ADVERTISEMENT

‘ಕಾವೇರಿ ಕೂಗು’ ಅಭಿಯಾನಕ್ಕೆ ಉತ್ತಮ ಸ್ಪಂದನೆ – ಜಗ್ಗಿ ವಾಸುದೇವ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 1:10 IST
Last Updated 6 ಸೆಪ್ಟೆಂಬರ್ 2019, 1:10 IST
ಮೈಸೂರಿನಲ್ಲಿ ಈಶ ಫೌಂಡೇಷನ್‌ ವತಿಯಿಂದ ಗುರುವಾರ ನಡೆದ ಸಮಾವೇಶದಲ್ಲಿ ‘ಕಾವೇರಿ ಕೂಗು’ ಅಭಿಯಾನದ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. ಸಂಸದ ಪ್ರತಾಪಸಿಂಹ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಈಶ ಫೌಂಡೇಷನ್‌ನ ಜಗ್ಗಿ ವಾಸುದೇವ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಶಾಸಕ ಎನ್.ಮಹೇಶ್ ಇದ್ದಾರೆ
ಮೈಸೂರಿನಲ್ಲಿ ಈಶ ಫೌಂಡೇಷನ್‌ ವತಿಯಿಂದ ಗುರುವಾರ ನಡೆದ ಸಮಾವೇಶದಲ್ಲಿ ‘ಕಾವೇರಿ ಕೂಗು’ ಅಭಿಯಾನದ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. ಸಂಸದ ಪ್ರತಾಪಸಿಂಹ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಈಶ ಫೌಂಡೇಷನ್‌ನ ಜಗ್ಗಿ ವಾಸುದೇವ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಶಾಸಕ ಎನ್.ಮಹೇಶ್ ಇದ್ದಾರೆ   

ಮೈಸೂರು: ಈಶ ಫೌಂಡೇಷನ್ ವತಿಯಿಂದ ಆರಂಭಿಸಲಾಗಿರುವ ‘ಕಾವೇರಿ ಕೂಗು’ ಅಭಿಯಾನಕ್ಕೆ ಭರಪೂರ ಸ್ಪಂದನೆ ವ್ಯಕ್ತವಾಗಿದ್ದು, 6.70 ಲಕ್ಷ ಸಸಿಗಳಿಗೆ ತಗಲುವ ವೆಚ್ಚವನ್ನು ಸಾರ್ವಜನಿಕರು ಇದುವರೆಗೂ ದೇಣಿಗೆ ನೀಡಿದ್ದಾರೆ ಎಂದು ಫೌಂಡೇಷನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಗುರುವಾರ ಇಲ್ಲಿ ಹೇಳಿದರು.

ಒಂದು ಸಸಿಗೆ ₹ 42ರಂತೆ ದೇಣಿಗೆ ಸಂಗ್ರಹಿಸಲಾಗುತ್ತಿದ್ದು, ನಟಿ ಕಂಗನಾ ರನೋಟ್‌ ಒಬ್ಬರೇ ಒಂದು ಲಕ್ಷ ಸಸಿಗಳಿಗೆ ತಗಲುವ ವೆಚ್ಚವನ್ನು ನೀಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರೈತ ಸಂಘಟನೆಗಳು ಅಭಿಯಾನಕ್ಕೆ ಏಕೆ ವಿರೋಧ ವ್ಯಕ್ತಪಡಿಸುತ್ತಿವೆ ಎಂಬುದು ತಿಳಿದಿಲ್ಲ. ಆದರೆ, ನಿಜವಾದ ರೈತರು ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಅವರನ್ನು ಅರಣ್ಯ ಕೃಷಿಯ ಕಡೆಗೆ ಹೊರಳಿಸುವ ಪ್ರಯತ್ನ ನಡೆದಿದೆ ಎಂದರು.

ತಮ್ಮ ಜಮೀನಿನಲ್ಲಿ ಬೆಳೆದ ಯಾವುದೇ ಜಾತಿಯ ಮರಗಳನ್ನು ಕತ್ತರಿಸುವ ಸ್ವಾತಂತ್ರ್ಯವನ್ನು ಸರ್ಕಾರ ರೈತರಿಗೆ ನೀಡಬೇಕು. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸಿವೆ ಎಂದು ತಿಳಿಸಿದರು.

‘ಅರಣ್ಯ ಕೃಷಿಯಿಂದ ಆಹಾರದ ಬೆಲೆ ಹೆಚ್ಚಾಗುತ್ತದೆ ಎಂಬ ವಾದದಲ್ಲಿ ಹುರುಳಿಲ್ಲ. ರೈತರು ತಮ್ಮ ಎಲ್ಲ ಜಮೀನಿನಲ್ಲೂ ಮರಗಳನ್ನು ಬೆಳೆಸಬೇಕು ಎಂದೇನೂ ನಾವು ಹೇಳುತ್ತಿಲ್ಲ. ಅವರ ಒಂದಿಷ್ಟು ಭೂಮಿಯಲ್ಲಿ ಮರಗಳನ್ನು ಬೆಳೆಸಿ, ಉಳಿದ ಭೂಮಿಯಲ್ಲಿ ಕೃಷಿ ಮಾಡಬಹುದು. ಮರಗಳ ನಡುವೆಯೇ ಆಹಾರದ ಬೆಳೆಗಳನ್ನು ಬೆಳೆಯುವಂತಹ ತಂತ್ರಜ್ಞಾನ ಇದೆ. ಇದನ್ನು ಅಳವಡಿಸಿಕೊಳ್ಳಬಹುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಇದಕ್ಕೂ ಮುನ್ನ ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ನಡೆದ ಸಮಾವೇಶದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸಂಸದ ಪ್ರತಾಪಸಿಂಹ, ಕೊಳ್ಳೇಗಾಲದ ಶಾಸಕ ಎನ್.ಮಹೇಶ್ ಭಾಗವಹಿಸಿದ್ದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಜೀವನದಿಗಳು ಮುಂದೆ ಬತ್ತಿ ಹೋಗಲಿವೆ ಎಂಬ ಎಚ್ಚರಿಕೆ ಗಂಟೆ ಮೊಳಗುತ್ತಿದೆ. ಅರಣ್ಯ ಕೃಷಿ ಇದನ್ನು ಉಳಿಸುವ ಉತ್ತಮ ಹಾದಿ’ ಎಂದು ಹೇಳಿದರು.

ಸಂಸದ ಪ್ರತಾಪಸಿಂಹ ಮಾತನಾಡಿ, ‘ಅರಣ್ಯ ಇಲಾಖೆಯ ಮಾಹಿತಿಯಂತೆ ಕಳೆದ 10 ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ 1 ಲಕ್ಷ ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡಲಾಗಿದೆ. ಒಂದು ಮರ ಕಡಿದರೆ ಅದರ ಆಸುಪಾಸಿನ 6 ಮರಗಳ ಬೇರುಗಳು ಸಡಿಲವಾಗುತ್ತವೆ. ಇದರಿಂದ ಅನಾಹುತಗಳು ಸಂಭವಿಸುತ್ತಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.