ADVERTISEMENT

ದಲ್ಲಾಳಿ ಮೊರೆ ಹೋದ ಬೆಳೆಗಾರ: ಆರಂಭವಾಗದ ಮುಸುಕಿನ ಜೋಳ ಖರೀದಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 3:11 IST
Last Updated 12 ಡಿಸೆಂಬರ್ 2025, 3:11 IST
ಹುಣಸೂರು ತಾಲ್ಲೂಕಿನ ನಂಜಾಪುರ ಗ್ರಾಮದಲ್ಲಿ ರೈತರು ಬೆಳೆದಿರುವ ಮುಸುಕಿನ ಜೋಳ ಫಸಲು
ಹುಣಸೂರು ತಾಲ್ಲೂಕಿನ ನಂಜಾಪುರ ಗ್ರಾಮದಲ್ಲಿ ರೈತರು ಬೆಳೆದಿರುವ ಮುಸುಕಿನ ಜೋಳ ಫಸಲು   

ಹುಣಸೂರು: ಮುಸುಕಿನಜೋಳ ಬೆಳೆದ ರೈತರು ಕಠಾವು ಒಕ್ಕಣೆ ಕಾರ್ಯ ಮುಗಿಸಿದ್ದರೂ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭವಾಗದೆ ದಲ್ಲಾಳಿಗಳ ಮೊರೆ ಹೋಗಿ ಆರ್ಥಿಕ ನಷ್ಟ ಅನುಭವಿಸುವ ಸ್ಥಿತಿ ಎದುರಾಗಿದೆ.

ಹಿಂಗಾರು ಮತ್ತು ಮುಂಗಾರಿನಲ್ಲಿ ವಾಣಿಜ್ಯ ಬೆಳೆಯಲ್ಲಿ ಒಂದಾದ ಮುಸುಕಿನ ಜೋಳವನ್ನು ಬೆಳೆದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುವ ನಿರೀಕ್ಷೆಯಲ್ಲಿದ್ದರು. ಸರ್ಕಾರ ಚಳಿಗಾಲದ ಅಧಿವೇಶನದಲ್ಲೂ ಜೋಳ ಖರೀದಿಸುವ ಬಗ್ಗೆ ಪ್ರಸ್ತಾಪಿಸದೆ ರೈತರ ಕನಸಿಗೆ ತಣ್ಣೀರು ಎರಚಿದಂತಾಗಿದೆ.

ಹುಣಸೂರು ತಾಲ್ಲೂಕಿನಲ್ಲಿ 12 ರಿಂದ 15 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ ಬೇಸಾಯ ಮಾಡುವ ರೈತರು ಹೆಕ್ಟೇರ್‌ಗೆ 22 ರಿಂದ 25 ಕ್ವಿಂಟಲ್‌ ಇಳುವರಿ ಪಡೆಯುತ್ತಾರೆ. ನವೆಂಬರ್‌ ತಿಂಗಳಲ್ಲಿ ಮುಸುಕಿನ ಜೋಳ ಕಟಾವು ಮಾಡಿ ಒಣಗಿಸಿದ ತೆನೆಯಿಂದ ಕಾಳು ಬೇರ್ಪಡಿಸಿ ಮಾರುಕಟ್ಟೆಗೆ ಸಿದ್ಧಪಡಿಸಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭವಾಗುವ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ.

ADVERTISEMENT

ಮುಸುಕಿನ ಜೋಳ 90 ರಿಂದ 100 ದಿನದ ಬೆಳೆಯಾಗಿದ್ದು ಏಪ್ರಿಲ್‌ ತಿಂಗಳಲ್ಲಿ ಬಿತ್ತನೆ ಮಾಡಿ ಆಗಸ್ಟ್‌ ಮೊದಲ ವಾರದಲ್ಲಿ ಕಟಾವು ಮಾಡುವ ರೈತ ಡಿಸೆಂಬರ್‌ ಅಂತ್ಯಕ್ಕೆ ಬಂದರೂ ಮಾರುಕಟ್ಟೆ ಇಲ್ಲದೆ ಅನಿವಾರ್ಯವಾಗಿ ದಲ್ಲಾಳಿಗಳ ಮನೆ ಬಾಗಿಲು ತಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ನಂಜಾಪುರದ ಪ್ರಗತಿಪರ ರೈತ ಮನು.

ಮುಸುಕಿನ ಜೋಳ ಹೆಚ್ಚಿನ ದಿನ ಸಂಗ್ರಹಿಸಿ ಇಡಲು ಕೋಲ್ಡ್‌ ಸ್ಟೋರೆಜ್‌ ಅವಶ್ಯಕ. ರೈತ ಮನೆಯಲ್ಲಿ ಸಂಗ್ರಹಿಸಿಡಲು ಅಸಾಧ್ಯ. ಸರ್ಕಾರ ಮುಸುಕಿನ ಜೋಳ ಖರೀದಿ ಕೇಂದ್ರ ಆರಂಭಿಸುವ ವಿಷಯಕ್ಕೆ ಸಂಬಂಧಿಸಿದಂತೆ ಆಸಕ್ತಿವಹಿಸುತ್ತಿಲ್ಲ. ಈ ನಡುವೆ ರೈತರು ಬೆಳೆದ ಫಸಲು ಮಾರಾಟ ಮಾಡದಿದ್ದರೆ ಆರ್ಥಿಕ ನಷ್ಟ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಈಗ ಅನಿವಾರ್ಯವಾಗಿ ದಲ್ಲಾಳಿಗೆ ಕಡಿಮೆ ದರಕ್ಕೆ ಮಾರಾಟ ಮಾಡಬೇಕಾಗಿದೆ ಎಂದು ಪ್ರಗತಿಪರ ರೈತ ಮಹದೇವ್‌ ಅಸಮಾಧಾನ ವ್ಯಕ್ತಪಡಿಸಿದರು.

