
* ಕೃಷಿ-ತೋಟಗಾರಿಕೆ-ನೀರಾವರಿ ಇಲಾಖೆಗಳ ಅಧಿಕಾರಿಗಳು ಜಂಟಿ ಸಭೆ ನಡೆಸಿ, ನೀರಿನ ನಿರ್ವಹಣೆ ಮತ್ತು ವೈಜ್ಞಾನಿಕ ಬಿತ್ತನೆ ಬಗ್ಗೆ ಹಾಗೂ ಇಳುವರಿ ಹೆಚ್ಚಿಗೆ ಬರುವ ಹೊಸ ಹೊಸ ತಳಿಗಳ ಕುರಿತು ರೈತರಿಗೆ ಮಾಹಿತಿ ನೀಡದ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು. ಜಂಟಿ ಸಭೆಗಳನ್ನು ನಡೆಸಲು ಸೂಚಿಸಿದರು.
* ಒಟ್ಟು ನೀರಾವರಿ ಭೂಮಿಯಲ್ಲಿ ವಾಡಿಕೆಗಿಂತ 3ಸಾವಿರ ಹೆಕ್ಟೇರ್ ಭೂಮಿಯಲ್ಲಿ ಕಡಿಮೆ ಬಿತ್ತನೆ ಆಗಿರುವುದಕ್ಕೆ ಏನು ಕಾರಣ? ಮಳೆ ಜಾಸ್ತಿಯಾಗಿದೆ. ನೀರಿನ ಕೊರತೆಯೂ ಇಲ್ಲ. ಹೀಗಿದ್ದೂ ಬಿತ್ತನೆ ಏರಿಯಾ ಕಡಿಮೆ ಆಗಿರುವುದಕ್ಕೆ ಏನು ಕಾರಣ? ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರವಿ ಅವರನ್ನು ಪ್ರಶ್ನಿಸಿದರು.
*ಯಾವ್ಯಾವ ತಾಲ್ಲೂಕಿನ ಕೃಷಿ ಭೂಮಿಗಳಿಗೆ ಭೇಟಿ ನೀಡಿದ್ದೀರಾ? ಆ ಬಗ್ಗೆ ಡೈರಿ ಬರೆದಿದ್ದೀರಾ? ನಿಮ್ಮ ಕೆಳ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಡೈರಿ ಬರೆದಿರುವುದನ್ನು, ಸ್ಥಳಕ್ಕೆ ಭೇಟಿ ನೀಡಿರುವುದನ್ನು ಪರಿಶೀಲಿಸಿದ್ದೀರಾ? ಎಂದು ತರಾಟೆಗೆ ತೆಗೆದುಕೊಂಡರು.
* ಮಹಾರಾಷ್ಟ್ರದ ರೈತರು ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತಾರೆ. ನಮ್ಮ ಜಿಲ್ಲೆಯಲ್ಲಿ ಎರಡು ಬೆಳೆ ಮಾತ್ರ ಸಾಧ್ಯವಾಗುತ್ತಿದೆ. ಒಮ್ಮೆ ಮಹಾರಾಷ್ಟ್ರಕ್ಕೆ ತೆರಳಿ ಅಧ್ಯಯನ ಮಾಡಿಕೊಂಡು, ನಮ್ಮ ಇಲ್ಲಿನ ವಾತಾವರಣ ಮತ್ತು ಪರಿಸ್ಥಿತಿಗೆ ಹೇಗೆ ಅಳವಡಿಸಲು ಸಾಧ್ಯ ಎನ್ನುವ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸಿಎಂ ಸೂಚಿಸಿದರು.
* ತೋಟಗಾರಿಕೆ ಬೆಳೆಯುವ ಪ್ರದೇಶ ಹೆಚ್ಚಾಗಿರುವ ಬಗ್ಗೆ ಮುಖ್ಯಮಂತ್ರಿ ಮಾಹಿತಿ ಪಡೆದರು.
* ಮೈಸೂರು ರೇಷ್ಮೆ ಸೀರೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಮಹಿಳೆಯರು ಐದಾರು ಗಂಟೆ ಕ್ಯೂ ನಿಂತರೂ ಸೀರೆ ಸಿಗುತ್ತಿಲ್ಲ, ಬೇಡಿಕೆಗೆ ತಕ್ಕಂತೆ ಸೀರೆ ಸಿದ್ಧಪಡಿಸಲು ಸಮಸ್ಯೆ ಏನು? ಇದಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ಸಿಎಂ ಗಮನಕ್ಕೆ ತಂದರು. ಈ ಬಗ್ಗೆ ಗಮನಹರಿಸುವಂತೆ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚಿಸಿದರು.
* ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯದ ಪ್ರಮಾಣ ಎಷ್ಟಿದೆ, ಯಾವ ಭಾಗಗಳಲ್ಲಿ ವಿಸ್ತರಣೆ ಆಗಿದೆ ಎನ್ನುವ ಮಾಹಿತಿ ನೀಡುವಂತೆ ಅರಣ್ಯ ಇಲಾಖೆಯ ಅಧಿಕಾರಿಯನ್ನು ಮುಖ್ಯಮಂತ್ರಿ ಪ್ರಶ್ನಿಸಿದರು. ಆ ಅಧಿಕಾರಿ ಮಾಹಿತಿ ಕೊಡಲು ತಡಬಡಾಯಿಸಿದ್ದಕ್ಕೆ ಸಿಎಂ ಸಿಟ್ಟಾದರು. ‘ಸರಿಯಾದ ಮಾಹಿತಿ ತರದೆ ಅತ್ತೆ ಮನೆಗೆ ಬಂದಂತೆ ಕೈ ಬೀಸಿಕೊಂಡು ಬರ್ತೀರಾ? ನಿಮ್ಮ ಕಾರ್ಯಕ್ಷಮತೆ ಇಷ್ಟೆನಾ? ಮಾಹಿತಿಗಾಗಿ ನಾನು ನಿಮ್ಮ ಮನೆಗೆ ಬರಬೇಕಾ?’ ಎಂದು ಕೇಳಿದರು.
* ಹಾಲಿನ ಉತ್ಪಾದನೆ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವುದರ ಅಂಕಿ ಅಂಶಗಳನ್ನು ಮುಂದಿಟ್ಟ ಮುಖ್ಯಮಂತ್ರಿ, ಉತ್ಪಾದನೆ ಹೆಚ್ಚಾದಂತೆ ಮಾರುಕಟ್ಟೆ ವಿಸ್ತರಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.