ADVERTISEMENT

ತೀರ್ಪುಗಳು ಕನ್ನಡದಲ್ಲೇ ಇರಲಿ: ಟಿ.ಎಸ್‌.ನಾಗಾಭರಣ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 11:26 IST
Last Updated 31 ಮಾರ್ಚ್ 2022, 11:26 IST
ಮೈಸೂರಿನ ಶಾರದಾವಿಲಾಸ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಸ್ನಾತಕೋತ್ತರ ಪದವಿಯಲ್ಲಿ ಎರಡನೇ ರ‍್ಯಾಂಕ್‌ ಪಡೆದ ಪುರುಷೋತ್ತಮ್, 2021–22ನೇ ಸಾಲಿನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಎಂ.ಶ್ರುತಿ, ಸಿದ್ಧಾಪ್ಪಾಜಿ, ಸಿ.ರಘು ಅವರನ್ನು ಸನ್ಮಾನಿಸಲಾಯಿತು. ಟಿ.ಎಸ್‌.ನಾಗಾಭರಣ, ಎನ್‌.ಚಂದ್ರಶೇಖರ್‌, ಡಾ.ಎಂ.ಎನ್‌.ಭೀಮೇಶ್‌, ಉದಯಕುಮಾರ್‌ ಇದ್ದಾರೆ
ಮೈಸೂರಿನ ಶಾರದಾವಿಲಾಸ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಸ್ನಾತಕೋತ್ತರ ಪದವಿಯಲ್ಲಿ ಎರಡನೇ ರ‍್ಯಾಂಕ್‌ ಪಡೆದ ಪುರುಷೋತ್ತಮ್, 2021–22ನೇ ಸಾಲಿನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಎಂ.ಶ್ರುತಿ, ಸಿದ್ಧಾಪ್ಪಾಜಿ, ಸಿ.ರಘು ಅವರನ್ನು ಸನ್ಮಾನಿಸಲಾಯಿತು. ಟಿ.ಎಸ್‌.ನಾಗಾಭರಣ, ಎನ್‌.ಚಂದ್ರಶೇಖರ್‌, ಡಾ.ಎಂ.ಎನ್‌.ಭೀಮೇಶ್‌, ಉದಯಕುಮಾರ್‌ ಇದ್ದಾರೆ   

ಮೈಸೂರು: ‘ಕನ್ನಡ ಬಳಕೆಗೆ ಹಿಂದೇಟು ಹಾಕುತ್ತಿದ್ದೇವೆ. ಭಾಷೆ ಬಗ್ಗೆ ಕೀಳರಿಮೆ ಪಡದೇ ಎಲ್ಲೆಡೆ ಕನ್ನಡ ಸ್ಥಾಪಿಸುವ ಕೆಲಸ ಆಗಬೇಕು. ಇದೀಗ ತಾಲ್ಲೂಕು, ಜಿಲ್ಲಾ ನ್ಯಾಯಾಲಯಗಳ ಕಾರ್ಯಚಟುವಟಿಕೆ ಕನ್ನಡದಲ್ಲೇ ನಡೆಯುತ್ತಿದೆ. ಇದು ಹೈಕೋರ್ಟ್‌ನಲ್ಲೂ ಆಗಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಹೇಳಿದರು.

ನಗರದ ಶಾರದಾವಿಲಾಸ ಕಾನೂನು ಕಾಲೇಜು ಗುರುವಾರ ಏರ್ಪಡಿಸಿದ್ದ ‘ಕನ್ನಡ ಭಾಷಾಂತರ ಅಲ್ಪಾವಧಿ ಕಾರ್ಯಾಗಾರ’ದ ಸಮಾರೋಪ ಉದ್ಘಾಟಿಸಿ ಅವರು ಮಾತನಾಡಿದರು.

