ADVERTISEMENT

ರಾಜ್ಯ ಬಜೆಟ್ 2023: ನಿರೀಕ್ಷೆ ಹುಸಿ, ಮೈಸೂರು ಜಿಲ್ಲೆಗೆ ಸುಣ್ಣ!

ಹಳೆಯ ಯೋಜನೆಗಳನ್ನೇ ಮತ್ತೊಮ್ಮೆ ಪ್ರಸ್ತಾ‍ಪಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಎಂ.ಮಹೇಶ
Published 17 ಫೆಬ್ರುವರಿ 2023, 10:16 IST
Last Updated 17 ಫೆಬ್ರುವರಿ 2023, 10:16 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಿದ 2023–24ನೇ ಸಾಲಿನ ಬಜೆಟ್‌ನಲ್ಲಿ ಮೈಸೂರಿಗೆ ಮಹತ್ವದ ಕೊಡುಗೆ ಪ್ರಕಟಿಸದಿರುವುದು ಇಲ್ಲಿನ ಜನರಲ್ಲಿ ತೀವ್ರ ನಿರಾಸೆ ಉಂಟು ಮಾಡಿದೆ. ಮಹತ್ವದ ಜಿಲ್ಲೆಯ ಪಾಲಿಗೆ ಸಿಕ್ಕಿರುವುದು ಸುಣ್ಣವಷ್ಟೆ.

ಹಲವು ನಿರೀಕ್ಷೆಗಳನ್ನು ಇಲ್ಲಿನ ಜನರು ಇಟ್ಟುಕೊಂಡಿದ್ದರು. ಆದರೆ, ಅವುಗಳಿಗೆ ಸ್ಪಂದನೆ ಸಿಕ್ಕಿಲ್ಲ. ಕೆಲವು ಹಳೆಯ ಯೋಜನೆಗಳನ್ನೇ ಮತ್ತೊಮ್ಮೆ ಪ್ರಸ್ತಾಪಿಸಲಾಗಿದೆ! ಕೇಂದ್ರ ಸರ್ಕಾರದ ಯೋಜನೆಗಳನ್ನೂ ರಾಜ್ಯ ಸರ್ಕಾರದ್ದು ಎನ್ನುವಂತೆ ಉಲ್ಲೇಖಿಸಲಾಗಿದ್ದು, ಅವು ಕೂಡ ಹಳೆಯವೇ!

ಮೈಸೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಐವಿಎಫ್‌ (ಪ್ರನಾಳ ಶಿಶು) ಕ್ಲಿನಿಕ್‌ ಸ್ಥಾಪನೆ ಹಾಗೂ ನಗರದ ಚಾಮುಂಡಿವಿಹಾರ ಕ್ರೀಡಾಂಗಣದ ಬಳಿ ಎರಡೂವರೆ ಎಕರೆ ಜಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ರಾಜ್ಯ ವಸ್ತುಸಂಗ್ರಹಾಲಯ ಮತ್ತು ಕಲಾಗ್ಯಾಲರಿಯನ್ನು ₹ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಹೇಳಲಾಗಿದೆ. ಇವೆರಡಷ್ಟೇ ಹೊಸವು.

ADVERTISEMENT

ಮುಖ್ಯಮಂತ್ರಿ ಭರವಸೆಯೇ ಈಡೇರಿಲ್ಲ!: ಜಿಲ್ಲೆಯ ಯಾವೊಂದು ತಾಲ್ಲೂಕಿಗೂ ಹೊಸ ಯೋಜನೆ ಇಲ್ಲ! ಎಚ್‌.ಡಿ.ಕೋಟೆ ತಾಲ್ಲೂಕಿನ ಕಬಿನಿ ಬಳಿ ಕಪಿಲಾ ನದಿಗೆ ನಿರ್ಮಿಸಿರುವ ಜಲಾಶಯದ ಉದ್ಯಾನವನ್ನು ಮಂಡ್ಯದ ಕೆ.ಆರ್‌.ಎಸ್. ಬೃಂದಾವನದ ಮಾದರಿಯಲ್ಲಿ ನಿರ್ಮಿಸಬೇಕು ಎಂಬ ಬೇಡಿಕೆಗೆ ಈ ಬಾರಿಯೂ ಸ್ಪಂದನೆ ಸಿಕ್ಕಿಲ್ಲ. ಹೋದ ವರ್ಷ, ಜಲಾಶಯಕ್ಕೆ ಬಾಗಿನ ಸಲ್ಲಿಸಲು ಬಂದಿದ್ದಾಗ ಸ್ವತಃ ಮುಖ್ಯಮಂತ್ರಿಯೇ ನೀಡಿದ್ದ ಭರವಸೆಯೂ ಈಡೇರಿಲ್ಲ.

