
ಮೈಸೂರು: ‘70ರ ದಶಕದಲ್ಲಿ ಆರಂಭವಾದ ರೈತ, ದಲಿತ, ಬಂಡಾಯ ಸೇರಿದಂತೆ ಜನಪರ ಚಳವಳಿಗಳಿಗೆ ಸ್ಪಂದಿಸಿದ ‘ಸಮುದಾಯ ಕರ್ನಾಟಕ’ವು ರಂಗ ಚಳವಳಿ ಕಟ್ಟಿತು’ ಎಂದು ವಿಮರ್ಶಕ ಪ್ರೊ.ಕೆ.ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.
ನಗರದ ಕಿರುರಂಗಮಂದಿರದ ಆವರಣದಲ್ಲಿ ‘ಮನುಷ್ಯತ್ವಡೆಡೆಗೆ ಸಮುದಾಯ 50’ ಆಶಯದಲ್ಲಿ ಶುಕ್ರವಾರ ಆರಂಭವಾದ 3 ದಿನಗಳ ‘ಸಮುದಾಯ ಮೈಸೂರು ರಂಗೋತ್ಸವ’ ಉದ್ಘಾಟಿಸಿ ಮಾತನಾಡಿ, ‘ಸಮುದಾಯವನ್ನು ಸಂಘಟನೆ ಎನ್ನಲಾಗದು, ನಾಡಿನ ಜನರ ಅಭಿವ್ಯಕ್ತಿಯಾಗಿ ರೂಪುಗೊಂಡ ಚಳವಳಿಯಿದು’ ಎಂದು ಬಣ್ಣಿಸಿದರು.
‘50 ವರ್ಷದ ಪಯಣ ನೆನಪು ಮಾಡಿಕೊಂಡರೆ, ಸಂತಸದ ಜೊತೆ ಆಶ್ಚರ್ಯವೂ ಆಗುತ್ತದೆ. ಆರಂಭದ ದಿನಗಳಲ್ಲಿ ನಾಡನ್ನು ಇಷ್ಟು ಪ್ರಭಾವಿಸುತ್ತದೆಂದು ನಾನು ಅಂದುಕೊಂಡಿರಲಿಲ್ಲ. ನಾಟಕಗಳನ್ನು ಮಾಡುತ್ತಾ ನಿರಂತರವಾಗಿ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ’ ಎಂದು ಹೇಳಿದರು.
ಒಗ್ಗಟ್ಟಾಗಬೇಕು: ‘ಕೋಮುವಾದಿಗಳು ಹಾಗೂ ಬಂಡವಾಳಶಾಹಿಗಳು ಒಂದಾಗಿವೆ. ಇಂಥ ಸಂದರ್ಭವನ್ನು ನೋಡುತ್ತಿದ್ದರೆ ಮನಸ್ಸು ಖಿನ್ನವಾಗುತ್ತದೆ. ಈ ಪ್ರತಿಗಾಮಿ ಶಕ್ತಿಗಳು ರಾಜಕೀಯ ಅಧಿಕಾರ ಹಿಡಿದಿರುವ ಹೊತ್ತಿನಲ್ಲಿ ಯುವ ಪ್ರಗತಿಪರ ಮನಸ್ಸುಗಳು ಸಂಘಟಿತರಾಗಬೇಕಿದೆ. ರೈತರು, ದಲಿತರು, ಪ್ರಗತಿಪರರು ಮತ್ತೆ ಒಗ್ಗಟ್ಟಾಗಬೇಕಿದೆ’ ಎಂದು ಮರುಳಸಿದ್ದಪ್ಪ ಪ್ರತಿಪಾದಿಸಿದರು.
‘ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್, ಪೆರಿಯಾರ್ ಸಿದ್ಧಾಂತದ ಪ್ರಭಾವ 70ರ ದಶಕದ ಚಳವಳಿಗಳಿಗಿತ್ತು. ಕನ್ನಡ ಸಾಹಿತ್ಯದಲ್ಲಿರುವುದು ಬೂಸಾ ಎಂಬ ಬಿ.ಬಸವಲಿಂಗಪ್ಪ ಅವರ ಹೇಳಿಕೆಯಿಂದ ಬೂಸಾ ಚಳವಳಿ ಆರಂಭವಾಯಿತು. ಅವರ ಹೇಳಿಕೆಯನ್ನು ಕುವೆಂಪು ಸಮರ್ಥಿಸಿಕೊಂಡರು. ಬಸವಲಿಂಗಪ್ಪ, ಲಂಕೇಶ್ ಅವರ ಮೇಲೆ ದಾಳಿಗಳು ಆದವು’ ಎಂದು ನೆನಪು ಮಾಡಿಕೊಂಡರು.
‘ದೇಶದಲ್ಲಿ ಜಾತಿ– ಧರ್ಮವೇ ಮುಖ್ಯವಾಗಿದೆ. ಮನುಷ್ಯರು ಮನುಷ್ಯರಾಗಿ ನೋಡಬೇಕಿದೆ. ಮನುಜಕುಲವೊಂದೇ ಎಂದ ಪಂಪ, ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ತತ್ವ ಅನುಸರಿಸಬೇಕಿದೆ. ಈಗ ನಮಗೆ ಹಿನ್ನೆಡೆಯಾಗಿರಬಹುದು. ಆದರೆ, ಬೆಳಕು ಬಂದೇ ಬರುತ್ತದೆಂಬ ಆಶಯದಲ್ಲಿ ಎಲ್ಲ ಜೀವಪರ ಮನಸ್ಸುಗಳು ಒಂದಾಗಬೇಕಿದೆ’ ಎಂದರು.
ಗಾಯಕರಾದ ದೇವಾನಂದ ವರಪ್ರಸಾದ್, ಶುಭಾ ರಾಘವೇಂದ್ರ, ತನುಶ್ರೀ, ಸಿ.ಎಂ.ನರಸಿಂಹಮೂರ್ತಿ, ಜಯಶಂಕರಮೇಸ್ತ್ರಿ ಮತ್ತು ನಾರಾಯಣಸ್ವಾಮಿ ಅವರು ‘ಮಂಟೇಸ್ವಾಮಿ ಕಾವ್ಯ’ ಹಾಡಿದರು.
ಸಮುದಾಯದ ಶ್ರೀನಿವಾಸ ಜಿ.ಕಪ್ಪಣ್ಣ, ಮಾವಳ್ಳಿ ಶಂಕರ್, ನಂದಾ ಹಳೆಮನೆ, ಪ್ರೊ.ಕೆ.ಪಿ.ವಾಸುದೇವನ್, ಜೆ.ಸಿ.ಶಶಿಧರ್, ಸವಿತಾ ಪ.ಮಲ್ಲೇಶ್, ಎಚ್.ಜನಾರ್ಧನ್ ಪಾಲ್ಗೊಂಡಿದ್ದರು.
ನಂತರ ಜಿಪಿಐಇಆರ್ ತಂಡದವರು ಮೈಮ್ ರಮೇಶ್ ನಿರ್ದೇಶನದ ಆಂಟನ್ ಚೆಕಾಫ್‌ನ ‘ವಾರ್ಡ್ ನಂ 6’ ನಾಟಕವನ್ನು ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.