ಮೈಸೂರು: 12ನೇ ಶತಮಾನದ ಕನ್ನಡದ ಪ್ರಮುಖ ವಚನಕಾರರಾದ ಬಸವಣ್ಣ, ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭುವಿನ ವಚನಗಳನ್ನು ರಷ್ಯನ್ನರು ಅವರದ್ದೇ ಭಾಷೆಯಲ್ಲಿ ಈಗ ಓದಬಹುದು! ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ಮೊದಲ ಬಾರಿಗೆ ಈ ವಿಶೇಷ ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ.
ರಷ್ಯಾದ ಗಲೀನಾ ಕೊಪಿಲೊವಿಚ್ ಅವರು ರಷ್ಯನ್ ಬಲ್ಲ ಇಲ್ಲಿನ ನಿವೃತ್ತ ಪ್ರಾಧ್ಯಾಪಕ ಎಚ್.ಎಸ್.ಹರಿಶಂಕರ್ ಅವರ ನೆರವಿನೊಂದಿಗೆ ಅನುವಾದಿಸುತ್ತಿದ್ದಾರೆ. ಅವರು ನಾಲ್ಕು ವರ್ಷದಿಂದ ಮೈಸೂರಿನಲ್ಲೇ ವಾಸವಿದ್ದು, ಮಾನಸಗಂಗೋತ್ರಿಯ ಮಾನವಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.
ಇದುವರೆಗೆ ಬಸವಣ್ಣನ ಹತ್ತು ವಚನಗಳ ಅನುವಾದ ಪೂರ್ಣಗೊಂಡಿವೆ. ಅಕ್ಕಮಹಾದೇವಿಯ ಹತ್ತು ವಚನಗಳ ಅನುವಾದ ನಡೆದಿದೆ. ಅಲ್ಲಮಪ್ರಭುವಿನ ಐದು ವಚನಗಳ ಅನುವಾದವೂ ಆಗಲಿದೆ.
ಪ್ರೊ.ಹರಿಶಂಕರ್ ಅವರ ಕುವೆಂಪುನಗರದ ಮನೆಯಲ್ಲಿಯೇ ಒಂದು ತಿಂಗಳಿಂದ ಅನುವಾದ ನಡೆದಿದ್ದು, ಪ್ರತಿ ವಚನಕ್ಕೆ ನಾಲ್ಕರಿಂದ ಐದು ದಿನ ನಿಗದಿ ಮಾಡಿಕೊಂಡಿದ್ದಾರೆ.
ಬಸವಣ್ಣನ ’ಕಳಬೇಡ, ಕೊಲಬೇಡ, ‘ಕಲ್ಲನಾಗರ ಕಂಡರೆ ಹಾಲನೆರೆಯೆಂಬರು’, ‘ಹಾವು ತಿಂದವರ ನುಡಿಸಬಹುದು’ ಸೇರಿದಂತೆ ಪ್ರಸಿದ್ಧ ವಚನಗಳ ಅನುವಾದ ಮುಗಿದಿದೆ. ಅಕ್ಕಮಹಾದೇವಿಯ ‘ಚಂದನವ ಕಡಿದು ಕೊರೆದು ತೇದಡೆ’, ‘ಸಾವಿಲ್ಲದ, ಕೇಡಿಲ್ಲದ’, ‘ಚಿಲಿಪಿಲಿ ಎಂದೋಡುವ ಗಿಳಿಗಳಿರಾ’, ವಚನಗಳ ಅನುವಾದ ನಡೆದಿದೆ. ಅಲ್ಲಮಪ್ರಭುವಿನ ವಚನಗಳ ಆಯ್ಕೆಯಾಗಬೇಕಿದೆ.
ಗಲೀನಾ ಅವರು ಇಲ್ಲಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ (ಸಿಐಐಎಲ್) 9 ತಿಂಗಳಲ್ಲಿ ಕನ್ನಡ ಕಲಿಯುವ ಡಿಪ್ಲೊಮ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಬಸವಣ್ಣನ ವಚನಗಳ ಬಗೆಗಿನ ಆಸಕ್ತಿಯೇ ಪ್ರೇರಣೆಯಾಗಿರುವುದು ವಿಶೇಷ. ಆಯುರ್ವೇದ ಮತ್ತು ಟಿಬೆಟನ್ ಔಷಧಿಗಳ ಜ್ಞಾನ ಪರಂಪರೆಯ ತೌಲನಿಕ ಅಧ್ಯಯನ ಅವರ ಸಂಶೋಧನೆಯ ವಿಷಯ.
ಐದು ದಶಕಗಳ ಹಿಂದೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದಾಗಲೇ ರಷ್ಯನ್ ಭಾಷೆ ಕಲಿತಿದ್ದ ಪ್ರೊ.ಹರಿಶಂಕರ್, ಕೆಲಕಾಲ ರಷ್ಯಾದಲ್ಲೇ ನೆಲೆಸಿ, ‘ಚೆಕಾಫನ ಕತೆಗಳು’, ‘ಟಾಲ್‌ಸ್ಟಾಯ್ ಕಥೆಗಳು’ ಸೇರಿ 15ಕ್ಕೂ ಹೆಚ್ಚು ಕೃತಿಗಳನ್ನು ಮೂಲ ಭಾಷೆಯಿಂದಲೇ ಅನುವಾದಿಸಿದ್ದಾರೆ. ರಷ್ಯನ್ನರಿಗೆ ಕನ್ನಡವನ್ನು ಕಲಿಸಿದ ಅಪರೂಪದ ವಿದ್ವಾಂಸರು.
