ADVERTISEMENT

ಆಹ್ವಾನ ಪತ್ರಿಕೆಯಲ್ಲಿ ವಿಶ್ವನಾಥ್ ಹೆಸರಿಲ್ಲ:ಕನಕ ಜಯಂತಿಗೆ ಬಹಿಷ್ಕರಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 14:15 IST
Last Updated 14 ನವೆಂಬರ್ 2019, 14:15 IST

ಕೆ.ಆರ್.ನಗರ: ತಾಲ್ಲೂಕು ಆಡಳಿತದ ವತಿಯಿಂದ ನ.15ರ ಶುಕ್ರವಾರ ನಡೆಯಲಿರುವ ಕನಕ ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಹೆಸರು ಕೈಬಿಟ್ಟಿರುವುದನ್ನು ಖಂಡಿಸಿ, ಕಾರ್ಯಕ್ರಮ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚೀರ್ನಹಳ್ಳಿ ಶಿವಣ್ಣ ತಿಳಿಸಿದರು.

ವಿಶ್ವನಾಥ್ ಸಚಿವರಾಗಿ ಅನೇಕ ಕೆಲಸ ಮಾಡಿದ್ದಾರೆ. ಕುರುಬ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ನಮ್ಮ ತಾಲ್ಲೂಕಿನಲ್ಲಿ ನಡೆಯುವ ಕನಕ ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸದೆ, ಇಲ್ಲಿನ ತಹಶೀಲ್ದಾರ್ ಎಂ.ಮಂಜುಳಾ ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಇದರಿಂದ ತಾಲ್ಲೂಕು ಆಡಳಿತ ವತಿಯಿಂದ ನಡೆಯುವ ಕನಕ ಜಯಂತಿ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಗುರುವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ವಿಶ್ವನಾಥ್ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವಂತೆ ಸಂಘದ ವತಿಯಿಂದ ಸಲಹೆ ನೀಡಲಾಗಿತ್ತು. ನಮ್ಮ ಮನವಿ ಗಣನೆಗೆ ತೆಗೆದುಕೊಳ್ಳದೆ, ಉದ್ದೇಶ ಪೂರ್ವಕವಾಗಿ ವಿಶ್ವನಾಥ್ ಹೆಸರು ಕೈ ಬಿಡಲಾಗಿದೆ. ತಹಶೀಲ್ದಾರ್ ಪದೇ ಪದೇ ಕುರುಬ ಸಮಾಜಕ್ಕೆ ಅವಮಾನ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ಹೇಳಿದ ಅವರು, ಸರ್ಕಾರ ಕೂಡಲೇ ತಹಶೀಲ್ದಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಪುರಸಭೆ ಸದಸ್ಯ ಕೋಳಿ ಪ್ರಕಾಶ್, ತಾ.ಪಂ.ಪ್ರಭಾರ ಅಧ್ಯಕ್ಷ ಕೆ.ಪಿ.ಯೋಗೀಶ್ ಮಾತನಾಡಿದರು. ತಾಲ್ಲೂಕು ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಗರುಡಗಂಬ ಸ್ವಾಮಿ, ಸಂಘದ ಉಪಾಧ್ಯಕ್ಷ ಸಾಕರಾಜು, ನಿರ್ದೇಶಕರಾದ ಕಾಳೇನಹಳ್ಳಿ ಅಪ್ಪಾಜಿಗೌಡ, ಕೆ.ಎಂ.ಶ್ರೀನಿವಾಸ್, ಕೆ.ಎಚ್.ಬುಡಿಗೌಡ, ಎಂ.ಪಿ.ಶ್ರೀನಿವಾಸ್, ರಾಮಕೃಷ್ಣೇಗೌಡ, ಮುಖಂಡರಾದ ಬಸವರಾಜು, ಎಂ.ಎಸ್.ಅನಂತ್, ಹಲಗೇಗೌಡ, ನಾಗಣ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.