ADVERTISEMENT

ಜೆಎಸ್‌ಎಸ್‌ ಎಸ್‌ಟಿಯು ಘಟಿಕೋತ್ಸವ 20ರಂದು: ಜಗ್ಗಿ ವಾಸುದೇವ್ ಭಾಗಿ

1,604 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 12:51 IST
Last Updated 17 ಮಾರ್ಚ್ 2023, 12:51 IST
ಜಗ್ಗಿ ವಾಸುದೇವ್
ಜಗ್ಗಿ ವಾಸುದೇವ್   

ಮೈಸೂರು: ‘ಇಲ್ಲಿನ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (ಜೆಎಸ್‌ಎಸ್‌ ಎಸ್‌ಟಿಯು) 5ನೇ ಘಟಿಕೋತ್ಸವ ಮಾರ್ಚ್‌ 20ರಂದು ಸಂಜೆ 4ಕ್ಕೆ ನಡೆಯಲಿದ್ದು, 1,604 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುವುದು’ ಎಂದು ಕುಲಪತಿ ಪ್ರೊ.ಎ.ಎನ್.ಸಂತೋಷ್‌ಕುಮಾರ್‌ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುತ್ತೂರು ವೀರಸಿಂಹಾಸ ಮಹಾಸಂಸ್ಥಾನದ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಈಶ ಪ್ರತಿಷ್ಠಾನದ ಸಂಸ್ಥಾಪಕ ಜಗ್ಗಿ ವಾಸುದೇವ್ ಘಟಿಕೋತ್ಸವ ಭಾಣಷ ಮಾಡಲಿದ್ದಾರೆ. ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ತಾಂತ್ರಿಕ ಶಿಕ್ಷಣ ವಿಭಾಗದ ಸಲಹೆಗಾರ ಪ್ರೊ.ಎಂ.ಎಚ್.ಧನಂಜಯ, ನಿರ್ದೇಶಕ ಡಾ.ಬಿ.ಸುರೇಶ್ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘986 ಬಿಇ, 54 ಬಿಸಿಎ, 176 ಎಂ.ಟೆಕ್., 103 ಎಂಸಿಎ, 47 ಎಂಎಸ್ಸಿ, 227 ಎಂಬಿಎ ಮತ್ತು 11 ಸಂಶೋಧನಾ (ಪಿಎಚ್‌ಡಿ) ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಆಯಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 34 ವಿದ್ಯಾರ್ಥಿಗಳಿಗೆ ಹಾಗೂ 22 ದತ್ತಿ ಪದಕಗಳು ಸೇರಿದಂತೆ ಒಟ್ಟು 56 ಚಿನ್ನದ ಪದಕಗಳನ್ನು ವಿತರಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ವಿಶ್ವವಿದ್ಯಾಲಯವು 14 ಪದವಿ, 31 ಸ್ನಾತಕೋತ್ತರ ಹಾಗೂ ಎಲ್ಲ ವಿಭಾಗಗಳಲ್ಲೂ ಡಾಕ್ಟರಲ್ ಪದವಿಯ ಕೋರ್ಸ್‌ಗಳನ್ನು ನಡೆಸುತ್ತಿದೆ. 6ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆದ’ ಎಂದು ವಿವರಿಸಿದರು.

‘ಆರ್ಥಿಕ ಹಿಂಜರಿತದ ನಡುವೆಯೂ, ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಕಾರ್ಯಕ್ರಮದ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ. ಕ್ಯಾಂಪಸ್‌ ಸಂದರ್ಶನ ಕಾರ್ಯಕ್ರಮಗಳು ನಡೆಯುತ್ತಿವೆ. ಈವರೆಗೆ 228 ಕಂ‍ಪನಿಗಳು ಕ್ಯಾಂಪಸ್‌ಗೆ ಭೇಟಿ ನೀಡಿವೆ. ವಿದ್ಯಾರ್ಥಿಗಳು ವಾರ್ಷಿಕ ₹ 12 ಲಕ್ಷದಿಂದ ₹ 25ಲಕ್ಷದವರೆಗೆ ಪ್ಯಾಕೇಜ್‌ ಪಡೆದಿದ್ದಾರೆ. ಇನ್ನೂ ಮೂರ್ನಾಲ್ಕು ತಿಂಗಳು ಸಂದರ್ಶನ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಹೇಳಿದರು.

‘ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳ ಸಹಯೋಗದಲ್ಲಿ ಇಂಟರ್ನ್‌ಶಿಪ್‌ ಕೊಡುತ್ತಿದ್ದೇವೆ. ಇಂಟರ್ನ್‌ಶಿ‍ಪ್ ಬ್ಯಾಂಕ್‌ ಕೂಡ ಮಾಡಿಕೊಂಡಿದ್ದೇವೆ. ವಿವಿಧ ಕಂಪನಿಗಳ ಸಂಪರ್ಕದಲ್ಲಿದ್ದೇವೆ’ ಎಂದರು.

ಕುಲಸಚಿವ ಪ್ರೊ.ಎಸ್.ಎ.ಧನರಾಜ್‌ ಮಾತನಾಡಿ, ‘ವಿಶ್ವವಿದ್ಯಾಲಯವನ್ನು ಸುಸ್ಥಿರ ವಿಶ್ವವಿದ್ಯಾಲಯನ್ನಾಗಿ ಮಾಡುವುದು ನಮ್ಮ ಯೋಜನೆಯಾಗಿದೆ. ಸಂಪೂರ್ಣವಾಗಿ ಹಸಿರು ಕ್ಯಾಂಪಸ್ ಮಾಡಲಾಗುತ್ತಿದೆ. ಮರುಬಳಕೆ ಮತ್ತು ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಶೈಕ್ಷಣಿಕ, ಆಡಳಿತ ಕಟ್ಟಡ, ಸಭಾಂಗಣಗಳು ಮೊದಲಾದ ನಿರ್ಮಾಣ ಯೋಜನೆಗಳನ್ನು ಈ ವರ್ಷ ಹೊಂದಲಾಗಿದೆ’ ಎಂದು ತಿಳಿಸಿದರು.

‘ಹೊಸದಾಗಿ ನಾಲ್ಕು ಎಂ.ಎಸ್ಸಿ. ಕೋರ್ಸ್‌ಗಳನ್ನು ಅರಂಭಿಸಲಾಗುವುದು. ಎಲೆಕ್ಟ್ರಿಕ್‌ ವೆಹಿಕಲ್ ತಂತ್ರಜ್ಞಾನದ ಬಗ್ಗೆ ಕೋರ್ಸ್‌ ಶುರು ಮಾಡಲಿದ್ದೇವೆ. ಎಂಬಿಎನಲ್ಲಿ ಬ್ಯುಸಿನೆಲ್ ಅನಾಲಿಟಿಕ್ಸ್‌, 3 ಬಿಇ ಕೋರ್ಸ್‌ಗಳನ್ನು ಆರಂಭಿಸಲಾಗುವುದು. ಸೈಬರ್‌ ಸೆಕ್ಯುರಿಟಿ ಉತ್ಕೃಷ್ಟ ಕೇಂದ್ರ ಸ್ಥಾಪನೆಗೂ ಯೋಜಿಸಲಾಗಿದೆ’ ಎಂದರು.

ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಪಿ.ನಂಜುಂಡಸ್ವಾಮಿ ಹಾಗೂ ಎಸ್‌ಜೆಸಿಇ ಪ್ರಾಂಶುಪಾಲ ಪ್ರೊ.ಎಸ್.ಬಿ.ಕಿವಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.