ಜನಪ್ರಿಯ ವಚನಗಳು: ‘ಎಲ್ಲ ಭಾಷಿಕರಿಗೂ ಅರ್ಥವಾಗಬಲ್ಲ ಸಾಮಾನ್ಯ ಪರಿಭಾಷೆಗಳನ್ನು ಬಳಸಿದ ಜನಪ್ರಿಯ ವಚನಗಳನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ಪದಶಃ ಅರ್ಥ, ನಂತರ ಇಡೀ ವಚನ ಹೊರಹೊಮ್ಮಿಸುವ ಭಾವಾರ್ಥವೆರಡನ್ನೂ ಗಮನದಲ್ಲಿಟ್ಟುಕೊಂಡು ಅನುವಾದ ಮಾಡಲಾಗಿದೆ. ವಿಶ್ವಸಾಹಿತ್ಯಕ್ಕೆ ಶ್ರೇಷ್ಠ ಲೇಖಕರನ್ನು ಕೊಟ್ಟ ರಷ್ಯನ್ ಭಾಷೆಗೆ ವಚನಗಳ ಅನುವಾದ ಮೊದಲ ಬಾರಿಗೆ ನಡೆದಿದೆ’ ಎಂದು ಪ್ರೊ.ಹರಿಶಂಕರ್ ’ಪ್ರಜಾವಾಣಿ’ಗೆ ತಿಳಿಸಿದರು.
‘ವಚನಗಳನ್ನು ಗಲೀನಾ ಅವರು ಕನ್ನಡದಲ್ಲೇ ಓದುತ್ತಾರೆ. ನಂತರ ಅದರ ಅರ್ಥವನ್ನು ರಷ್ಯನ್ ಭಾಷೆಯಲ್ಲಿ ವಿವರಿಸುತ್ತೇನೆ. ನಂತರ ಇಬ್ಬರೂ ಅರ್ಥ, ಭಾವಕ್ಕೆ ಹೊಂದುವ ಸರಿಯಾದ ಪದ, ವಾಕ್ಯವನ್ನು ಸರಿಯಾದ ರೀತಿಯಲ್ಲಿ ಜೋಡಿಸಲು ಯತ್ನಿಸುತ್ತೇವೆ. ಹಲವು ಪ್ರಯತ್ನಗಳು, ತಿದ್ದುಪಡಿಗಳ ನಂತರ ಅನುವಾದವನ್ನು ಅಂತಿಮಗೊಳಿಸುತ್ತೇವೆ. ಅಂಕಿತನಾಮಗಳನ್ನು ಅನುವಾದಿಸದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ’ ಎಂದರು.
ವಿಶ್ವಸಾಹಿತ್ಯದಲ್ಲಿ ಅನನ್ಯವಾಗಿರುವ ವಚನಗಳ ಅನುವಾದ ಹೆಮ್ಮೆ ತಂದಿದೆ. ಭಾಷಾಶಾಸ್ತ್ರಜ್ಞೆಯಾದ ನನ್ನ ತಾಯಿಯೂ ಅನುವಾದ ಕಾರ್ಯದಲ್ಲಿ ನನಗೆ ನೆರವಾಗುತ್ತಿದ್ದಾರೆ.ಗಲೀನಾ ಕೊಪಿಲೊವಿಚ್
ವಚನಗಳನ್ನು ರಷ್ಯನ್ ಭಾಷೆಗೆ ಅನುವಾದಿಸಿರುವುದು ಅದ್ಭುತ ಕಾರ್ಯ. ಇದು ಜನರಿಗೆ ಗೊತ್ತಾಗಲಿ ಎಂದೇ ಮಠದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆಯ ತರಳಬಾಳು ಬೃಹನ್ಮಠ
ರಷ್ಯನ್‌ನಿಂದ ಕನ್ನಡಕ್ಕೆ ಕೃತಿಗಳನ್ನು ಅನುವಾದಿಸಿದ ಬಳಿಕ ರಷ್ಯನ್ ಭಾಷೆಗೆ ವಚನಗಳನ್ನು ಅನುವಾದಿಸುತ್ತಿರುವುದು ಸಂತಸ ತಂದಿದೆ.ಪ್ರೊ.ಎಚ್.ಎಸ್.ಹರಿಶಂಕರ್
ಸಿರಿಗೆರೆ ಮಠದ ಉತ್ತೇಜನ;
ವೆಬ್‌ಸೈಟ್‌ನಲ್ಲಿ ಪ್ರಕಟ ರಷ್ಯನ್‌ಗೆ ಅನುವಾದಗೊಂಡಿರುವ ಕೆಲವು ವಚನಗಳನ್ನು ಸಿರಿಗೆರೆಯ ತರಳಬಾಳು ಬೃಹನ್ಮಠದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತರಳಬಾಳು ಹುಣ್ಣಿಮೆಯ ಉತ್ಸವಕ್ಕೆ ಪ್ರೊ.ಹರಿಶಂಕರ್ ಮತ್ತು ಗಲೀನಾ ಅವರನ್ನು ಆಹ್ವಾನಿಸಿದ್ದಾರೆ. ‘ಶರಣ ಸಾಹಿತ್ಯ ಮತ್ತು ಸಮಾಜ’ ಗೋಷ್ಠಿಯಲ್ಲಿ ಇಬ್ಬರೂ ಮಾತನಾಡಲಿದ್ದಾರೆ. ರಷ್ಯನ್ ಅನುವಾದದ ಓದಿಗೆ: http://vachana.taralabalu.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.