ADVERTISEMENT

ಭ್ರಷ್ಟ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ: ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 7 ಮೇ 2023, 4:32 IST
Last Updated 7 ಮೇ 2023, 4:32 IST
ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್ ವರುಣಾ ಕ್ಷೇತ್ರದ ವೀರಶೈವ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು
ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್ ವರುಣಾ ಕ್ಷೇತ್ರದ ವೀರಶೈವ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು   

ನಂಜನಗೂಡು: ‘ಬಿಜೆಪಿ ಸರ್ಕಾರದ ಅಭಿವೃದ್ಧಿ ಶೂನ್ಯವಾಗಿದ್ದು, ಕೆಟ್ಟ ಹೆಸರು ಪಡೆದಿರುವ ಬಿಜೆಪಿ ನಾಯಕರ ಆಟ ನಡೆಯದು ಎಂಬುದನ್ನು ಅರಿತ ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್‍ಸಿಂಗ್ ನಮ್ಮ ಆಟ ನಡೆಯಬಹುದೇನೋ ಎಂದು 1 ತಿಂಗಳಿಂದ ರಾಜ್ಯದಲ್ಲಿ ಬೀಡುಬಿಟ್ಟಿದ್ದಾರೆ. ಆದರೆ, ಅವರ ಆಟವೂ ನಡೆಯದು’ ಎಂದು ಶಾಸಕ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಹದಿನಾರು ಗ್ರಾಮದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ವರುಣಾ ಕ್ಷೇತ್ರದ ವೀರಶೈವ ಮುಖಂಡರು, ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರ ಬಡವರ ಪರವಾಗಿ ಯಾವುದೇ ಯೋಜನೆ ಜಾರಿಗೊಳಿಸದೆ ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಘನತೆ ಹಾಳುಮಾಡಿದೆ. ಜನರು ಬಿಜೆಪಿ ಡಬಲ್ ಎಂಜಿನ್‌ ಸರ್ಕಾದ ಆಡಳಿತ ವೈಫಲ್ಯ, ಭ್ರಷ್ಟಾಚಾರ, ಬೆಲೆಏರಿಕೆಯಿಂದ ಬೇಸರಗೊಂಡಿದ್ದು, ಬದಲಾವಣೆ ಬಯಸಿದ್ದಾರೆ ಎಂದರು.

ADVERTISEMENT

ಬಿಜೆಪಿ ಸರ್ಕಾರ 5 ವರ್ಷಗಳಿಂದ ಯಾವುದೇ ಮತ ಕ್ಷೇತ್ರದಲ್ಲಿ ಬಡವರಿಗೆ 1 ಮನೆಯನ್ನೂ ಮಂಜೂರು ಮಾಡಿಲ್ಲ. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಪಕ್ಷದ ಆಡಳಿತ ಅವಧಿಯಲ್ಲಿ ಪ್ರತಿ ವರ್ಷ 3 ಲಕ್ಷ ಮನೆಯಂತೆ 5 ವರ್ಷದಲ್ಲಿ 15 ಲಕ್ಷ ಮನೆ ನಿರ್ಮಿಸಲಾಗಿದೆ. ಅಭಿವೃದ್ಧಿಯ ಬಗ್ಗೆ ಮಾತನಾಡುವ ವಸತಿ ಸಚಿವ ಸೋಮಣ್ಣ ಅವರು ಮನೆ ನಿರ್ಮಿಸಲು ಯಾಕೆ ವಿಫಲರಾದರು? ಸಿದ್ದರಾಮಯ್ಯ ಷೋಷಿತ ಸಮುದಾಯಗಳ ಅಸ್ಮಿತೆ, ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕೆಂಬ ಉದ್ದೇಶದಿಂದ ಅವರ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಆದರೆ, ಕ್ಷೇತ್ರದ ಜನರಿಗೆ ವಾಸ್ತವದ ಅರಿವಿದ್ದು, ಈ ಬಾರಿ 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿನಿಮಾ ನಟಿ ಭಾವನಾ ಮಾತನಾಡಿ, ‘ಸಿದ್ದರಾಮಯ್ಯ ಅವರು ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಅವರನ್ನು ಬೆಂಬಲಿಸಬೇಕು‘ ಎಂದರು.

ಶಾಸಕ ಡಾ.ಯತೀಂದ್ರ, ಕೆಪಿಸಿಸಿ ಕಾರ್ಯದರ್ಶಿ ಹದಿನಾರು ಗುರುಪಾದಸ್ವಾಮಿ, ಕೆ.ಮರಿಗೌಡ, ವರುಣಾಮಹೇಶ್, ಪಚ್ಚೆ ನಂಜುಂಡಸ್ವಾಮಿ, ಪುಟ್ಟಸ್ವಾಮಿ, ಕೆ.ಎನ್.ನಂಜಪ್ಪ, ಅಭಿ, ಮಂಜುಳಾಮಾನಸ, ಧರ್ಮ, ಮಂಜುನಾಥ್, ಮಹದೇವಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.