ಮೈಸೂರು: ಇಲ್ಲಿನ ಕೆಆರ್‌ಎಸ್ ರಸ್ತೆಯಲ್ಲಿರುವ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆ ಆವರಣದಲ್ಲಿ ‘ವಾಹನಗಳ ನಿಲುಗಡೆ ಶುಲ್ಕ’ ದುಬಾರಿ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರಿ ಆಸ್ಪತ್ರೆಯಾದ ಇಲ್ಲಿಗೆ ಹೃದ್ರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಗೆ, ಸಮಾಲೋಚೆಗೆ, ತಪಾಸಣೆಗೆ, ದಾಖಲಾತಿಗಳನ್ನು ಪಡೆಯುವುದಕ್ಕೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ನಿತ್ಯ ನೂರಾರು ಮಂದಿ ಬರುತ್ತಾರೆ. ರೋಗಿಗಳೊಂದಿಗೆ ಅವರ ಕಡೆಯವರು, ಪೋಷಕರು, ಸ್ನೇಹಿತರು ಜತೆಗೆ ಆಗಮಿಸುತ್ತಾರೆ. ಮೈಸೂರು ನಗರ ಹಾಗೂ ಜಿಲ್ಲೆಯವರೊಂದಿಗೆ ನೆರೆಯ ಚಾಮರಾಜನಗರ, ಮಂಡ್ಯ, ಕೊಡಗು ಮೊದಲಾದ ಕಡೆಗಳಿಂದಲೂ ಇಲ್ಲಿಗೆ ರೋಗಿಗಳು ಬರುತ್ತಾರೆ. ಹೀಗೆ, ಬಂದವರು ಸ್ವಂತ ವಾಹನ ತಂದಿದ್ದರೆ ‘ಪಾರ್ಕಿಂಗ್ ಶುಕ್ಕ’ದ ‘ಹೊರೆ’ಯನ್ನು ಹೊರಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ!
‘ನಗರದ ಖಾಸಗಿ ಆಸ್ಪತ್ರೆಗಳ ಆವರಣದಲ್ಲಿ ವಿಧಿಸುವ ಶುಲ್ಕಕ್ಕಿಂತಲೂ ಹೆಚ್ಚಿನ ಶುಲ್ಕವನ್ನು ಇಲ್ಲಿ ಟೆಂಡರ್ ಪಡೆದಿರುವವವರು ತೆಗೆದುಕೊಳ್ಳುತ್ತಿದ್ದಾರೆ. ಜಿಎಸ್‌ಟಿ (ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್) ಸೇರಿಸಿ ಶುಲ್ಕ ವಿಧಿಸಲಾಗುತ್ತಿದೆ ಎಂದು ಫಲಕದಲ್ಲಿ ಹಾಕಲಾಗಿದೆ! ಆದರೆ, ಇದನ್ನು ಆಸ್ಪತ್ರೆಯ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಾರದೇ ಕೇಂದ್ರ ಕಚೇರಿಯಿಂದಲೇ ಟೆಂಡರ್ ಮಾಡಿ ಶುಲ್ಕ ನಿಗದಿಪಡಿಸಲಾಗಿದೆ’ ಎನ್ನಲಾಗುತ್ತಿದೆ.
ಎಷ್ಟಿದೆ ಶುಲ್ಕ?: ದ್ವಿಚಕ್ರ ವಾಹನಗಳಿಗೆ ಮೊದಲ 4 ತಾಸಿಗೆ ₹ 15 ವಿಧಿಸಲಾಗುತ್ತಿದೆ! 4ರಿಂದ 6 ಗಂಟೆಗೆ ₹ 20, 6ರಿಂದ 8 ತಾಸಿಗೆ ₹ 25, 8ರಿಂದ 10 ತಾಸಿಗೆ ₹ 50, 10ರಿಂದ 12 ಗಂಟೆ ನಿಲ್ಲಿಸಿದರೆ ₹ 60 ಹಾಗೂ ನಂತರದ ಪ್ರತಿ ಗಂಟೆಗೆ ₹ 10 ಹೆಚ್ಚುವರಿಯಾಗಿ ಕೊಡಬೇಕು.
ಕಾರ್ ಅಥವಾ ಆಟೊರಿಕ್ಷಾಗಳಿಗೆ ಮೊದಲ 4 ತಾಸಿಗೆ ₹ 20 ವಿಧಿಸಲಾಗುತ್ತಿದೆ. 4ರಿಂದ 6 ಗಂಟೆಗೆ ₹ 30, 6ರಿಂದ 8 ತಾಸಿಗೆ ₹ 40, 8ರಿಂದ 10 ತಾಸಿಗೆ ₹ 50, 10ರಿಂದ 12 ಗಂಟೆ ನಿಲ್ಲಿಸಿದರೆ ₹ 60 ಹಾಗೂ ನಂತರದ ಪ್ರತಿ ಗಂಟೆಗೆ ₹ 10 ಹೆಚ್ಚುವರಿಯಾಗಿ ಶುಲ್ಕ ವಿಧಿಸಲಾಗುತ್ತದೆ.
ಇಲ್ಲಿಗೆ ವಿವಿಧ ರೀತಿಯ ಚಿಕಿತ್ಸೆ ಪಡೆಯಲೆಂದು ಬರುವವರು ಹಲವು ತಾಸುಗಳು ಇರಲೇಬೇಕಾಗುತ್ತದೆ. ಬಹಳ ಜನರು ಬರುವುದರಿಂದ ತಮ್ಮ ಸಮಯಕ್ಕಾಗಿ ಕಾಯಲೇಬೇಕಾಗತ್ತದೆ. ಹೀಗೆ, ಇದ್ದವರು ವಾಹನಗಳನ್ನು ತಂದಿದ್ದರೆ ದುಬಾರಿ ಶುಲ್ಕದಿಂದ ತಪ್ಪಿಸಿಕೊಳ್ಳುವುದಕ್ಕೆ ಆಗದಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ!
