ADVERTISEMENT

ಹೊಸ ಶಿಕ್ಷಣ ನೀತಿ ಸಕ್ಕರೆ ಲೇಪಿತ ಮಾತ್ರೆಯಂತೆ: ನಿವೃತ್ತ ನ್ಯಾ. ನಾಗಮೋಹನ ದಾಸ್

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 7:59 IST
Last Updated 20 ನವೆಂಬರ್ 2021, 7:59 IST
   

ಮೈಸೂರು: ಹೊಸ ಶಿಕ್ಷಣ ನೀತಿ ಸಕ್ಕರೆ ಲೇಪಿತ ಮಾತ್ರೆಯಂತೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ತಿಳಿಸಿದರು.

ಮಾನವ ಬಂಧುತ್ವ ವೇದಿಕೆಯು ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಏರ್ಪಡಿಸಿದ್ದ 'ಹೊಸ ಶಿಕ್ಷಣ ನೀತಿ ಮತ್ತು ಪಠ್ಯ ತಿರುಚುವಿಕೆಯ ರಾಜಕಾರಣ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಹೊಸ ಶಿಕ್ಷಣ ನೀತಿ ಮೇಲುನೋಟಕ್ಕೆ ಚೆನ್ನಾಗಿದೆ. ಬಹಳ ಚೆನ್ನಾಗಿ ಕಾಣಿಸುತ್ತದೆ. ಇದು ಸಕ್ಕರೆ ಲೇಪಿತ ಮಾತ್ರೆಯಂತೆ. ಮೊದಲು ಸಿಹಿ ನಂತರ ಕಹಿಯಾಗುತ್ತದೆ ಎಂದು ಹೇಳಿದರು.

ADVERTISEMENT

ವಿದ್ಯಾವಂತರು ನಿರುದ್ಯೋಗಿಗಳಾಗುತ್ತಿದ್ದಾರೆ. ಬಹುದೊಡ್ಡ ಸುಧಾರಣೆ ಬೇಕಿದೆ ನಿಜ. ಆದರೆ ಅದು ಹೊಸ ಶಿಕ್ಷಣ ನೀತಿಯಂತಿರಬಾರದು ಎಂದರು.

ಬಲವಂತವಾಗಿ ಶಿಕ್ಷಣ ನೀತಿ ಹೇರುವ ಅಧಿಕಾರ ಕೇಂದ್ರಕ್ಕೆ ಇಲ್ಲ. ಸಂವಿಧಾನ ವಿರೋಧಿ ನೀತಿಯನ್ನು ರಾಜ್ಯಗಳ ಮೇಲೆ ಹೇರುವುದು ಒಕ್ಕೂಟ ವ್ಯವಸ್ಥೆಗೆ ಬಲವಾದ ಪೆಟ್ಟು ನೀಡುತ್ತರೆ ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಹೇಳಿದರು.

ಶಿಕ್ಷಣವನ್ನು ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಅಧಿಕಾರವನ್ನು ಕೇಂದ್ರೀಕೃತಗೊಳಿಸಲಾಗುತ್ತಿದೆ‌. ಹೊಸನೀತಿಯಲ್ಲಿ ವ್ಯಾಪಾರೀಕರಣಕ್ಕೆ ಅವಕಾಶ ಇದ್ದು ಹಣ ಇದ್ದವರಿಗಷ್ಟೇ ಶಿಕ್ಷಣ ಎನ್ನುವಂತಾಗಿದೆ.ಖಾಸಗಿ ಅವರು ಶಿಕ್ಷಣ ಕೊಡುವುದು ಸ್ವಾಗತ. ಆದರೆ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.

ಜನಪರ ಹೋರಾಟಗಳೇ ಜನರ ಸಮಸ್ಯೆಗಳಿಗೆ ಮದ್ದು ಎಂಬುದನ್ನು ರೈತ ಚಳವಳಿ ಸಾಬೀತುಪಡಿಸಿದೆ. ಹೊಸದೊಂದು ಚಳವಳಿ ರೂಪುಗೊಳ್ಳುವ ಮೊದಲು ಹೊಸ ನೀತಿಯನ್ನು ವಾಪಸ್ ತೆಗೆದುಕೊಳ್ಳಿ. ಎಲ್ಲರೊಂದಿಗೂ ಚರ್ಚಿಸಿ ನಂತರ ನೀತಿ ರೂಪಿಸಿ ಎಂದು ಒತ್ತಾಯಿಸಿದರು.

ಅಂಗನವಾಡಿ ಶಿಕ್ಷಕರನ್ನು ಹಸಿವಿನಲ್ಲಿ ಇಟ್ಟು ಶಿಕ್ಷಣ ಸುಧಾರಣೆಗೆ ಹೊರಟಿರುವುದು ನಾಚಿಕೆಗೇಡು. ಅರ್ಧದಷ್ಟು ಬೋಧಕರ ಹುದ್ದೆ ಖಾಲಿ ಇವೆ. ಮೊದಲು ಇವುಗಳನ್ನು ಭರ್ತಿ ಮಾಡಿ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ಶಿಕ್ಷಣದಲ್ಲಿ ಬದಲಾವಣೆ ತರಬೇಕು. ಮುಂದಕ್ಕೆ ಹೋಗುವ ನೀತಿಯನ್ನು ಜಾರಿಗೊಳಿಸಿಲ್ಲ. ಇದು ಹಿಮ್ಮುಖ ಚಲನೆಯ ನೀತಿ. ಕೇಸರೀಕರಣ ಮಾಡುವ ಹುನ್ನಾರ ಇದೆ ಎಂದು ಟೀಕಿಸಿದರು.

