ಮೈಸೂರು: ‘ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ, ನಗರಪಾಲಿಕೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳು ಸಕ್ರಿಯ ಸದಸ್ಯರಾಗಿರಲೇಬೇಕು. ಇಲ್ಲದಿದ್ದರೆ ಬಿ ಫಾರಂ ಸಿಗುವುದಿಲ್ಲ’ ಎಂದು ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ತಿಳಿಸಿದರು.
ಜೆಡಿಎಸ್ ಪಕ್ಷದಿಂದ ಇಲ್ಲಿನ ಮಂಜುನಾಥಪುರದ ಎಚ್.ಕೆಂಪೇಗೌಡ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ನಗರ ಹಾಗೂ ಜಿಲ್ಲಾ ಘಟಕದ ಸದಸ್ಯತ್ವ ನೋಂದಣಿ ಮತ್ತು ಬೂತ್ ಸಮಿತಿ ಅಭಿಯಾನದಲ್ಲಿ ಅವರು ಮಾತನಾಡಿದರು.
‘ಸಂಘಟನೆ ಬಲಪಡಿಸಲು ನಡೆಸಲಾಗುತ್ತಿರುವ ಸದಸ್ಯತ್ವ ನೋಂದಣಿ ಪ್ರಕ್ರಿಯೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಅದರಲ್ಲೂ ಟಿಕೆಟ್ ಆಕಾಂಕ್ಷಿಗಳು ನೇತೃತ್ವ ವಹಿಸಬೇಕು’ ಎಂದು ಸೂಚಿಸಿದರು.
ಜೆಡಿಎಸ್ ರಾಜ್ಯ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೆ.ಅನ್ನದಾನಿ ಮಾತನಾಡಿ, ‘ಪಕ್ಷದ ಸದಸ್ಯತ್ವ ನೋಂದಣಿಯನ್ನು ಹಿಂದೆ ಯಶಸ್ವಿಯಾಗಿಸಲು ಸಾಧ್ಯವಾಗಿರಲಿಲ್ಲ. ಈಗ ಗಂಭೀರವಾಗಿ ಪರಿಗಣಿಸಿ ನಡೆಸುತ್ತಿದ್ದೇವೆ. ರೈತರ ಈ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಗಟ್ಟಿಯಾಗಿ ಕಟ್ಟಬೇಕಾಗಿದೆ’ ಎಂದರು.
ಉಳಿಯಬೇಕೆಂದರೆ:
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಮಾತನಾಡಿ, ‘ಪಕ್ಷ ಉಳಿಯಬೇಕೆಂದರೆ ಸದಸ್ಯತ್ವ ನೋಂದಣಿ ಆಗಲೇಬೇಕಾಗಿದೆ. ಮುಖಂಡರು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಸದಸ್ಯತ್ವ ನೋಂದಣಿ ಮಾಡಿಸಬೇಕು. ಬೂತ್ ಸಮಿತಿಯು ಎಲ್ಲ ಜಾತಿಯವರನ್ನೂ ಒಳಗೊಂಡಿರುವಂತೆ ನೋಡಿಕೊಳ್ಳಬೇಕು. ₹ 10 ಪಡೆದು ಸದಸ್ಯತ್ವ ನೋಂದಣಿ ಮಾಡಿಸಬೇಕು’ ಎಂದು ನಿರ್ದೇಶನ ನೀಡಿದರು.
‘ಹೋಟೆಲ್ ಅಥವಾ ಎಲ್ಲೋ ಕುಳಿತು ಬೂತ್ ಸಮಿತಿ ಮಾಡಬಾರದು. ಬೂತ್‌ನಲ್ಲೇ ಆ ಕೆಲಸ ನಡೆಯಬೇಕು. ಹಣವನ್ನು ನೀವ್ಯಾರೂ ಹಾಕಬೇಡಿ. ಸದಸ್ಯರಿಂದಲೇ ಕಟ್ಟಿಸಿ. ಆಗ, ಪಕ್ಷಕ್ಕೆ ನಾನೂ ಹಣ ಕೊಟ್ಟಿದ್ದೇನೆ ಎಂಬ ಭಾವನೆ ಕಾರ್ಯಕರ್ತರಲ್ಲಿ ಬಂದು ಚೆನ್ನಾಗಿ ಕೆಲಸ ಮಾಡುತ್ತಾರೆ’ ಎಂದರು.
