ADVERTISEMENT

ಮಾರಿಷಸ್‌: ಜೆಎಸ್ಎಸ್‌ ಮೆಡಿಕಲ್ ಸ್ಕೂಲ್ ಉದ್ಘಾಟಿಸಿದ ಅಧ್ಯಕ್ಷ ಧರ್ಮಬೀರ್ ಗೋಖೂಲ್‌

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 11:14 IST
Last Updated 9 ಫೆಬ್ರುವರಿ 2026, 11:14 IST
   

ಮೈಸೂರು: ‘ಮಾರಿಷಸ್‌ನಲ್ಲಿ ಜೆಎಸ್‌ಎಸ್ ಸಂಸ್ಥೆ ವೈದ್ಯಕೀಯ ಶಾಲೆ ಆರಂಭಿಸಿರುವುದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ’ ಎಂದು ಮಾರಿಷಸ್ ಗಣರಾಜ್ಯದ ಅಧ್ಯಕ್ಷ ಧರ್ಮಬೀರ್ ಗೋಖೂಲ್‌ ಹೇಳಿದರು.

ಮೈಸೂರಿನ ಜೆಎಸ್‌ಎಸ್‌ ಸಂಸ್ಥೆಯಿಂದ ಮಾರಿಷಸ್‌ನಲ್ಲಿ ಸ್ಥಾಪಿಸಿರುವ ಜೆಎಸ್‌ಎಸ್ ಸ್ಕೂಲ್ ಆಫ್ ಮೆಡಿಸಿನ್ ಉದ್ಘಾಟನೆಯನ್ನು ಇತ್ತೀಚೆಗೆ ನೆರವೇರಿಸಿ ಅವರು ಮಾತನಾಡಿದರು.

‘ಇಂತಹ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆಯಿಂದ ಆರೋಗ್ಯ ರಕ್ಷಣಾ ಸಾಮರ್ಥ್ಯ ಹೆಚ್ಚುವ ಜೊತೆಗೆ ಭಾರತ–ಮಾರಿಷಸ್ ಶೈಕ್ಷಣಿಕ ಸಂಬಂಧ ವೃದ್ಧಿಸುತ್ತದೆ. ಈ ಶಾಲೆಯು ಆರೋಗ್ಯ ರಕ್ಷಣೆಯ ಶ್ರೇಷ್ಠತೆ ಮತ್ತು ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಬಲವಾದ ಅಡಿಪಾಯ ಹಾಕುತ್ತದೆ’ ಎಂದರು.

ADVERTISEMENT

ಪವಿತ್ರ ಜವಾಬ್ದಾರಿ

ಸಾನ್ನಿಧ್ಯ ವಹಿಸಿದ್ದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಆರೋಗ್ಯ ಶಿಕ್ಷಣವು ಜ್ಞಾನ, ಚಾರಿತ್ರ್ಯ, ಕರುಣೆ ಮತ್ತು ಸೇವಾ ಗುಣಗಳನ್ನು ಬೆಳೆಸುವ ಪವಿತ್ರ ಜವಾಬ್ದಾರಿ ಹೊಂದಿದೆ. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕಾರಣದಿಂದಾಗಿ ಮಾರಿಷಸ್‌ನಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಪ್ರಯಾಣವನ್ನು 2002ರಲ್ಲಿ ಪ್ರಾರಂಭಿಸಲಾಯಿತು. ಈಗ ವೈದ್ಯಕೀಯ ಶಾಲೆ ಪ್ರಾರಂಭವು ಎರಡೂ ದೇಶಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ’ ಎಂದು ತಿಳಿಸಿದರು.

ಅಲ್ಲಿನ ಆರೋಗ್ಯ ಸಚಿವ ಅನಿಲ್‌ಕುಮಾರ್, ಶಿಕ್ಷಣ ಸಚಿವ ಕವಿರಾಜ್ ಶರ್ಮಾ ಸುಕೋನ್‌, ಮಾರಿಷಸ್‌ನ ಭಾರತದ ಹೈಕಮಿಷನರ್‌ ಅನುರಾಗ್ ಶ್ರೀವಾಸ್ತವ್ ಮಾತನಾಡಿದರು.

‘ಜೆಎಸ್‌ಎಸ್– ಎಎಚ್‌ಇಆರ್ ಮಾರಿಷಸ್ ವಿಷನ್ 2025’ ಸಂಚಿಕೆ ಬಿಡುಗಡೆ ಮಾಡಲಾಯಿತು.

ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ. ಬೆಟಸೂರಮಠ, ಬಿ.ಸುರೇಶ್‌, ಬೃಂದಾ ಗೋಖೂಲ್, ಎಸ್.ಪಿ. ಮಂಜುನಾಥ್, ಮಾರಿಷಸ್ ಜೆಎಸ್‌ಎಸ್ ಎಹೆಚ್‌ಇಆರ್‌ ಕುಲಪತಿ ಡಾ.ಪ್ರವೀಣ್ ಮೊಹದೇಬ್, ಕುಲಸಚಿವ ಕೆ.ಪಿ. ನವೀನ್ ಪಾಲ್ಗೊಂಡಿದ್ದರು.