ADVERTISEMENT

ಸಾಂಸ್ಕೃತಿಕ ನಗರಿಯಲ್ಲಿ ಕಬಡ್ಡಿ ಕಲರವ

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಐಐಪಿಕೆಎಲ್‌ ಆಯೋಜನೆ

​ಪ್ರಜಾವಾಣಿ ವಾರ್ತೆ
Published 24 ಮೇ 2019, 20:03 IST
Last Updated 24 ಮೇ 2019, 20:03 IST
ಐಐಪಿಕೆಎಲ್‌ ಕಬಡ್ಡಿ ಟೂರ್ನಿಯನ್ನು ಮೇಯರ್‌ ಪುಷ್ಪಲತಾ ಜಗನ್ನಾಥ್‌ ಉದ್ಘಾಟಿಸಿದರು. ಎಲ್‌.ನಾಗೇಂದ್ರ, ಮರಿಯಪ್ಪ, ಮೋಹನ್, ರವಿಕಿರಣ್, ಎಂ.ವಿ.ಪ್ರಸಾದ್‌ ಬಾಬು ಇದ್ದಾರೆ
ಐಐಪಿಕೆಎಲ್‌ ಕಬಡ್ಡಿ ಟೂರ್ನಿಯನ್ನು ಮೇಯರ್‌ ಪುಷ್ಪಲತಾ ಜಗನ್ನಾಥ್‌ ಉದ್ಘಾಟಿಸಿದರು. ಎಲ್‌.ನಾಗೇಂದ್ರ, ಮರಿಯಪ್ಪ, ಮೋಹನ್, ರವಿಕಿರಣ್, ಎಂ.ವಿ.ಪ್ರಸಾದ್‌ ಬಾಬು ಇದ್ದಾರೆ   

ಮೈಸೂರು: ಯುವ ಪ್ರತಿಭೆಗಳಿಗೆ ವೇದಿಕೆಯೊದಗಿಸಿರುವ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ (ಐಐಪಿಕೆಎಲ್‌) ಟೂರ್ನಿಯ ಮೈಸೂರು ಲೆಗ್‌ನ ಪಂದ್ಯಗಳಿಗೆ ಶುಕ್ರವಾರ ವರ್ಣರಂಜಿತ ಚಾಲನೆ ಲಭಿಸಿತು.

ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಟೂರ್ನಿಗೆ ಮೇಯರ್‌ ಪುಷ್ಪಲತಾ ಜಗನ್ನಾಥ್‌ ಅವರು ಚಾಲನೆ ನೀಡಿದರು.

ಟೂರ್ನಿಯ ಮೊದಲ ಹಂತದ ಪಂದ್ಯಗಳು ಪುಣೆಯಲ್ಲಿ ನಡೆದಿದ್ದವು. ಇದೀಗ ಎರಡನೇ ಲೆಗ್‌ನ 17 ಪಂದ್ಯಗಳು ಮೈಸೂರಿನಲ್ಲಿ ನಡೆಯಲಿದ್ದು, ಸಾಂಸ್ಕೃತಿಕ ನಗರಿಯ ಕ್ರೀಡಾ ಪ್ರೇಮಿಗಳಿಗೆ ಕಬಡ್ಡಿ ಆಟದ ರಸದೌತಣ ಉಣಬಡಿಸಲಿದೆ.

ADVERTISEMENT

‍ಪ್ರೊ ಕಬಡ್ಡಿಗೆ ಪರ್ಯಾಯವಾಗಿ ಆರಂಭವಾಗಿರುವ ಈ ಲೀಗ್‌ನಲ್ಲಿ ಕರ್ನಾ ಟಕ ಒಳಗೊಂಡಂತೆ ವಿವಿಧ ರಾಜ್ಯಗಳ ಆಟಗಾರರು ಪಾಲ್ಗೊಂಡಿದ್ದಾರೆ.

