
ಮೈಸೂರು: ‘ಒಳಮೀಸಲಾತಿ ಕಲ್ಪಿಸಲು ದತ್ತಾಂಶ ಸಂಗ್ರಹಕ್ಕಾಗಿ ನಡೆದಿರುವ ಸಮೀಕ್ಷೆಯ ವರದಿಯನ್ನು ನ್ಯಾ.ಎಚ್.ಎನ್. ನಾಗಮೋಹನದಾಸ್ ಅವರು 15 ದಿನಗಳೊಳಗೆ ಸರ್ಕಾರಕ್ಕೆ ಸಲ್ಲಿಸಲಿದ್ದು, ವರದಿ ಬಂದ ಒಂದು ತಿಂಗಳಲ್ಲಿ ಮುಖ್ಯಮಂತ್ರಿ ಜಾರಿಗೊಳಿಸಲಿದ್ದಾರೆ’ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿ ಶುಕ್ರವಾರ ನಡೆದ ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ನೋಂದಣಿ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು.
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಜಿ.ಪರಮೇಶ್ವರ, ಶಿವರಾಜ ತಂಗಡಗಿ ಸೇರಿದಂತೆ ಎಲ್ಲರೂ ಬೆಂಬಲ ಸೂಚಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಬಳಿಕ ಸಿದ್ದರಾಮಯ್ಯ ಅವರು ಯಾರು ಒಪ್ಪಲಿ, ಬಿಡಲಿ ನಾನು ಮಾಡುತ್ತೇನೆ ಎಂದು ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಂಡಿದ್ದು, ಎಲ್ಲಾ ಕಡೆಗಳಲ್ಲೂ ಇದನ್ನು ಹೇಳಿದ್ದಾರೆ. ತಾಳ್ಮೆಯಿಂದ ಕಾಯಬೇಕು’ ಎಂದು ಹೇಳಿದರು.
‘ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ಪಡೆಯಲು ₹500, ಅಜೀವ ಸದಸ್ಯತ್ವಕ್ಕೆ ₹25 ಸಾವಿರ, ಪೋಷಕ ಸದಸ್ಯತ್ವ ₹50 ಸಾವಿರ, ಮಹಾ ಪೋಷಕ ಸದಸ್ಯತ್ವಕ್ಕೆ ₹1ಲಕ್ಷ ನಿಗದಿಪಡಿಸಿದ್ದು, ಪ್ರತಿ ತಾಲ್ಲೂಕಿಗೆ ಕನಿಷ್ಠ ಒಬ್ಬರನ್ನಾದರೂ ಸದಸ್ಯರನ್ನಾಗಿ ಮಾಡಬೇಕು. ಈ ಹಣವನ್ನು ಠೇವಣಿ ಇಟ್ಟು ಬಂದ ಹಣದಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು ತೆರೆದು ತರಬೇತಿ ನೀಡಲಾಗುವುದು’ ಎಂದು ತಿಳಿಸಿದರು.
‘12 ವರ್ಷಗಳ ಹಿಂದೆಯೇ ಸಂಘ ನಡೆಯುತ್ತಿದ್ದು, ಸರಿಯಾದ ನೆಲೆ ಇಲ್ಲದ ಕಾರಣ ಒಕ್ಕಲಿಗರ ಸಂಘ, ವೀರಶೈವ ಮಹಾಸಭಾ, ಕುರುಬರ ಸಂಘಗಳ ರೀತಿಯಲ್ಲೇ ‘ಮಾದರ ಮಹಾಸಭಾ ಭವನ’ ಕಟ್ಟಲು ತೀರ್ಮಾನಿಸಿದ್ದು, ಮೂರು ಕಡೆಗಳಲ್ಲಿ ಜಾಗ ಗುರುತಿಸಲಾಗಿದೆ. ಸಂಘದ ಪದಾಧಿಕಾರಗಳು ಸಮುದಾಯದ ಸದಸ್ಯತ್ವ ನೊಂದಣಿ ಮಾಡಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.
‘ಈ ಸಂಘಕ್ಕೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಸುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಸಮುದಾಯದ ಜನರ ಸಂಕಷ್ಟಕ್ಕೆ ಸ್ಪಂದಿಸಲು ನೆರವಾಗುವಂತೆ ದೊಡ್ಡಮಟ್ಟದಲ್ಲಿ ಈ ಸಂಘವನ್ನು ನಿರ್ಮಿಸಲು ಎಲ್ಲರೂ ಪಕ್ಷಾತೀತ, ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು’ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಸಿ.ರಮೇಶ್, ಧರ್ಮಸೇನ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುಧಾ ಮಹದೇವಯ್ಯ, ಸಚಿವರ ಆಪ್ತ ಕಾರ್ಯದರ್ಶಿ ಎಚ್.ನಟರಾಜ್, ಮುಖಂಡರಾದ ಶಿವಪ್ಪ, ಪುರುಷೋತ್ತಮ್, ರಾಮಕೃಷ್ಣ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಸಮುದಾಯದ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.