ಹೊಸ ಶಿಕ್ಷಣ ನೀತಿ ಕಾಲ್ಪನಿಕ ಪರಿಕಲ್ಪನೆಯ ಆಧಾರದ ಮೇಲೆ ರೂಪಿಸಲಾಗಿದೆ. ವೈಜ್ಞಾನಿಕ ತಳಹದಿ ನೀತಿಗೆ ಇಲ್ಲ ಎಂದು ಹೇಳಿದರು‌.

ಜೈಭೀಮ್ ನಂತಹ ಸಿನಿಮಾ ನೀಡಿದ ತಮಿಳು ಚಿತ್ರರಂಗಕ್ಕೆ ಅಭಿನಂದಿಸುತ್ತೇನೆ. ಆ ತರಹ ಶೋಷಿತರ ಪರವಾದ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲೂ ಬರಬೇಕು ಎಂದರು.

ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ‌.ಕೃಷ್ಣಮೂರ್ತಿ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡದವರು ತಾವೇ ತಾವಾಗಿ ಶಿಕ್ಷಣದಿಂದ ದೂರ ಹೋಗಲಿ ಎಂದೆ ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ ಎಂದು ಹೇಳಿದರು.

ಭಾರತದ ಶಿಕ್ಷಣ ನೀತಿಯನ್ನು ನಾಶ ಮಾಡುವುದಕ್ಕೆಂದೇ ಹಾಗೂ ಆಧುನಿಕ ಗುಲಾಮಗಿರಿಯನ್ನು ರೂಪಿಸಲು
ನೂತನ ಶಿಕ್ಷಣ ನೀತಿ ರೂಪಿಸಲಾಗಿದೆ ಎಂದರು.

ಹೊಸ ಶಿಕ್ಷಣ ನೀತಿಯಿಂದ ವಾಪಸ್ ಕಾಡಿಗೆ ಹೋಗಬೇಕಾಗುತ್ತದೆ- ಎಚ್ಚರಿಕೆ
ವೇದಿಕೆಯ ಸಂಸ್ಥಾಪಕ ಸತೀಶ ಜಾರಕಿಹೊಳಿ ಮಾತನಾಡಿ, 'ಹೊಸ ಶಿಕ್ಷಣ ನೀತಿ ಜಾರಿಗೊಂಡರೆ ಹಿಂದುಳಿದವರು ವಾಪಸ್ ಕಾಡಿಗೆ ಹೋಗಬೇಕಾಗುತ್ತದೆ ಹಾಗೂ ಚಪ್ಪಲಿ ಹೊಲಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

2 ಸಾವಿರ ವರ್ಷಗಳ ಹಿಂದೆ ನಾವು ಶಿಕ್ಷಣದಿಂದ ವಂಚಿತರಾಗಿದ್ದೆವು. ಅಂಬೇಡ್ಕರ್ ಅವರಿಂದ ಶಿಕ್ಷಣ ಪಡೆದೆವು. ಹೀಗೇ ಬಿಟ್ಟರೆ ದಲಿತರು ಮುಂದುವರಿಯುತ್ತಾರೆ ಎನ್ನುವ ಭಯದಿಂದ ಈ ನೀತಿ ಜಾರಿಗೊಳಿಸಲಾಗಿದೆ ಎಂದರು‌.

ಈ ಕುರಿತ ವಿರೋಧಕ್ಕೆ ಸರ್ಕಾರ ಕಿವಿಗೊಡುತ್ತಿಲ್ಲ. ಆದರೆ, ರೈತ ಚಳವಳಿ ಸರ್ಕಾರಕ್ಕೆ ಅಂಕುಶ ಹಾಕಿದೆ. ಶಿಕ್ಷಣ ನೀತಿ ವಿಚಾರದಲ್ಲೂ ಇದೇ ಬಗೆಯ ಜನಾಭಿಪ್ರಾಯ ಮೂಡಬೇಕು ಎಂದು ಹೇಳಿದರು.

ಶಿಕ್ಷಣದಲ್ಲಿ ಹೊಸ ಹೊಸ ಪಠ್ಯ ಸೇರಿಸುವ ಹುನ್ನಾರ ನಡೆಯುತ್ತಿದೆ. ಈ ಬಗೆಯ ಜಾಗೃತಿ ಕಾರ್ಯಕ್ರಮಗಳನ್ನು ಮೈಸೂರಿನಲ್ಲಿ ಮುಂದುವರಿಸಬೇಕು. ಪ್ರತಿಭಟನೆಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಆದರೆ, ಸರ್ಕಾರ ಕುಲಪತಿಯವರಿಗೆ ಬೆದರಿಕೆ ಹಾಕಿ ಅವಕಾಶ ನಿರಾಕರಿಸಲಾಯಿತು ಎಂದು ಆರೋಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.