‘ಪಾರಂಪರಿಕ ನಗರಿ’ ಎಂದೇ ಹೆಸರು ಗಳಿಸಿರುವ ನಗರದಲ್ಲಿ ಸರ್ಕಾರಿ ಸ್ವಾಮ್ಯದ ಪಾರಂಪರಿಕ ಕಟ್ಟಡಗಳು ಕುಸಿದು ಬೀಳುತ್ತಿವೆ. ಇದನ್ನು ತಡೆಯಲು ಸಂರಕ್ಷಣೆಗಾಗಿ ಯೋಜನೆ ಜಾರಿಗೊಳಿಸಬೇಕಿದೆ. ಇದಕ್ಕೆ ‘ಆರ್ಥಿಕ ಚೈತನ್ಯ’ ಅಗತ್ಯ. ಆದರೆ, ಬಜೆಟ್‌ನಲ್ಲಿ ಮೈಸೂರಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕ್ರಮ ಎಂದಷ್ಟೆ ಹೇಳಲಾಗಿದೆ. ಅನುದಾನದ ಪ್ರಸ್ತಾಪವನ್ನೇ ಮಾಡಿಲ್ಲ. ಹಣವೇ ಇಲ್ಲದೇ ಸಂರಕ್ಷಣೆಗೆ ಹೇಗೆ ಕ್ರಮ ವಹಿಸಲಾಗುತ್ತದೆ ಎನ್ನುವುದೇ ಪ್ರಶ್ನೆ. ₹ 100 ಕೋಟಿ ಅನುದಾನ ಕೇಳಲಾಗಿದೆ ಎಂದು ಮೇಯರ್ ಶಿವಕುಮಾರ್ ತಿಳಿಸಿದ್ದರು.

ಇಮ್ಮಾವು ಬಳಿ ಚಿತ್ರನಗರಿ ನಿರ್ಮಾಣಕ್ಕೆ ಅನುದಾನ ಬಗ್ಗೆಯೂ ‍ಪ್ರಸ್ತಾಪವಿಲ್ಲ.

ದೊರೆಯಬಹುದಾದವು: ಪ್ರತಿ ಜಿಲ್ಲೆಗೆ ಒಂದರಂತೆ, ಅತಿ ಹೆಚ್ಚು ದಾಖಲಾತಿ ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ ‘ವೃದ್ಧಿ’ ಯೋಜನೆಯಲ್ಲಿ ತಲಾ ₹2 ಕೋಟಿ ನೀಡಿ ಮೂಲಸೌಲಭ್ಯಗಳನ್ನು ಒದಗಿಸಿ ಅವುಗಳನ್ನು ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳನ್ನಾಗಿ ರೂಪಿಸಲಾಗುವುದು ಎಂದು ಹೇಳಲಾಗಿದ್ದು, ಇದರಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಸಿಗಬಹುದು.

ಎಲ್ಲ ಜಿಲ್ಲೆಗಳಲ್ಲಿ ‘ಹ್ಯಾಂಡ್ ಹೆಲ್ಡ್ ಎಕ್ಸರೇ’ ಯಂತ್ರಗಳ ಸಹಾಯದಿಂದ ಕ್ಷಯ ರೋಗಿಗಳ ಆರಂಭಿಕ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಸಮುದಾಯ ಆಧಾರಿತ ಆರೋಗ್ಯ ತಪಾಸಣೆಗೆ ಕ್ರಮ ಎಂದು ಹೇಳಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಪ್ರಯೋಗಾಲಯ ಸ್ಥಾಪನೆ ಎಂದು ಹೇಳಲಾಗಿದ್ದು, ಅದರಲ್ಲೂ ಮೈಸೂರು ಪರಿಗಣನೆಗೆ ಬರಬಹುದು. ಮೈಸೂರಿನಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದಷ್ಟೇ ಪ್ರಸ್ತಾಪಿಸಲಾಗಿದೆ. ಜಿಲ್ಲೆಗೊಂದರಂತೆ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರವಾಗಿ ಉನ್ನತೀಕರಿಸಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸುವುದಾಗಿಯೂ ಸರ್ಕಾರ ಹೇಳಿದೆ.

ಮೈಸೂರಿನಲ್ಲಿ ‘ಇಂಟಿಗ್ರೇಟೆಡ್ ಟೌನ್‌ಶಿಪ್‌’ ನಿರ್ಮಾಣಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ಇದು ಹಿಂದಿನಿಂದಲೂ ಹೇಳಲಾಗುತ್ತಿರುವುದೇ!

