆತಡೆಯೂ ಇಲ್ಲದೆಯೇ ಪ್ರಯಾಣ ಮುಂದುವರಿಸಬಹುದು. ಪ್ರಯಾಣಿಕರ ಸಮಯವೂ ಉಳಿಯಲಿದೆ. ‘ಪ್ಯಾಕೇಜ್‌–5’ ಕಾಮಗಾರಿಯ ಕೊನೆಯ ಹಂತದಲ್ಲಿ ಈ ಸಂಪರ್ಕ ಸೇತು ಮಾರ್ಗ ನಿರ್ಮಾಣವಾಗಲಿದೆ.

ಹೊಸ ಬೈಪಾಸ್‌:

ಶ್ರೀರಂಗಪಟ್ಟಣದ ಹೊರವಲಯದಿಂದ ಶುರುವಾಗಿ, ರಂಗನತಿಟ್ಟು–ಬೆಳಗೊಳ ಮೂಲಕ ಸಾಗುವ ಹೆದ್ದಾರಿಯು ಇಲವಾಲದ ತರುವಾಯವಷ್ಟೇ ಮೈಸೂರಿನ ಸಂಪರ್ಕಕ್ಕೆ ಬರಲಿದೆ. ನಂತರವೂ ಯಲಚಹಳ್ಳಿ–ಬಿಳಿಕೆರೆ ಮಾರ್ಗದಲ್ಲಿ ಮುಂದುವರಿಯಲಿದ್ದು, ಹಳೇ ರಸ್ತೆಯ ಸಂಪರ್ಕಕ್ಕೆ ಸಿಗುವುದಿಲ್ಲ. ಬಹುತೇಕ ಹಳ್ಳಿಗಳ ನಡುವೆಯೇ ಹೊಸ ಹೆದ್ದಾರಿ ಸಾಗಿದ್ದು, ಅನೇಕ ಊರುಗಳು ಹೆದ್ದಾರಿಯ ಸಂಪರ್ಕ ಪಡೆಯುವುದು ವಿಶೇಷ.

ADVERTISEMENT

ಕುಶಾಲನಗರ ವ್ಯಾಪ್ತಿಯಲ್ಲಿ 11.6 ಕಿ.ಮೀ, ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ 19 ಕಿ.ಮೀ. ಹಾಗೂ ಹುಣಸೂರು–ಮೈಸೂರು ವ್ಯಾಪ್ತಿಯಲ್ಲಿ 25 ಕಿ.ಮೀ ಉದ್ದದ ಹೊಸ ಬೈಪಾಸ್‌ ರಸ್ತೆಗಳು ನಿರ್ಮಾಣವಾಗುತ್ತಿವೆ. ಈ ಪಟ್ಟಣಗಳ ಒಳಗೆ ಪ್ರವೇಶಿಸದೆಯೇ ಪ್ರಯಾಣಿಕರು ಹೊಸ ಹೆದ್ದಾರಿಯಲ್ಲಿ ಕುಶಾಲನಗರದ ಆಚೆಗೆ ತೆರಳಬಹುದು.

‘ಬೆಂಗಳೂರು–ಮಡಿಕೇರಿ ನಡುವಿನ ಪ್ರಯಾಣಕ್ಕೆ ಈ ಮೊದಲು 6–7 ಗಂಟೆ ಬೇಕಿತ್ತು. ಹೆದ್ದಾರಿ ಕಾಮಗಾರಿ ಪೂರ್ಣಗೊಂಡರೆ ಪ್ರಯಾಣದ ಅವಧಿ ನಾಲ್ಕು ಗಂಟೆಗೆ ಇಳಿಯಲಿದೆ’ ಎನ್ನುತ್ತಾರೆ ಪ್ರಾಧಿಕಾರದ ಅಧಿಕಾರಿಗಳು.

