ADVERTISEMENT

ಚಕ್ರವ್ಯೂಹದಲ್ಲಿ ಸಿದ್ದರಾಮಯ್ಯ: ಸಿ.ಟಿ.ರವಿ

ಸೋಲುವ ಭಯದಿಂದ ಲಿಂಗಾಯತರ ವಿರುದ್ಧ ಹೇಳಿಕೆ: ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2023, 5:23 IST
Last Updated 25 ಏಪ್ರಿಲ್ 2023, 5:23 IST
ಸಿದ್ದರಾಮಯ್ಯ ಹಾಗೂ ಸಿ.ಟಿ.ರವಿ
ಸಿದ್ದರಾಮಯ್ಯ ಹಾಗೂ ಸಿ.ಟಿ.ರವಿ   

ಮೈಸೂರು: ‘ವರುಣ ಕ್ಷೇತ್ರಕ್ಕೆ ಬಂದು ಚಕ್ರವ್ಯೂಹದಲ್ಲಿ ಸಿಲುಕಿಕೊಂಡೆನೆಂದು ಸಿದ್ದರಾಮಯ್ಯ ಅವರಿಗೆ ಅನ್ನಿಸಿದೆ. ಹೀಗಾಗಿಯೇ ಲಿಂಗಾಯತ ಮುಖ್ಯಮಂತ್ರಿ ಭ್ರಷ್ಟ ಎಂಬ ಹೇಳಿಕೆ ಮೂಲಕ ಅಸಹನೆ ವ್ಯಕ್ತಪಡಿಸಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಕ್ರವ್ಯೂಹದಿಂದ ಪಾರಾಗಲು ಎಲ್ಲ ಸಾಮರ್ಥ್ಯವನ್ನು ವಿನಿಯೋಗಿಸುತ್ತಿದ್ದಾರೆ. ಲಿಂಗಾಯತರ ಜೊತೆಗೆ ಇತರ ಸಮುದಾಯಗಳು ಒಂದಾಗಿವೆ. ಹೀಗಾಗಿಯೇ ಸೋಲುವ ಭಯ ಮೂಡಿದೆ’ ಎಂದರು.

‘ಜೆಡಿಎಸ್‌– ಬಿಜೆ‍ಪಿ ಒಪ್ಪಂದ ಮಾಡಿಕೊಂಡಿವೆ ಎಂದು ಸಿದ್ದರಾಮಯ್ಯ ದೂರುತ್ತಿದ್ದಾರೆ. ಯಾವುದೇ ಒಪ್ಪಂದವೂ ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು.‌‌

ADVERTISEMENT

‘ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಕನಸು ಕಾಣುತ್ತಿದೆ. ಚಿಕ್ಕಮಗಳೂರಿನಲ್ಲಿ ಆ ಪಕ್ಷದ ಭೋಜೇಗೌಡ ಅವರು ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ. ಹೀಗಾಗಿ, ಚುನಾವಣಾ ಪೂರ್ವ ಒಳ ಒಪ್ಪಂದವಾಗಿದೆಯೇ ಎಂಬುದನ್ನು ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಲಿ’ ಎಂದರು.

‘ವಿ.ಸೋಮಣ್ಣ ಕೇವಲ ಗೋವಿಂದರಾಜ ಕ್ಷೇತ್ರದ ನಾಯಕರಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಅವರಂತೆಯೇ ಅವರು ರಾಜ್ಯದ ನಾಯಕರು. ಮತಗಳು ಪಾಲಾಗಿಬಿಡುವ ಭಯದಲ್ಲಿ ಅವರ ಪ್ರಚಾರಕ್ಕೆ ತಡೆಯೊಡ್ಡಲಾಗುತ್ತಿದೆ. ಆದರೆ, ಸೋಮಣ್ಣ ಅವರನ್ನು ಸೋಲಿಸಲು ಆಗುವುದಿಲ್ಲ’ ಎಂದು ಗುಡುಗಿದರು.

‘ಸಾಮಾಜಿಕ ನ್ಯಾಯದ ಮೇಲೆ ಪಕ್ಷಕ್ಕೆ ಬದ್ಧತೆ ಇದ್ದುದರಿಂದಲೇ ಪರಿಶಿಷ್ಟರ ಮೀಸಲಾತಿ ಹೆಚ್ಚಿಸಲಾಗಿದೆ. ಒಳ ಮೀಸಲಾತಿ ಜಾರಿಗೊಳಿಸಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಒಳಮೀಸಲಾತಿ ಕುರಿತ ಕಡತವನ್ನು ಬಿಸಾಡಿದ್ದರು ಎಂದು ಅಂದಿನ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಅವರೇ ಹೇಳಿದ್ದಾರೆ. ರಾಜಕೀಯ ತಾಕತ್ತು ಇದ್ದರೆ, ಯಾರ ಮೀಸಲಾತಿ ವಾಪಸ್‌ ಪಡೆಯುತ್ತೀರಿ ಎಂಬುದನ್ನು ಸ್ಪಷ್ಟ‍ಪಡಿಸಲಿ’ ಎಂದು ಸವಾಲು ಹಾಕಿದರು.

‘ಸಂವಿಧಾನ ಗೌರವ ದಿನ ಆರಂಭಿಸಿದ್ದು, ಅಂಬೇಡ್ಕರ್ ಅವರ ಪಂಚಧಾಮಗಳನ್ನು ಅಭಿವೃದ್ಧಿಗೊಳಿಸಿದ್ದು ಬಿಜೆಪಿ. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುತ್ತಿರುವುದು ನಮ್ಮದೇ ಪಕ್ಷ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.   

ಶಾಸಕ ಎಲ್‌.ನಾಗೇಂದ್ರ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ, ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್‌, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್‌, ಜಿಲ್ಲಾ ವಕ್ತಾರ ಡಾ.ಕೆ.ವಸಂತಕುಮಾರ್‌, ಮುಖಂಡರಾದ ದೇವನೂರ ಪ್ರತಾಪ್‌, ಮಿರ್ಲೆ ಶ್ರೀನಿವಾಸಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.