ADVERTISEMENT

ಜಂಬೂಸವಾರಿಗೆ ‘ಅಭಿಮನ್ಯು’ ಪಡೆ ಸಿದ್ಧ: ಅಂತಿಮ ಕುಶಾಲತೋಪು ತಾಲೀಮು ಯಶಸ್ವಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 2:55 IST
Last Updated 24 ಸೆಪ್ಟೆಂಬರ್ 2025, 2:55 IST
ಮೈಸೂರಿನ ದಸರಾ ವಸ್ತುಪ್ರದರ್ಶನ ಮೈದಾನದ ವಾಹನ ನಿಲ್ದಾಣದಲ್ಲಿ ಮಂಗಳವಾರ ನಡೆದ ಅಂತಿಮ ಕುಶಾಲತೋಪು ತಾಲೀಮಿನ ದೃಶ್ಯ 
ಮೈಸೂರಿನ ದಸರಾ ವಸ್ತುಪ್ರದರ್ಶನ ಮೈದಾನದ ವಾಹನ ನಿಲ್ದಾಣದಲ್ಲಿ ಮಂಗಳವಾರ ನಡೆದ ಅಂತಿಮ ಕುಶಾಲತೋಪು ತಾಲೀಮಿನ ದೃಶ್ಯ    

ಮೈಸೂರು: ಅಂಬಾರಿ ಆನೆ ‘ಅಭಿಮನ್ಯು’ ನೇತೃತ್ವದ ಗಜಪಡೆ ಹಾಗೂ ಅಶ್ವಪಡೆಯು ಅಂತಿಮ ‘ಕುಶಾಲತೋಪು’ ತಾಲೀಮಿನ ಸಿಡಿಮದ್ದಿನ ಮೊರೆತಕ್ಕೆ ಅಂಜದೆ ಧೈರ್ಯ ಪ್ರದರ್ಶಿಸಿ, ‘ಜಂಬೂಸವಾರಿಗೆ ಸಿದ್ಧ’ ಎಂದು ಸಾರಿದವು.

ದಸರಾ ವಸ್ತುಪ್ರದರ್ಶನ ಮೈದಾನದ ವಾಹನ ನಿಲ್ದಾಣದಲ್ಲಿ ಮಂಗಳವಾರ ನಡೆದ ತಾಲೀಮು ಯಶಸ್ವಿಯಾಗಿ ನೆರವೇರಿತು.  ಜಂಬೂಸವಾರಿಗೆ 9 ದಿನವಷ್ಟೇ ಇದ್ದು, ಅಭಿಮನ್ಯು ನೇತೃತ್ವದ 14 ಆನೆಗಳು ಹಾಗೂ ಅಶ್ವಾರೋಹಿ ದಳದ 38 ಕುದುರೆಗಳು ಸಜ್ಜುಗೊಂಡಿವೆ.

ಅಭಿಮನ್ಯು, ಏಕಲವ್ಯ, ಸುಗ್ರೀವ, ಮಹೇಂದ್ರ, ಭೀಮ, ಕಂಜನ್‌, ಧನಂಜಯ, ಪ್ರಶಾಂತ, ಗೋಪಿ, ಶ್ರೀಕಂಠ, ಹೇಮಾವತಿ, ಕಾವೇರಿ, ರೂಪಾ, ಲಕ್ಷ್ಮಿ ಒಂದೇ ಸಾಲಿನಲ್ಲಿ ನಿಂತರು. ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಸಿದ್ದನಗೌಡ ಪಾಟೀಲ್, ಎಸಿಪಿ ಕುಮಾರಸ್ವಾಮಿ ನೇತೃತ್ವದಲ್ಲಿ ಫಿರಂಗಿ ದಳದ 35 ಸಿಬ್ಬಂದಿ 7 ಫಿರಂಗಿಗಳಲ್ಲಿ ಮೂರು ಸುತ್ತಿನಂತೆ 21 ಸಿಡಿಮದ್ದು ಹಾರಿಸಿದರು. 

ADVERTISEMENT

ಮೊದಲೆರಡು ತಾಲೀಮಿನಲ್ಲಿ ಬೆಚ್ಚಿದ್ದ ‘ಶ್ರೀಕಂಠ’, ‘ರೂಪಾ’ ಹಾಗೂ ‘ಹೇಮಾವತಿ’ ಆರಂಭದಲ್ಲಿ ಸ್ವಲ್ಪ ಅಳುಕಿದರೂ ನಂತರ ಹೊಂದಿಕೊಂಡರು. ಮಾವುತರು ಹಾಗೂ ಕಾವಾಡಿಗಳು ಕೆನ್ನೆ ಹಾಗೂ ಸೊಂಡಿಲು ನೇವರಿಸಿ, ಕಬ್ಬು, ಬೆಲ್ಲದ ಹುಲ್ಲು ನೀಡಿ ಸಮಾಧಾನ ಪಡಿಸುತ್ತಿದ್ದರು. 