‘ಹೆದ್ದಾರಿ ಯೋಜನೆಗಳಿಗೆ ಭೂಸ್ವಾಧೀನವೇ ದೊಡ್ಡ ಸಮಸ್ಯೆ. ಹಳೇ ರಸ್ತೆಯ ವಿಸ್ತರಣೆ ಬದಲು ಕಡಿಮೆ ಖರ್ಚಿನಲ್ಲಿ ಹೊಸ ಮಾರ್ಗವನ್ನೇ ನಿರ್ಮಿಸಬಹುದು. ಕಾಮಗಾರಿಗಳೂ ಸಲೀಸಾಗಿ ಸಾಗುತ್ತವೆ’ ಎನ್ನುತ್ತಾರೆ ಅವರು.

ಸದ್ಯಕ್ಕಿಲ್ಲ ಸರ್ವೀಸ್ ರಸ್ತೆ

ಬೆಂಗಳೂರು–ಮೈಸೂರು ಹೆದ್ದಾರಿ ಮಾದರಿಯಲ್ಲಿಯೇ ಮೈಸೂರು–ಕುಶಾಲನಗರ ಹೆದ್ದಾರಿಗೂ ಎರಡೂ ಕಡೆ ಸರ್ವೀಸ್ ರಸ್ತೆ ನಿರ್ಮಿಸಬೇಕು. ಸ್ಥಳೀಯರ ಒಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹ. ಈ ಕುರಿತು ಹುಣಸೂರು ಪಿರಿಯಾಪಟ್ಟಣ ಸೇರಿ ವಿವಿಧೆಡೆ ಪ್ರತಿಭಟನೆಗಳೂ ನಡೆಯುತ್ತಿವೆ. ಆದರೆ ಸದ್ಯಕ್ಕೆ ಸರ್ವೀಸ್ ರಸ್ತೆ ನಿರ್ಮಾಣ ಅನುಮಾನ. ‘ಯೋಜನೆಗೆ ಅಗತ್ಯವಾದ 535 ಹೆಕ್ಟೇರ್‌ನಷ್ಟು ಭೂಮಿಯನ್ನಷ್ಟೇ ರಾಜ್ಯ ಸರ್ಕಾರ ನೀಡಿದೆ. ಅದರಲ್ಲಿ ನಾಲ್ಕು ಪಥದ ಹೆದ್ದಾರಿ ನಿರ್ಮಾಣವಾಗಲಿದೆ. ಸರ್ವೀಸ್‌ ರಸ್ತೆ ನಿರ್ಮಾಣ ಯೋಜನೆಯಲ್ಲಿ ಇಲ್ಲ. ಬೇಡಿಕೆ ಬಂದರೆ ಕೇಂದ್ರ ಸರ್ಕಾರ ಪರಿಶೀಲಿಸುತ್ತದೆ’ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದರು.

7–8 ಕಿ.ಮೀ ಕಾಮಗಾರಿ ಸ್ಥಗಿತ

‘ಸರ್ವೀಸ್ ರಸ್ತೆ ನಿರ್ಮಾಣಕ್ಕೆ ರೈತರು ಪಟ್ಟು ಹಿಡಿದಿರುವುದರಿಂದ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಬೊಮ್ಮೂರು ಅಗ್ರಹಾರದಿಂದ ಸುಮಾರು 7–8 ಕಿ.ಮೀ. ಉದ್ದದ ರಸ್ತೆ ಕಾಮಗಾರಿಯು 2025ರ ಆಗಸ್ಟ್‌ನಿಂದ ಸ್ಥಗಿತಗೊಂಡಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ. ‘ಅಕ್ಕ‍ಪಕ್ಕದ ಜಮೀನುಗಳಿಗೆ ಹೋಗಲು ಸರ್ವೀಸ್‌ ರಸ್ತೆ ಬೇಕೆ ಬೇಕು’ ಎಂದು ತಡೆ ಒಡ್ಡಿದ್ದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿ ಅನುವು ಮಾಡಿದರೆ ಇಲ್ಲಿ ಮಾತ್ರ ಬೇಡಿಕೆಯನ್ನು ಪರಿಶೀಲಿಸಲಾಗುವುದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.