ಸೈಲೇಜ್‌ ಮೇವು: ಇತ್ತೀಚೆಗೆ ಹೈನುಗಾರಿಕೆಗೆ ಸಂಗ್ರಹಿಸಿದ ಆಹಾರ ಸಿದ್ಧಪಡಿಸಲು ಮುಸುಕಿನ ಜೋಳ ಹೆಚ್ಚಾಗಿ ಬಳಸುತ್ತಿದ್ದು, ಕೇರಳ ರಾಜ್ಯದಿಂದ ಬೇಡಿಕೆ ಹೆಚ್ಚಾಗಿದೆ. ಸಿದ್ಧಪಡಿಸಿದ ಜಾನುವಾರುಗಳ ಆಹಾರ ಸೈಲೇಜ್‌ಗೆ 2 ತಿಂಗಳಲ್ಲಿ ಬೆಳೆದು ಎಳಸಾಗಿರುವ ಹಂತದಲ್ಲಿ ಮುಸುಕಿನ ಜೋಳ ಕಠಾವು ಮಾಡಿ ಕತ್ತರಿಸಿ ವಿವಿಧ ಪೌಷ್ಟಿಕಾಂಶ ಬೆರೆಸಿ ಜಾನುವಾರುಗಳಿಗೆ ಅಹಾರ ಸಿದ್ಧಪಡಿಸುವ ಕಾರ್ಖಾನೆ ಹೆಚ್ಚಾಗಿ ತಲೆ ಎತ್ತಿದ್ದು, ರೈತರಿಂದ ಟನ್‌ಗೆ ₹ 2800 ರಂತೆ ಖರೀದಿಸುತ್ತಿದ್ದು, ರೈತರು ಪೂರ್ಣ ಪ್ರಮಾಣದಲ್ಲಿ ಜೋಳ ಬೆಳೆಯದೆ ಅರ್ಧಕ್ಕೆ ಮಾರಾಟ ಮಾಡುವ ಹಂತಕ್ಕೆ ಬಂದಿದ್ದಾರೆ ಎನ್ನುವರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್‌.

ಮೈಸೂರು ಜಿಲ್ಲೆಯಲ್ಲಿ ಸರ್ಕಾರ ಬೆಂಬಲ ಬೆಲೆಯಲ್ಲಿ ಮುಸುಕಿನ ಜೋಳ ಖರೀದಿಸುವ ಬಗ್ಗೆ ಗೊಂದಲದಲ್ಲಿದ್ದು, ಕೆಎಂಎಫ್‌ಗೆ ಖರೀದಿಸುವ ಜವಾಬ್ದಾರಿ ನೀಡುವ ಚಿಂತನೆಯಲ್ಲಿದ್ದು, ಈಗಾಗಲೇ ಕಠಾವು ಮಾಡಿದ ಜೋಳ ಸಂಗ್ರಹಿಸಿಡಲಾಗದೆ ರೈತ ದಲ್ಲಾಳಿಗೆ ಕ್ವಿಂಟಾಲ್‌ ಗೆ ₹ 1400 ಕ್ಕೆ ಮಾರಾಟ ಮಾಡಿದ್ದಾನೆ ಎನ್ನುತ್ತಾರೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್‌ 

ಮುಸುಕಿನ ಜೋಳ 2 ಎಕರೆಯಲ್ಲಿ ಬೆಳೆದಿದ್ದು ಸಂಗ್ರಹಿಸಲು ಗೋದಾಮು ಇಲ್ಲದೆ ದಲ್ಲಾಳಿಗೆ ಅನಿರ್ವಾಯವಾಗಿ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಲ್ಲಾಳಿಗಳು ₹ 1400 ರಿಂದ ₹ 1500 ಕ್ಕೆ ಖರೀದಿಸುತ್ತಿದ್ದು ಆರ್ಥಿಕ ನಷ್ಟವಾಗಿದೆ ಎನ್ನುತ್ತಾರೆ ನಂಜಾಪುರ ಪ್ರಗತಿಪರ ರೈತ ಮನು.

ಜಾನುವಾರುಗಳ ಪೌಷ್ಟಿಕ ಆಹಾರಕ್ಕೆ ಬೇಡಿಕೆಯಲ್ಲಿರುವ ಸೈಲೇಜ್‌ ಮೇವು ಸಿದ್ದಪಡಿಸಲು ಸಾಗಿಸುತ್ತಿರುವ ಮುಸುಕಿನ ಜೋಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.