ಶಾಸಕ, ಜೆಡಿಎಸ್ ಪ್ರಮುಖರ ಸಮಿತಿಯ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, ‘ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವರಾದ ನಂತರ ಪಕ್ಷದಲ್ಲಿ ಹೊಸ ಹುಮ್ಮಸ್ಸು ಬಂದಿದೆ. ಅದನ್ನು ಬಳಸಿಕೊಂಡು ಬೆಳೆಯಬೇಕು’ ಎಂದು ಹೇಳಿದರು.
ಶಾಸಕ ಜಿ.ಡಿ.ಹರೀಶ್ ಗೌಡ, ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಪಕ್ಷದ ನಗರ ಘಟಕದ ಅಧ್ಯಕ್ಷ ಕೆ.ಟಿ. ಚಲುವೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಸ್ವಾಮಿ, ಮುಖಂಡರಾದ ಕೆ.ಟಿ. ಶ್ರೀಕಂಠೇಗೌಡ, ಎಚ್.ಕೆ. ರಾಮು, ಪ್ರೇಮಾ ಶಂಕರೇಗೌಡ, ಆರ್. ಲಿಂಗಪ್ಪ, ಎಂ. ಅಶ್ವಿನ್ ಕುಮಾರ್, ಸತೀಶ್, ಕೃಷ್ಣ, ಶಿವಣ್ಣ, ಭಾಗ್ಯವತಿ, ರಾಜೇಶ್ವರಿ ಸೋಮು, ಎಸ್‌ಬಿಎಂ ಮಂಜು, ಎಂ.ಜೆ. ರವಿಕುಮಾರ್, ಅಶ್ವಿನಿ ಪಾಲ್ಗೊಂಡಿದ್ದರು.
‘ಎಚ್‌ಡಿಕೆ ರಾಜಕಾರಣದ ಅಣ್ಣಾವ್ರು’
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ‘ಎಚ್.ಡಿ. ದೇವೇಗೌಡರ ಮಾರ್ಗದರ್ಶನದಲ್ಲಿ ಅಭಿಯಾನವನ್ನು ನಡೆಸಲಾಗುತ್ತಿದೆ. ಬೂತ್ ಮಟ್ಟದಿಂದ ಪಕ್ಷವನ್ನು ಬೆಳೆಸಲು ಹಾಗೂ ಸದೃಢಗೊಳಿಸಲು ಪ್ರತಿ ಸಮಾಜವನ್ನೂ ಒಗ್ಗೂಡಿಸಿಕೊಂಡು ಹೋಗಬೇಕು’ ಎಂದರು.
‘ಇಳಿ ವಯಸ್ಸಿನಲ್ಲೂ ದೇವೇಗೌಡರಲ್ಲಿರುವ ಉತ್ಸಾಹ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಸಿನಿಮಾರಂಗದಲ್ಲಿ ರಾಜಕುಮಾರ್ ಅವರಿಗೆ ಅಣ್ಣಾವ್ರು ಎಂಬ ಹೆಸರಿದೆ; ಪ್ರೀತಿ ಇದೆ. ಅಂತೆಯೇ ರಾಜಕಾರಣದಲ್ಲಿ ಯಾರಿಗಾದರೂ ಅಣ್ಣಾವ್ರು ಎಂಬ ಪಟ್ಟ ಸಿಕ್ಕಿದ್ದರೆ ಅದು ಕುಮಾರಸ್ವಾಮಿ ಅವರಿಗೆ ಮಾತ್ರ. ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ನಿಜ. ಆದರೆ, ನಮ್ಮ ಪಕ್ಷದ ಸಿದ್ಧಾಂತದ ಪ್ರಚಾರ ಮಾಡಿ ತಳಮಟ್ಟದಿಂದ ಕಟ್ಟುವ ಕೆಲಸವನ್ನು ನಾವು ಮಾಡಬೇಕು. ಮುಂಬರುವ ಎಲ್ಲ ಚುನಾವಣೆಗಳಿಗೂ ಸಿದ್ಧವಾಗಬೇಕು’ ಎಂದು ತಿಳಿಸಿದರು.
‘ಪಕ್ಷ ಬಲಗೊಳ್ಳಬೇಕು. ಪ್ರತಿ ಬೂತ್‌ನಲ್ಲಿ ಸರಾಸರಿ 25ರಿಂದ 30 ಮಂದಿಯನ್ನಾದರೂ ನೋಂದಣಿ ಮಾಡಿಸಬೇಕು. ಅವರಿಗೊಬ್ಬ ನಾಯಕನನ್ನು ಮಾಡಿಕೊಳ್ಳಬೇಕು. ಈ ಮೂಲಕ, ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಜ್ಜಾಗಬೇಕು’ ಎಂದು ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.