‘ಕಕ್ಷಿದಾರನ ಭಾಷೆಯಲ್ಲಿ ನ್ಯಾಯಾಂಗವು ವ್ಯವಹರಿಸಿದಾಗ ಮಾತ್ರ ನ್ಯಾಯ ಸಿಗಲು ಸಾಧ್ಯ. ಗೊತ್ತಾಗದ ಭಾಷೆಯಲ್ಲಿ ವ್ಯವಹರಿಸಿದರೆ ಸಾಮಾನ್ಯ ನಾಗರಿಕ ಪಿಳಿಪಿಳಿ ಕಣ್ಣು ಬಿಡಬೇಕಾಗುತ್ತದೆ. ಸುಪ್ರೀಂ ಕೋರ್ಟ್‌ ತನ್ನ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲೂ ತರ್ಜುಮೆಗೊಳಿಸುತ್ತಿದೆ. ಅದರಂತೆ ಹೈಕೋರ್ಟ್‌ ತೀರ್ಪುಗಳು ಕನ್ನಡದಲ್ಲಿಯೇ ಇರಲಿ’ ಎಂದು ಪ್ರತಿಪಾದಿಸಿದರು.

ADVERTISEMENT

‘ನಮ್ಮದಲ್ಲದ ಭಾಷೆಯಲ್ಲಿ ವ್ಯವಹರಿಸಲು ಆಗದು. ಆಡಳಿತ ವ್ಯವಸ್ಥೆಯು ಜಡಗೊಳ್ಳಲು ಜನರ ಭಾಷೆಯಲ್ಲಿ ವ್ಯವಹರಿಸದಿರುವುದೇ ಕಾರಣ. ಇಂಗ್ಲಿಷ್‌ ಜ್ಞಾನವನ್ನು ನಮ್ಮದಾಗಿಸಿಕೊಂಡು ಕನ್ನಡವನ್ನು ಕಟ್ಟಬೇಕು. ವಿಶ್ವದ ಎಲ್ಲ ಶ್ರೇಷ್ಠ ಕೃತಿಗಳು ನಮ್ಮ ಭಾಷೆಯಲ್ಲಿಯೇ ದೊರೆಯುವಂತಾಗಬೇಕು’ ಎಂದರು.

ಹೃದಯದ ಭಾಷೆ ಬೇಕಿದೆ: ‘ಮನಸ್ಸು, ಶರೀರವನ್ನು ಸ್ವಾಸ್ಥ್ಯದಲ್ಲಿಡುವುದು ಹೃದಯದ ಭಾಷೆ. ಸಮಾಜವನ್ನು ಹೃದಯದ ಭಾಷೆಯಲ್ಲಿ ನೋಡಬೇಕು, ಮಾತನಾಡಬೇಕು. ಬುದ್ಧಿಜೀವಿಗಳಾಗಬಾರದು. ಹೃದಯವಂತರಾಗಬೇಕು’ ಎಂದು ನಾಗಾಭರಣ ಹೇಳಿದರು.

‘ನ್ಯಾಯವಾದಿಯ ಮಾತು ಅಪ್ಯಾಯಮಾನವಾಗಿರಬೇಕು. ಕಾನೂನು ಪದವಿ ಪ‍ಡೆಯುವವರಿಗೆ ಅನುವಾದ ಕಮ್ಮಟ ಏರ್ಪಡಿಸಿರುವುದು ಸ್ವಾಗತಾರ್ಹ. ಭಾಷಾಂತರವು ಹೃದ್ಯವಾಗಬೇಕು. ಪದವೀಧರರು ಒಂದಾದರೂ ಕೃತಿಯನ್ನು ಭಾಷಾಂತರ ಮಾಡಬೇಕು’ ಎಂದು ಸಲಹೆ ನೀಡಿದರು.

2021–22ನೇ ಸಾಲಿನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಸಿ.ರಘು, ಸಿದ್ಧಾಪ್ಪಾಜಿ, ಎಂ.ಶ್ರುತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಸ್ನಾತಕೋತ್ತರ ಪದವಿಯಲ್ಲಿ ಎರಡನೇ ರ‍್ಯಾಂಕ್‌ ಪಡೆದ ಪುರುಷೋತ್ತಮ್ ಅವರನ್ನು ಸನ್ಮಾನಿಸಲಾಯಿತು.

ಶಾರದಾವಿಲಾಸ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎನ್‌.ಚಂದ್ರಶೇಖರ್‌, ಶೈಕ್ಷಣಿಕ ಸಲಹೆಗಾರ ಡಾ.ಎಂ.ಎನ್‌.ಭೀಮೇಶ್‌, ಪ್ರಾಂಶುಪಾಲ ವೈ.ಪಿ.ಉದಯ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.