ADVERTISEMENT

ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ: ಪುಷ್ಪಾ ಅಮರ್‌ನಾಥ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 2:46 IST
Last Updated 8 ಅಕ್ಟೋಬರ್ 2025, 2:46 IST
ಹುಣ್ಣಿಮೆ ಪ್ರಯುಕ್ತ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರ್‌ನಾಥ್ ಭೇಟಿ ನೀಡಿ ದೇವರ ದರ್ಶನ ಪಡೆದರು
ಹುಣ್ಣಿಮೆ ಪ್ರಯುಕ್ತ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರ್‌ನಾಥ್ ಭೇಟಿ ನೀಡಿ ದೇವರ ದರ್ಶನ ಪಡೆದರು   

ನಂಜನಗೂಡು: ‘ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ₹98,000 ಕೋಟಿಗಳನ್ನು ರಾಜ್ಯ ಸರ್ಕಾರ ನೀಡಿದ್ದು, ಮಾಸಿಕ ₹4000–₹8,000ದವರೆಗೆ ನೇರವಾಗಿ ಆರ್ಥಿಕ ಸಹಾಯ ದೊರಕುತ್ತಿದ್ದು, ದೇಶದಲ್ಲಿ ರಾಜ್ಯದ ಜನರ ತಲಾ ಆದಾಯ ಮೊದಲ ಸ್ಥಾನದಲ್ಲಿದೆ’ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರ್‌ನಾಥ್ ಹೇಳಿದರು.

ಹುಣ್ಣಿಮೆ ಪ್ರಯುಕ್ತ ನಗರದ ಶ್ರೀಕಂಠೇಶ್ವರ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಸಮಯದಲ್ಲಿ ಜನರಿಗೆ ಭರವಸೆ ನೀಡಿದ್ದಂತೆ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಚಾರಿಗೆ ತಂದಿದ್ದು, ಇದರಿಂದಾಗಿ ರಾಜ್ಯದ ಜಿಡಿಪಿ ಉತ್ತಮ ಸ್ಥಿತಿಗೆ ತಲುಪಿದೆ. ದೇಶಕ್ಕೆ ಗುಜರಾತ್ ಅಲ್ಲ, ಕರ್ನಾಟಕ ಮಾದರಿಯಾಗಿದೆ’ ಎಂದು ಹೇಳಿದರು.

ADVERTISEMENT

‘ಗೃಹಲಕ್ಷ್ಮಿ ಯೋಜನೆಯಡಿ ಒಬ್ಬ ಮಹಿಳೆಗೆ 21 ತಿಂಗಳಿಗೆ ₹42,000ವನ್ನು ಅವರ ಖಾತೆಗೆ ಜಮೆ ಮಾಡಿದ್ದು, ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ, ‘ಗೃಹಜ್ಯೋತಿ’ ಯೋಜನೆಯಿಂದಾಗಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹600 ಉಳಿತಾಯವಾಗುತ್ತಿದೆ, ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿ ಜಾರಿಗೆ ತಂದ ಗ್ಯಾರಂಟಿ ಯೋಜನೆಯನ್ನು ಸಹಿಸಲಾಗದೆ ಬಿಜೆಪಿ ಯವರು ರಾಜ್ಯದ ಬೊಕ್ಕಸ ಬರಿದಾಗಿದೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಚುನಾವಣೆಗಳಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳನ್ನು ಕಾಪಿ ಮಾಡಿಕೊಂಡು ಸವಲತ್ತುಗಳನ್ನು ನೀಡುವುದಾಗಿ ಪ್ರಚಾರ ಮಾಡುತ್ತಿದೆ, ರಾಜ್ಯ ಸರ್ಕಾರ ಸುಭದ್ರವಾಗಿದೆ, ಬಿಜೆಪಿಯವರು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಬಾಕಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಮನವರಿಕೆ ಮಾಡಿ ರಾಜ್ಯಕ್ಕೆ ತಂದುಕೊಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದು ಹೇಳಿದರು.

ಮುಖಂಡರಾದ ಅಮರ್‌ನಾಥ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚಂದನ್ ಗೌಡ, ಗ್ರಾಮಾಂತರ ಅಧ್ಯಕ್ಷ ಕರಳಪುರ ವಿಜಯ್ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.