ತಿ.ನರಸೀಪುರ: ಒಳ ಮೀಸಲಾತಿ ಸಂಪೂರ್ಣ ಜಾರಿಗೆ ಆಗ್ರಹಿಸಿ ಮಾದಿಗ ಸಮಾಜದ ಮುಖಂಡರು ಮಂಗಳವಾರ ಮತ ಭಿಕ್ಷೆ ಪ್ರತಿಭಟನೆ ಮಾಡುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
ಪಟ್ಟಣದ ಗೋಪಾಲಪುರ ಬಳಿಯ ಎನ್.ರಾಚಯ್ಯ ಸ್ಮಾರಕ ಮೈದಾನದ ಬಳಿ ಮಾದಿಗರ ಮೀಸಲಾತಿ ಕ್ರಾಂತಿಕಾರಿ ಹೋರಾಟ ಸಮಿತಿಯ ಮುಖಂಡರು ಮೌನ ಪ್ರತಿಭಟನೆ ಮಾಡಿದರು.
ಮತ್ತೊಂದು ತಂಡದಲ್ಲಿದ್ದ ಸಮಾಜದ ಮುಖಂಡರು, ಖಾಸಗಿ ಬಸ್ ನಿಲ್ದಾಣದಿಂದ ಸ್ಮಾರಕದ ಮೈದಾನದವರೆಗೆ ಕೊರಳಿಗೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭಾವಚಿತ್ರ ಹಾಕಿಕೊಂಡು, ಕೈಯಲ್ಲಿ ಮಡಿಕೆ ಹಿಡಿದು, ತಮಟೆ ಬಾರಿಸುತ್ತಾ ಮತ ಭಿಕ್ಷೆ ಪ್ರತಿಭಟನೆ ಮೆರವಣಿಗೆ ನಡೆಸಿದ ವೇಳೆ ಪೋಲೀಸರು ವಶಕ್ಕೆ ಪಡೆದರು. ಮೌನ ಪ್ರತಿಭಟನೆ ಮಾಡುತ್ತಿದ್ದವರನ್ನೂ ಬಂಧಿಸಿ ನಂಜನಗೂಡಿಗೆ ಕರೆದೊಯ್ದರು.
ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನನಿರತರು, ‘ಸಂಪೂರ್ಣ ಒಳ ಮೀಸಲಾತಿ ಜಾರಿಗೊಳಿಸಲು ಮಹದೇವಪ್ಪ ಅವರೇ ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇಂದು ಅನಾಗರಿಕ ಪ್ರತಿಭಟನೆ ಮಾಡಿದ್ದೇವೆ, ಮುಂದೆ ನಮ್ಮ ಹೋರಾಟ ಬೇರೆ ಬೇರೆ ರೀತಿಯಲ್ಲಿ ನಡೆಯಲಿದೆ’ ಎಂದು ಮುಖಂಡ ಮರಡಿಪುರ ರವಿಕುಮಾರ್ ತಿಳಿಸಿದರು.
ಹೋರಾಟಗಾರರಾದ ಬಿ.ಆರ್. ಭಾಸ್ಕರ್ ಪ್ರಸಾದ್, ಹಿರಿಯ ವಕೀಲ ಎಸ್.ಅರುಣ್ ಕುಮಾರ್, ಮಂಜುನಾಥ್, ರಾಜೇಶ್, ಮಲಿಯೂರು ಶಂಕರ್, ಕುಮಾರ್, ಭೈರಾಪುರ ಮಹದೇವ, ಪ್ರಸಾದ್, ರಾಜೇಂದ್ರ, ನಂಜುಂಡ, ಸುಂದ್ರೇಶ್, ಭಾಸ್ಕರ್ ಕೆಬ್ಬೆ, ಕಳ್ಳಿಪುರ ನಾರಾಯಣ, ಕುಪ್ಯಾ ಶಂಭಯ್ಯಾ, ವೇಣುಗೋಪಾಲ್, ಪಾಪಣ್ಣ, ಎನ್. ತಿಪ್ಪೇಶ್, ಎಚ್. ನೀಲಕಂಠ, ಎಲ್.ವಿ. ಸುರೇಶ, ರಡ್ಡಿ, ಹನುಮೇಶ್ ಬೆರಿ, ಗುಡೆಮಾರನಹಳ್ಳಿ ನಾಗರಾಜು, ಅವಿನಾಶ್, ವಿನೋದ್, ಹನುಮೇಶ್, ಶಿವಶಂಕರ, ಭೀಮರಾಯ, ನರಸಿಂಹಲು, ಹನುಮೇಶ್ ಆರೋಲಿ, ಆಂಜನೇಯ, ರಾಹುಲ್ ಮಹಾದೇವಯ್ಯ, ಸರಗೂರು ಪುಟ್ಟಣ್ಣ, ದಾದಾಪಿರ್, ಹುಣಸೂರು ರಾಚಪ್ಪ, ಲಕ್ಷ್ಮಣ ಭಂಡಾರಿ ಹಾಜರಿದ್ದರು.
ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.