ADVERTISEMENT

ದಸರಾ: ರಸ್ತೆ ಸಂಚಾರ ಮಾರ್ಗ ಬದಲು

ವಾಹನ ನಿಲುಗಡೆ ನಿಷೇಧಿಸಿ ಆದೇಶ ಹೊರಡಿಸಿದ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 16:14 IST
Last Updated 15 ಅಕ್ಟೋಬರ್ 2020, 16:14 IST
ಮೈಸೂರು ಅರಮನೆ
ಮೈಸೂರು ಅರಮನೆ   

ಮೈಸೂರು: ದಸರಾ ಸಂದರ್ಭದಲ್ಲಿ ಸುಗಮ ಸಂಚಾರಕ್ಕಾಗಿ ನಗರದ ಹಲವು ರಸ್ತೆಗಳಲ್ಲಿ ಅ.17ರಿಂದ 26ರವರೆಗೂ, ಪ್ರತಿ ದಿನ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಏಕಮುಖ ಸಂಚಾರ ಜಾರಿಗೊಳಿಸಿ ಮೈಸೂರು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ಅರಮನೆಯ ಸುತ್ತಲಿನ ರಸ್ತೆಗಳಾದ ಶಿವರಾತ್ರಿ ರಾಜೇಂದ್ರ ವೃತ್ತ-ಕುಸ್ತಿ ಅಖಾಡ ಜಂಕ್ಷನ್-ಬಿ.ಎನ್.ರಸ್ತೆ-ಜಯಚಾಮರಾಜ ಒಡೆಯರ್ ವೃತ್ತ-ಆಲ್ಬರ್ಟ್ ವಿಕ್ಟರ್ ರಸ್ತೆ-ಚಾಮರಾಜ ಒಡೆಯರ್ ವೃತ್ತ-ಆಲ್ಬರ್ಟ್ ವಿಕ್ಟರ್ ರಸ್ತೆ-ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ-ನ್ಯೂ ಸಯ್ಯಾಜಿರಾವ್ ರಸ್ತೆ-ಬಸವೇಶ್ವರ ವೃತ್ತ-ಚಾಮರಾಜ ಜೋಡಿ ರಸ್ತೆ-ಶಿವರಾತ್ರಿ ರಾಜೇಂದ್ರ ವೃತ್ತ... ಈ ರಸ್ತೆಗಳಲ್ಲಿ ಅರಮನೆಯನ್ನು ಮಧ್ಯಬಿಂದುವನ್ನಾಗಿ ಪರಿಗಣಿಸಿ, ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ದ ದಿಕ್ಕಿನಲ್ಲಿ ಮಾತ್ರ (ಆಂಟಿ ಕ್ಲಾಕ್ ವೈಸ್) ವಾಹನ ಸಂಚರಿಸಲು ಅವಕಾಶ ಕೊಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮೇಲ್ಕಂಡ ರಸ್ತೆಗಳಲ್ಲಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿನಲ್ಲಿ ಮಾತ್ರ (ಕ್ಲಾಕ್ ವೈಸ್) ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ (ಬಸವೇಶ್ವರ ವೃತ್ತದಿಂದ ಪೂರ್ವಕ್ಕೆ ಶಿವರಾತ್ರಿ ರಾಜೇಂದ್ರ ವೃತ್ತದವರೆಗಿನ ರಸ್ತೆ ಹೊರತುಪಡಿಸಿ) ಎಂದಿದ್ದಾರೆ.

