ADVERTISEMENT

ಸಾಹಿತ್ಯ ಕ್ಷೇತ್ರವನ್ನು ದೇವರೇ ಕಾಪಾಡಲಿ: ಸಾ.ರಾ.ಮಹೇಶ್‌ ವ್ಯಂಗ್ಯ

ವಿಶ್ವನಾಥ್‌ ನಾಮನಿರ್ದೇಶನ ಕಾನೂನುಬಾಹಿರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 7:47 IST
Last Updated 24 ಜುಲೈ 2020, 7:47 IST
ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಮತ್ತು ಎಂಎಲ್‌ಸಿ ಎಚ್‌.ವಿಶ್ವನಾಥ್‌
ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಮತ್ತು ಎಂಎಲ್‌ಸಿ ಎಚ್‌.ವಿಶ್ವನಾಥ್‌    

ಮೈಸೂರು: ಎಚ್‌.ವಿಶ್ವನಾಥ್‌ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವುದು ಕಾನೂನುಬಾಹಿರ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಹೇಳಿದರು.

ಶಾಸಕರ ಅನರ್ಹತೆ ಕುರಿತು ವಿಚಾರಣೆ ನಡೆಸಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವವರೆಗೆ ಅಥವಾ ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೆ ಸಾಂವಿಧಾನಿಕ ಅಧಿಕಾರ ಹೊಂದತಕ್ಕದಲ್ಲ ಎಂದಿತ್ತು. ಆದ್ದರಿಂದ ವಿಶ್ವನಾಥ್‌ ಅವರ ನಾಮನಿರ್ದೇಶನ ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರೆ ನಾವು ಅವರ ಆಯ್ಕೆಯನ್ನು ಪ್ರಶ್ನಿಸುತ್ತಿರಲಿಲ್ಲ. ಆದರೆ ಈಗ ನಡೆದಿರುವುದು ನಾಮನಿರ್ದೇಶನ. ಅವರು ಪ್ರತಿಜ್ಞಾವಿಧಿ ಸ್ವೀಕರಿಸಲು ