ADVERTISEMENT

ಅಲ್ಪಸಂಖ್ಯಾತರ ಅನುದಾನ ಕಡಿತಗೊಳಿಸದವರು ಗೆಲ್ಲಬೇಕೆ: ಜಮೀರ್ ಅಹಮದ್

​ಪ್ರಜಾವಾಣಿ ವಾರ್ತೆ
Published 4 ಮೇ 2023, 13:01 IST
Last Updated 4 ಮೇ 2023, 13:01 IST
ಕೆ.ಆರ್.ನಗರ ಮುಸ್ಲಿಂ ಬಡಾವಣೆಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಇದ್ದಾರೆ
ಕೆ.ಆರ್.ನಗರ ಮುಸ್ಲಿಂ ಬಡಾವಣೆಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಇದ್ದಾರೆ   

ಕೆ.ಆರ್.ನಗರ: 'ಜೆಡಿಎಸ್‌ಗೆ ಮತದಾನ ನೀಡಿದರೆ ಅದು ಬಿಜೆಪಿಗೆ ಮತದಾನ ಮಾಡಿದಂತಾಗುತ್ತದೆ’ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದರು.

ಇಲ್ಲಿನ ಮುಸ್ಲಿಂ ಬಡಾವಣೆಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಸ್ಲಾಂ ಧರ್ಮ ಜಾತಿ ಭೇದ ಮಾಡಿ ಎಂದು ಎಲ್ಲೂ ಹೇಳಿಲ್ಲ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇರುವಂತೆ, ಸಹೋದರರಂತೆ ಬಾಳುವಂತೆ, ದೇಶ ಪ್ರೇಮಿಯಾಗಿರುವಂತೆ ತಿಳಿಸಿದೆ’ ಎಂದು ಹೇಳಿದರು.

ADVERTISEMENT

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಮೊದಲು ಅಲ್ಪಸಂಖ್ಯಾತರ ಇಲಾಖೆಗೆ ಕೇವಲ ₹ 400 ಕೋಟಿ ಅನುದಾನ ನೀಡಲಾಗುತ್ತಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ₹ 3,150 ಕೋಟಿಗೆ ಅನುದಾನ ಹೆಚ್ಚಿಸಿದರು. ವಿದ್ಯಾರ್ಥಿ ವೇತನಕ್ಕಾಗಿ ₹ 1,600 ಕೋಟಿ ಅನುದಾನ ನೀಡಿದರು. ಬಡ ವ್ಯಾಪಾರಿಗಳಿಗಾಗಿ ಹಲವು ಯೋಜನೆಗಳು ಜಾರಿಗೆ ತಂದರು’ ಎಂದು ಹೇಳಿದರು.

‘ಕಾಂಗ್ರೆಸ್ ಸರ್ಕಾರ ರಚನೆ ಮಾಡುವಷ್ಟು ಸ್ಥಾನಗಳು ಗೆಲ್ಲದಿರುವುದರಿಂದ ಜೆಡಿಎಸ್‌ನವರು ಬಿಜೆಪಿಯೊಂದಿಗೆ ಹೋಗಬಾರದು ಎನ್ನುವ ಕಾರಣಕ್ಕೆ ಕಡಿಮೆ ಸ್ಥಾನ ಹೊಂದಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲಾಯಿತು. ಶಾಸಕ ಸಾ.ರಾ.ಮಹೇಶ್ ಸಚಿವರಾದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಅನುದಾನ ಕಡಿತಗೊಳಿಸಿದ ಇವರನ್ನು ಗೆಲ್ಲಿಸಬೇಕಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ಗೆ 140ರಿಂದ 150 ಸ್ಥಾನಗಳು ಬರಲಿವೆ ಎಂದು ವಿವಿಧ ಸರ್ವೆ ತಿಳಿಸಿವೆ’ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಮಾತನಾಡಿ, ‌‘ಕ್ಷೇತ್ರದಲ್ಲಿ ನಿಮ್ಮಗಳ ಸೇವೆ ಮಾಡಲು ನಮಗೂ ಒಂದು ಬಾರಿ ಅವಕಾಶ ನೀಡಬೇಕು. ಇಲ್ಲಿನ ನಿವಾಸಿಗಳು ಜೀವನ ನಿರ್ವಹಣೆ ಮಾಡುತ್ತಿರುವುದು ಹತ್ತಿರದಿಂದ ಗಮನಿಸಿದ್ದೇನೆ. ಮುಸ್ಲಿಂ ಬ್ಲಾಕ್ ಮಾದರಿ ಬಡಾವಣೆಯನ್ನಾಗಿ ನಿರ್ಮಿಸುವುದು ನನ್ನ ಜವಾಬ್ದಾರಿಯಾಗಿದೆ. ಮೇ 13ರಂದು ಶಾಸಕನಾಗಿ ಆಯ್ಕೆಯಾಗುವ ಭರವಸೆ ಹೊಂದಿದ್ದೇನೆ. ಅದಕ್ಕೆ ಇಲ್ಲಿರುವ ಜನಮನ್ನಣೆಯೇ ಸಾಕ್ಷಿಯಾಗಿದೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಲ್ಲಿನ ಶಾದಿ ಮಹಲ್ ನಿರ್ಮಾಣಕ್ಕೆ ₹ 40 ಲಕ್ಷ ಅನುದಾನ ನೀಡಿದ್ದರು. ಕಾಮಗಾರಿ ಪೂರ್ಣಗೊಳ್ಳದೆ ಕಳೆದ 10 ವರ್ಷಗಳಿಂದ ಕಟ್ಟಡ ಪಾಳು ಬಿದ್ದಿದೆ. ನಾನು ಶಾಸಕನಾಗಿ ಆಯ್ಕೆಯಾದರೆ ಶಾದಿ ಮಹಲ್ ಕಟ್ಟಡ ಪೂರ್ಣಗೊಳಿಸುವುದು ನನ್ನ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ಮುಖಂಡ ದೊಡ್ಡಸ್ವಾಮೇಗೌಡ, ಪುರಸಭೆ ಅಧ್ಯಕ್ಷ ಸಯ್ಯದ್ ಸಿದ್ದಿಕ್, ಸದಸ್ಯ ಜಾವೀದ್ ಪಾಷ, ವಕ್ತಾರ ಸಯ್ಯದ್ ಜಾಬೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.