ADVERTISEMENT

ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ, ಸಯ್ಯಾಜಿರಾವ್ ರಸ್ತೆಯಲ್ಲಿ ಬರುವಂತಹ ವಾಹನಗಳು ಬಾಟಾ ಜಂಕ್ಷನ್-ವಿಶ್ವೇಶ್ವರಯ್ಯ ವೃತ್ತ-ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಮುಂದುವರೆದು, ಎಲ್ಲಮ್ಮಾಂಬ ದೇವಸ್ಥಾನ ಜಂಕ್ಷನ್ ಬಳಿ ಬಲ ತಿರುವು ಪಡೆದು, ಕಬೀರ್ ರಸ್ತೆಯಲ್ಲಿ ಶ್ರೀ ಟಾಕೀಸ್ ಜಂಕ್ಷನ್-ಮಂಡಿ ಪೊಲೀಸ್ ಠಾಣಾ ಜಂಕ್ಷನ್-ಅಶೋಕ ರಸ್ತೆ-ಮಹಾವೀರ ವೃತ್ತ-ಚಾಮರಾಜ ಒಡೆಯರ್ ವೃತ್ತದ ಈ ರಸ್ತೆಗಳ ಮಧ್ಯದ ಪ್ರದೇಶವನ್ನು ಬಿಂದುವನ್ನಾಗಿ ಪರಿಗಣಿಸಿ, ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ಮಾತ್ರ (ಕ್ಲಾಕ್ ವೈಸ್) ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದಾರೆ.

ಕಬೀರ್ ರಸ್ತೆಯಲ್ಲಿ ಅಶೋಕ ರಸ್ತೆ ಕಡೆಯಿಂದ ನ್ಯೂ ಸಯ್ಯಾಜಿರಾವ್ ರಸ್ತೆ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಅಶೋಕ ರಸ್ತೆಯಿಂದ ನ್ಯೂ ಸಯ್ಯಾಜಿರಾವ್ ರಸ್ತೆ ಕಡೆಗೆ ಬರುವಂತಹ ವಾಹನಗಳು ಅಕ್ಬರ್ ರಸ್ತೆ ಮಾರ್ಗವಾಗಿ, ರಾಗಿ ಮಂಡಿ ಜಂಕ್ಷನ್, ಮಂಡಿ ಮಾರುಕಟ್ಟೆ ಜಂಕ್ಷನ್‌ವರೆಗೆ ಸಂಚರಿಸಲು ಅವಕಾಶವಿದೆ.

ಮಂಡಿ ಮಾರುಕಟ್ಟೆ ಜಂಕ್ಷನ್‌ನಿಂದ ಅಕ್ಬರ್ ರಸ್ತೆ ಮಾರ್ಗವಾಗಿ ಅಶೋಕ ರಸ್ತೆ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನೆಹರು ವೃತ್ತದಿಂದ ಬಿ.ಎನ್.ರಸ್ತೆ ಜಂಕ್ಷನ್‌ವರೆಗೆ ಪಶ್ಚಿಮದಿಂದ ಪೂರ್ವಕ್ಕೆ ಏಕಮುಖ ವಾಹನ ಸಂಚಾರಕ್ಕೆ ಅವಕಾಶವಿದೆ. ಪೂರ್ವದಿಂದ ಪಶ್ಚಿಮಕ್ಕೆ ಎಲ್ಲಾ ಮಾದರಿಯ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಬನುಮಯ್ಯ ರಸ್ತೆಯಲ್ಲಿ ಚಾಮರಾಜ ಜೋಡಿ ರಸ್ತೆ ಜಂಕ್ಷನ್‍ನಿಂದ ಬನುಮಯ್ಯ ಚೌಕದವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶವಿದ್ದು, ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ತ್ಯಾಗರಾಜ ರಸ್ತೆಯಲ್ಲಿ ಎನ್.ಮಾಧುರಾವ್ ವೃತ್ತದಿಂದ ಚಾಮರಾಜ ಜೋಡಿ ರಸ್ತೆ ಜಂಕ್ಷನ್‍ವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶವಿದ್ದು, ಈ ಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್‌ ಮಾಹಿತಿ ನೀಡಿದ್ದಾರೆ.

