
ನಂಜನಗೂಡು: ನಗರದ ಕಪಿಲಾ ನದಿ ತೀರದ ಸ್ನಾನಘಟ್ಟದಲ್ಲಿ ಯುವ ಬ್ರಿಗೇಡ್‌ನಿಂದ ಭಾನುವಾರ ಆಯೋಜಿಸಿದ್ದ ಕಪಿಲಾ ಆರತಿ, ಲಕ್ಷ ದೀಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ರಾತ್ರಿ 7.30ಕ್ಕೆ ನದಿಯಲ್ಲಿನ ಹದಿನಾರು ಕಾಲು ಮಂಟಪದಲ್ಲಿ ಸ್ಥಾಪಿಸಲಾಗಿದ್ದ ಶಿವಲಿಂಗಕ್ಕೆ ರಾಮಕೃಷ್ಣ ಆಶ್ರಮದ ಸ್ವಾಮಿ ಸರ್ವಜಯಾನಂದ ಜೀ, ಸ್ವಾಮಿ ಪ್ರಮಥಾಧಿಪಾನಂದ ಹಾಗೂ ಗೋಪಾಲ್ ಜೀ ಅವರು ಅಷ್ಟತೀರ್ಥಗಳ ಅಭಿಷೇಕ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ದೋಣಿ ಮೂಲಕ ಗಣ್ಯರನ್ನು ನದಿ ಮಧ್ಯದಲ್ಲಿ ಕಟ್ಟಿದ್ದ ವೇದಿಕೆಗೆ ಕರೆದೊಯ್ಯಲಾಯಿತು.
ವೇದಿಕೆಯಲ್ಲಿನ ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಗೋಪಾಲ್ ಜೀ, ‘ಹಾಲು ಕೊಡುವ ಗೋವನ್ನು ಗೋಮಾತೆ, ಜೀವ ಜಲ ನೀಡುವ ನದಿಗಳನ್ನು ಗಂಗಾ ಮಾತೆ, ತುಂಗಾ ಮಾತೆ, ಕಪಿಲಾ ಮಾತೆ ಎಂದು ಕರೆದು ತಾಯಿಯ ಸ್ಥಾನ ನೀಡಿ ಪೂಜಿಸವ ಶ್ರೇಷ್ಠ ಪರಂಪರೆ, ಸಂಸ್ಕೃತಿ ನಮ್ಮದು’ ಎಂದರು.
‘ಇಂತಹ ನದಿಗಳಿಗೆ ತ್ಯಾಜ್ಯ, ಹಳೇ ಬಟ್ಟೆಗಳನ್ನು ಬಿಟ್ಟು ನೀರನ್ನು ಕಲುಷಿತಗೊಳಿಸಬಾರದು. ಯುವ ಬ್ರಿಗೇಡ್ ಸಾರ್ವಜನಿಕರ ಸಹಕಾರದಿಂದ ಕಳೆದ 10 ವರ್ಷಗಳಿಂದ ಕಪಿಲಾ ನದಿಯನ್ನು ಸ್ವಚ್ಛಗೊಳಿಸಿ, ಕಪಿಲಾ ಆರತಿ ಕಾರ್ಯಕ್ರಮ ನಡೆಸುತ್ತಿದೆ. ಮೊದಲಿಗೆ ನದಿಯಲ್ಲಿ ಟನ್‌ಗಟ್ಟಲೆ ತ್ಯಾಜ್ಯ ತೆಗೆಯಲಾಗುತ್ತಿತ್ತು, ಕಪಿಲಾ ಆರತಿ ಕಾರ್ಯಕ್ರಮ ನಡೆಸಿದ ಮೇಲೆ ತ್ಯಾಜ್ಯ ಎಸೆಯುವ ಪ್ರವೃತ್ತಿ ಕಡಿಮೆಯಾಗಿದೆ’ ಎಂದರು.
ಸ್ವಾಮಿ ಸರ್ವಜಯಾನಂದ ಜೀ ಮಾತನಾಡಿ, ‘ನಮ್ಮ ಸಂಸ್ಕೃತಿಯಲ್ಲಿ ನದಿಗಳಿಗೆ ಪವಿತ್ರವಾದ ಸ್ಥಾನವಿದೆ, ಕಪಿಲೆಯಲ್ಲಿ ದಿನಂಪ್ರತಿ ಪುಣ್ಯ ಸ್ನಾನ ಮಾಡುವ ಸಾವಿರಾರು ಭಕ್ತರು ತಮ್ಮ ಪಾಪವನ್ನು ಕಳೆದುಕೊಂಡು ಪುನೀತರಾಗುತ್ತಾರೆ, ಇಂತಹ ಪುಣ್ಯ ನದಿಗೆ ತ್ಯಾಜ್ಯವನ್ನು ಎಸೆದು ಮಲೀನಗೊಳಿಸಬಾರದು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷ್ಣಜೋಯಿಸ್ ನೇತೃತ್ವದ 5 ಮಂದಿ ಋತ್ವಿಕರು ಕಪಿಲಾ ನದಿಗೆ ಧೂಪ, ದೀಪದ ಆರತಿ ಬೆಳೆಗಿದರು. ನದಿಯ ಸೋಪಾನ ಕಟ್ಟೆಯ ಮೇಲೆ ಮಹಿಳೆಯರು ಲಕ್ಷಾಂತರ ದೀಪಗಳನ್ನು ಹಚ್ಚಿ ದೇವರನ್ನು ಪ್ರಾರ್ಥಿಸಿದರು. ಯುವಕರು ಹದಿನಾರು ಕಾಲು ಮಂಟಪದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಎಸ್.ಚಂದ್ರಶೇಖರ್, ತಾಲ್ಲೂಕು ಸಂಚಾಲಕ ನಿತೀನ್, ಗಿರೀಶ್, ಸುನೀಲ್, ಸುರೇಶ್, ಎನ್.ವಿ.ರವಿಶಾಸ್ತ್ರಿ, ಚರಣ್, ಕಿಶೋರ್, ಅರ್ಜುನ್, ಮಹದೇವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.