ಇಷ್ಟೊಂದು ಪಡೆದರೆ ಹೇಗೆ?: ‘ಪಾರ್ಕಿಂಗ್ ನಿರ್ವಹಣೆಯ ಗುತ್ತಿಗೆ ಪಡೆದಿರುವವರು ಎಸ್‌ಎಂಪಿ ಎಂಟರ್‌ಪ್ರೈಸಸ್ ಎಂದು ಫಲಕದಲ್ಲಿ ಹಾಕಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲೇ ಹೀಗೆ ಶುಲ್ಕವನ್ನು ದುಬಾರಿ ಮಾಡಿದರೆ ಹೇಗೆ? ನಗರದ ಖಾಸಗಿ ಆಸ್ಪತ್ರೆಯಲ್ಲಿ ದ್ವಿಚಕ್ರವಾಹನ ಶುಲ್ಕ ₹ 5 ಇದೆ. ಆದರೆ, ಇಲ್ಲಿ ₹ 15 ಪಡೆಯಲಾಗುತ್ತಿದೆ. ಒಂದು ದಿನ ವಾಹನ ನಿಲ್ಲಿಸಿದರೆ 12 ಗಂಟೆಯ ನಂತರ ಹೆಚ್ಚುವರಿಯಾಗಿ ₹ 5 ತೆರಬೇಕು. ಆಗ, ಒಂದು ದಿನಕ್ಕೆ ₹ 95 ಶುಲ್ಕ ಕಟ್ಟಬೇಕಾಗುತ್ತದೆ. ರೋಗಿಗಳು ಹಲವು ದಿನಗಳು ಉಳಿಯಬೇಕಾದರೆ ಅಥವಾ ಬರಬೇಕಾದರೆ, ಪಾರ್ಕಿಂಗ್ ಶುಲ್ಕವೇ ದುಬಾರಿಯಾಗುತ್ತದೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ’ ಎಂದು ನಿವೃತ್ತ ಎಎಸ್ಐ ಕೃಷ್ಣೇಗೌಡ ಎಸ್. ದೇವರಹಳ್ಳಿ ತಿಳಿಸಿದರು.
‘ಆಸ್ಪತ್ರೆಯ ಅಧಿಕಾರಿಗಳು ಇತ್ತ ಗಮನಹರಿಸಿ, ಶುಲ್ಕ ಇಳಿಕೆಗೆ ಕ್ರಮ ಕೈಗೊಳ್ಳಬೇಕು. ನ್ಯಾಯಸಮ್ಮತವಾಗಿ ಮರುನಿಗದಿಪಡಿಸಬೇಕು’ ಎಂಬ ಒತ್ತಾಯ ಅವರದು.
‘ಪಾರ್ಕಿಂಗ್ ವ್ಯವಸ್ಥೆಯಿಂದಲೂ ಹಣ ಸಂಪಾದನೆಗೆ ಮುಂದಾಗುವ ಸಂಸ್ಥೆಗಳಿಂದ ಸಾರ್ವಜನಿಕರು ಉತ್ತಮ ಸೇವೆಯನ್ನು ನಿರೀಕ್ಷಿಸಲು ಸಾಧ್ಯವೇ? ಸರ್ಕಾರಿ ಆಸ್ಪತ್ರೆಯಲ್ಲಿ ಹೀಗೆ ದುಬಾರಿ ಮಾಡುವುದು ಸರಿಯಲ್ಲ’ ಎಂದು ವಕೀಲ ಪಿ.ಜೆ. ರಾಘವೇಂದ್ರ ಹೇಳಿದರು.
‘ಹೌದು, ಇಲ್ಲಿನ ಪಾರ್ಕಿಂಗ್ ಶುಲ್ಕ ದುಬಾರಿಯಾಗಿದೆ. ನಮ್ಮ ಆಸ್ಪತ್ರೆಗೆ ಬರುವವರು ಬಡವರು ಹಾಗೂ ಮಧ್ಯಮ ವರ್ಗದವರೇ ಜಾಸ್ತಿ. ಹೀಗಿರುವಾಗ, ಅವರಿಗೆ ಹೊರೆ ಮಾಡಿರುವುದು ಸರಿಯಲ್ಲ’ ಎಂದು ವೈದ್ಯರೊಬ್ಬರು ಪ್ರತಿಕ್ರಿಯಿಸಿದರು.
ಕೇಂದ್ರ ಕಚೇರಿಯ ಹಂತದಲ್ಲಿ ಟೆಂಡರ್ ಅಗಿ ಪಾರ್ಕಿಂಗ್ ಶುಲ್ಕ ನಿಗದಿಪಡಿಸಲಾಗಿದೆ. ದುಬಾರಿ ಆಗಿರುವ ಬಗ್ಗೆ ದೂರು ಬಂದಿವೆ. ಇದನ್ನು ನಿರ್ದೇಶಕರ ಗಮನಕ್ಕೆ ತರಲಾಗಿದ್ದು ಅಲ್ಲಿಂದ ಬರುವ ಆದೇಶದಂತೆ ಕ್ರಮ ವಹಿಸಲಾಗುವುದುಡಾ.ಕೆ.ಎಸ್. ಸದಾನಂದ ಮೆಡಿಕಲ್ ಸೂಪರಿಂಟೆಂಡೆಂಟ್ ಜಯದೇವ ಅಸ್ಪತ್ರೆ ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.