ಎಂದಿನಂತೆ ‘ಕ್ಯಾಪ್ಟನ್‌’ ಅಭಿಮನ್ಯು, ಏಕಲವ್ಯ, ಮಹೇಂದ್ರ, ಪ್ರಶಾಂತ ಕೊಂಚವೂ ಬೆದರದೇ ಧೈರ್ಯ ಪ್ರದರ್ಶಿಸಿದರು. ಸಿಡಿಮದ್ದು ತಾಲೀಮಿನ ವೇಳೆ ಆನೆಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಎಡಭಾಗದಲ್ಲಿ ಅಶ್ವದಳದ ಕುದುರೆ ನಿಲ್ಲಿಸಲಾಗಿತ್ತು. ಸಿಡಿಮದ್ದು ಮೊರೆಯುವ ವೇಳೆ ಅಶ್ವದಳದ ಕೆಲ ಕುದುರೆಗಳು ಗಾಬರಿಯಾಗಿ ಕೆನೆದವು. ನಂತರ ಹೊಂದಿಕೊಂಡವು.   

ಡಿಸಿಎಫ್ ಐ.ಬಿ.ಪ್ರಭುಗೌಡ, ಆರ್‌ಎಫ್‌ಒ ನದೀಮ್, ಪಶುವೈದ್ಯ ಆದರ್ಶ್, ಸಹಾಯಕರಾದ ರಂಗರಾಜು, ಅಕ್ರಂ ಪಾಲ್ಗೊಂಡಿದ್ದರು. ‌‌

7 ಫಿರಂಗಿಗಳಿಂದ ಮೊರೆತ ಸಿಡಿದ 21 ಕುಶಾಲತೋಪು  ಅಂಜದ ಗಜಪಡೆ, ಅಶ್ವಪಡೆ

ನೋಟಿಸ್‌ ನೀಡಲಾಗಿದೆ: ಡಿಸಿಎಫ್

‘ದಸರಾ ಆನೆಗಳೊಂದಿಗೆ ಅನುಮತಿ ಇಲ್ಲದೇ ಫೋಟೊಶೂಟ್ ಮಾಡಿದ ಯುವತಿಗೆ ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಡಲಾಗಿದೆ. ಎರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುತ್ತಾರೆ’ ಎಂದು ಡಿಸಿಎಫ್ ಐ.ಬಿ.ಪ್ರಭುಗೌಡ ಹೇಳಿದರು.  ‘ಆನೆಗಳ ಬಳಿಗೆ ಹೋಗಲು ಅನುಮತಿ ಕೊಟ್ಟಿದ್ದು ಯಾರು. ಬಂದಿದ್ದವರು ಯಾರು ಎಂಬುದೆಲ್ಲಾ ವಿಚಾರಣೆ ಬಳಿಕ ತಿಳಿಯಲಿದೆ. ಯಾರೇ ಫೋಟೊಶೂಟ್ ಮಾಡಿದ್ದರೂ ದಂಡ ಹಾಕಲಾಗುವುದು’ ಎಂದರು.  

‘ಶ್ರೀರಂಗಪಟ್ಟಣ ದಸರೆಗೆ ಮಹೇಂದ್ರ’ ‘ಅನುಭವಿ ಆನೆ

‘ಮಹೇಂದ್ರ’ ಶ್ರೀರಂಗಪಟ್ಟಣ ದಸರೆಗೆ ಆಯ್ಕೆಯಾಗಿದ್ದು ಅವನೊಂದಿಗೆ ಕುಮ್ಕಿ ಆನೆಗಳಾಗಿ ‘ಕಾವೇರಿ’ ‘ಲಕ್ಷ್ಮಿ’ ಹೆಜ್ಜೆ ಹಾಕಲಿವೆ’ ಎಂದು ಡಿಸಿಎಫ್ ಐ.ಬಿ.ಪ್ರಭುಗೌಡ ತಿಳಿಸಿದರು. ‘ಮೂರು ಆನೆಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಮಹೇಂದ್ರ ಆನೆಯೂ ಕಳೆದೆರಡು ಬಾರಿ ಶ್ರೀರಂಗಪಟ್ಟಣ ದಸರೆಯ ಅಂಬಾರಿ ಹೊತ್ತಿತ್ತು. ಗಜಪಡೆ ಹಾಗೂ ಅಶ್ವದಳಕ್ಕೆ ಮೂರು ಹಂತದ ಕುಶಾಲತೋಪು ತಾಲೀಮನ್ನು ಯಶಸ್ವಿಯಾಗಿ ನಡೆಸಲಾಗಿದೆ. ಎಲ್ಲಾ ಆನೆಗಳು ಶಬ್ದಕ್ಕೆ ಒಗ್ಗಿಕೊಂಡಿವೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.