ಐಐಪಿಕೆಎಲ್‌ಗೆ ಕಡಿಮೆ ಅವಧಿಯಲ್ಲೇ ಉತ್ತಮ ಬೆಂಬಲ ವ್ಯಕ್ತವಾಗಿದೆ. ಪ್ರೊ.ಕಬಡ್ಡಿಗೆ ಪರ್ಯಾಯವಾಗಿ ಆರಂಭವಾಗಿರುವ ಲೀಗ್‌ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ರೊ. ಕಬಡ್ಡಿ ಲೀಗ್‌ಗಿಂತ ಹೆಚ್ಚಿನ ಆಟಗಾರರಿಗೆ ಈ ಲೀಗ್‌ ಅವಕಾಶ ಮಾಡಿಕೊಟ್ಟಿದೆ ಎಂದು ನ್ಯೂ ಕಬಡ್ಡಿ ಫೆಡರೇಷನ್‌ ಆಫ್‌ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಎಂ.ವಿ.ಪ್ರಸಾದ್‌ ಬಾಬು ತಿಳಿಸಿದರು.

ಮಂಡ್ಯದ ಮೂವರು ಆಟಗಾರರು ಈ ಲೀಗ್‌ನಲ್ಲಿ ಆಡುತ್ತಿದ್ದಾರೆ. ತೆಲುಗು ಬುಲ್ಸ್‌ ತಂಡದ ಅಭಿಷೇಕ್‌, ದಿಲೆರ್‌ ದಿಲ್ಲಿ ತಂಡದಲ್ಲಿ ಶಶಿಧರ್‌ ಹಾಗೂ ಪುಣೆ ಪ್ರೈಡ್ ತಂಡದಲ್ಲಿ ವೆಂಕಟೇಶ್ ಅವರು ಸ್ಥಾನ ಪಡೆದುಕೊಂಡಿದ್ದಾರೆ. ಈ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ಕಳೆದ ತಿಂಗಳು ಮೈಸೂರಿನಲ್ಲೇ ನಡೆದಿತ್ತು.

ಟೂರ್ನಿಯ ಮೊದಲ ಲೆಗ್‌ನ ಪಂದ್ಯಗಳು ಮೇ 13 ರಿಂದ 21ರ ವರೆಗೆ ಪುಣೆಯಲ್ಲಿ ನಡೆದಿತ್ತು. ಮೈಸೂರಿನಲ್ಲಿ ಎರಡನೇ ಲೆಗ್‌ನ ಪಂದ್ಯಗಳು ಮೇ 29ರ ವರೆಗೆ ಆಯೋಜನೆಯಾಗಿವೆ. ಕೊನೆಯ ಲೆಗ್‌ನ ಪಂದ್ಯಗಳು ಮತ್ತು ಫೈನಲ್‌ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಲ್‌.ನಾಗೇಂದ್ರ, ಸಿಸಿಬಿ ಎಸಿಪಿ ಮರಿಯಪ್ಪ, ಟ್ರಾಫಿಕ್‌ ಎಸಿಪಿ ಮೋಹನ್, ಕಿರುತೆರೆ ನಟ ರವಿಕಿರಣ್ ಅವರು ಪಾಲ್ಗೊಂಡಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ವಿಕ್ರಮ್‌ ಸೂರಿ ಮತ್ತು ನಮಿತಾ ರಾವ್‌ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟು ಪ್ರೇಕ್ಷಕರನ್ನು ರಂಜಿಸಿದರು.

ಶನಿವಾರ ರಾತ್ರಿ 8 ಗಂಟೆಗೆ ಆರಂಭವಾಗಲಿರುವ ಪಂದ್ಯದಲ್ಲಿ ಚೆನ್ನೈ ಚಾಲೆಂಜರ್ಸ್‌– ಮುಂಬೈ ಚೆ ರಾಜೆ ಹಾಗೂ 9 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಹರಿಯಾಣ ಹೀರೋಸ್– ದಿಲೇರ್‌ ದಿಲ್ಲಿ ತಂಡಗಳು ಪೈಪೋಟಿ ನಡೆಸಲಿವೆ.

ಪಾಲ್ಗೊಂಡಿರುವ ತಂಡಗಳು: ‘ಎ’ ಗುಂಪು: ಪುಣೆ ಪ್ರೈಡ್‌, ಪಾಂಡಿಚೇರಿ ಪ್ರಿಡೇಟರ್ಸ್, ಬೆಂಗಳೂರು ರಿನೋಸ್‌, ಹರಿಯಾಣ ಹೀರೋಸ್

‘ಬಿ’ ಗುಂಪು: ದಿಲೇರ್‌ ದಿಲ್ಲಿ. ಚೆನ್ನೈ ಚಾಲೆಂಜರ್ಸ್, ಮುಂಬೈ ಚೆ ರಾಜೆ, ತೆಲುಗು ಬುಲ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.