ವಾಹನ ನಿಲುಗಡೆಗೂ ನಿಷೇಧ
ಅಂಬಾವಿಲಾಸ ಅರಮನೆ ಸುತ್ತಮುತ್ತ, ಸಯ್ಯಾಜಿರಾವ್ ರಸ್ತೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ, ಪುರಂದರ ರಸ್ತೆಯಲ್ಲಿ ಬಿ.ರಾಚಯ್ಯ ವೃತ್ತದಿಂದ ಬಿ.ಎನ್.ರಸ್ತೆ ಜಂಕ್ಷನ್‌ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಬಿ.ಎನ್.ರಸ್ತೆಯಲ್ಲಿ ಶಿವರಾತ್ರಿ ರಾಜೇಂದ್ರ ವೃತ್ತದಿಂದ ಜಯಚಾಮರಾಜೇಂದ್ರ ವೃತ್ತದವರೆಗೆ, ಆಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ಜಯಚಾಮರಾಜೇಂದ್ರ ವೃತ್ತದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದವರೆಗೆ, ಅಶೋಕ ರಸ್ತೆಯಲ್ಲಿ ನೆಹರು ವೃತ್ತದಿಂದ ಮಹಾವೀರ ವೃತ್ತದವರೆಗೆ ವಾಹನ ನಿಲುಗಡೆಗೆ ಅವಕಾಶವಿಲ್ಲ.

ಅಶೋಕ ರಸ್ತೆಯಲ್ಲಿ ಮಹಾವೀರ ವೃತ್ತದಿಂದ ಜಯಚಾಮರಾಜ ವೃತ್ತದವರೆಗೆ ಹಾಗೂ ಅರಮನೆಯ ಬಲರಾಮ ದ್ವಾರದ ಮುಂಭಾಗ ಇರುವ ಖಾಲಿ ಸ್ಥಳದಲ್ಲೂ ವಾಹನ ನಿಲ್ಲಿಸುವಂತಿಲ್ಲ.

ಡಾ.ರಾಜ್‍ಕುಮಾರ್ ವೃತ್ತದಿಂದ ಟಿ.ಎನ್.ನರಸಿಂಹಮೂರ್ತಿ ವೃತ್ತದವರೆಗೆ, ‌ವಸ್ತು ಪ್ರರ್ದಶನ ಮುಂಭಾಗದ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಬಿ.ಎನ್.ರಸ್ತೆ ಜಂಕ್ಷನ್‍ನಿಂದ ಶಾಲಿವಾಹನ (ಮೃಗಾಲಯದ ರಸ್ತೆ) ರಸ್ತೆ ಜಂಕ್ಷನ್‍ವರೆಗೆ, ಇಟ್ಟಿಗೆಗೂಡಿನ ಹೊಸ ಬೀದಿ 5ನೇ ತಿರುವು ರಸ್ತೆಯಲ್ಲಿ ಶಾಲಿವಾಹನ (ಮೃಗಾಲಯದ ರಸ್ತೆ) ರಸ್ತೆ ಜಂಕ್ಷನ್‍ನಿಂದ ವಸ್ತು ಪ್ರರ್ದಶನದ ಪೂರ್ವ ದ್ವಾರದವರೆಗೆ ವಾಹನ ನಿಲುಗಡೆಗೆ ಅವಕಾಶವಿಲ್ಲ.

ಮಾನಸರ ರಸ್ತೆಯಲ್ಲಿ ವಾಣಿವಿಲಾಸ ರಸ್ತೆ ಜಂಕ್ಷನ್‍ನಿಂದ ಲೋಕರಂಜನ್‍ರಸ್ತೆ ಜಂಕ್ಷನ್‌ವರೆಗೆ, ಮಲೈಮಹದೇಶ್ವರ ರಸ್ತೆಯಲ್ಲಿ ಬಿ.ಎನ್.ರಸ್ತೆ ಜಂಕ್ಷನ್‍ನಿಂದ (ಛತ್ರಿ ಮರ) ಪೂರ್ವಕ್ಕೆ ಚನ್ನಯ್ಯ ವೃತ್ತದವರೆಗೆ, ಸರ್ಕಾರಿ ಭವನದ ರಸ್ತೆಯಲ್ಲಿ ಸರ್ಕಾರಿ ಭವನದ ದಕ್ಷಿಣ ದ್ವಾರದ ಜಂಕ್ಷನ್‍ನಿಂದ ದಕ್ಷಿಣಕ್ಕೆ ಜಯಚಾಮರಾಜೇಂದ್ರ ಒಡೆಯರ್ ವೃತ್ತದವರೆಗೆ ವಾಹನ ನಿಲ್ಲಿಸುವಂತಿಲ್ಲ ಎಂದು ಚಂದ್ರಗುಪ್ತ ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.