ಮೈಸೂರು–ಕುಶಾಲನಗರ ಮಾರ್ಗದಲ್ಲಿ 92 ಕಿ.ಮೀ. ಹೆದ್ದಾರಿ ನಿರ್ಮಾಣಕ್ಕೆ ₹ 4,128 ಕೋಟಿ ವೆಚ್ಚದ ಯೋಜನೆ ಹಾಗೂ ಮೈಸೂರು ವಿಮಾನನಿಲ್ದಾಣ ಉನ್ನತೀಕರಿಸಲು ಭೂಸ್ವಾಧೀನಕ್ಕೆ ಕ್ರಮ ವಹಿಸಲಾಗಿದ್ದು, ಇದಕ್ಕಾಗಿ ₹ 320 ಕೋಟಿ ಹಂಚಿಕೆ ಮಾಡಲಾಗಿದೆ ಎನ್ನುವುದೂ ಹಳೆಯದು.

‘ಪ್ರಸಾದ್’ ಯೋಜನೆಯಲ್ಲಿ ಚಾಮುಂಡಿಬೆಟ್ಟದ ಅಭಿವೃದ್ಧಿ ಹಾಗೂ ‘ಸ್ವದೇಶಿ ದರ್ಶನ್‌ 2.0’ ಯೋಜನೆಯಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ. ಇವರಡೂ ಕೇಂದ್ರ ಸರ್ಕಾರದ ಯೋಜನೆಗಳಾಗಿವೆ.

ಮೈಸೂರು ಜಿಲ್ಲೆಗೆ ಚಿರತೆ ಕಾರ್ಯಪಡೆಯನ್ನು ಈಗಾಗಲೇ ರಚಿಸಲಾಗಿದ್ದು, ಸಿಬ್ಬಂದಿಗೆ ನೇಮಕಕ್ಕೆ ಅನುಮೋದನೆ ನೀಡಿರುವುದನ್ನು ಪ್ರಸ್ತಾಪಿಸಲಾಗಿದೆ. ಅಗತ್ಯ ಪರಿಕರಕ್ಕೆ ಬೇಕಾದ ಅನುದಾನದ ಪ್ರಸ್ತಾಪವಿಲ್ಲ. ಮೈಸೂರಿನಲ್ಲಿ ವಾಹನ ತಪಾಸಣೆ ಮತ್ತು ಪ್ರಮಾಣೀಕರಣ ಕೇಂದ್ರ ಸ್ಥಾಪಿಸಿರುವುದನ್ನೂ ಉಲ್ಲೇಖಿಸಲಾಗಿದೆ.

ಚುನಾವಣೆ ಹೊಸ್ತಿಲಲ್ಲಿ ಮಂಡಿಸಲಾಗುತ್ತಿರುವ ಬಜೆಟ್‌ನಲ್ಲಿ ಜಿಲ್ಲೆಗೆ ಬಂಪರ್ ಕೊಡುಗೆ ದೊರೆಯಬಹುದು ಎಂಬ ಜನರ ನಿರೀಕ್ಷೆಯ ಮೇಲೆ ಮುಖ್ಯಮಂತ್ರಿ ತಣ್ಣೀರು ಎರಚಿದ್ದಾರೆ. ಹಳೆಯ ಮೈಸೂರು ಭಾಗದ ಪ್ರಮುಖ ಜಿಲ್ಲೆಯನ್ನು ಕಡೆಗಣಿಸಿರುವುದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜನರ ನಿರೀಕ್ಷೆ, ಬೇಡಿಕೆಗಳೇನಿದ್ದವು?

* ದಸರಾ ಪ್ರಾಧಿಕಾರ ರಚನೆ

* ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ

* ಮೈಸೂರಿನಲ್ಲಿ ಸ್ಥಗಿತಗೊಂಡಿರುವ ರಫ್ತು ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುದಾನ

* ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ₹ 100 ಕೋಟಿ ವಿಶೇಷ ಅನುದಾನ, ಬೋಧಕ ಹಾಗೂ ಬೋಧಕೇತರರ ಹುದ್ದೆ ಭರ್ತಿಗೆ ಕ್ರಮ

* ರಾಷ್ಟ್ರಕವಿ ಕುವೆಂಪು ಮನೆಯನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸುವುದು

* ಕಬಿನಿ, ನುಗು ಜಲಾಶಯದ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆ

* ಮೈಸೂರು ಮಹಾನಗರಪಾಲಿಕೆಯನ್ನು ಬೃಹತ್‌ ನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಬೇಕು

* ಮೈಸೂರು ನಗರ ಬಸ್ ನಿಲ್ದಾಣವನ್ನು ಗ್ರಾಮಾಂತರ ಬಸ್ ನಿಲ್ದಾಣಕ್ಕೆ, ಗ್ರಾಮಾಂತರ ಬಸ್ ನಿಲ್ದಾಣವನ್ನು ಹೊರವಲಯಕ್ಕೆ ಸ್ಥಳಾಂತರಿಸಬೇಕು

* ಜಿಲ್ಲೆಯ ಹೊಸ ತಾಲ್ಲೂಕುಗಳಾದ ಸಾಲಿಗ್ರಾಮ, ಸರಗೂರಿಗೆ ವಿಶೇಷ ಅನುದಾನ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.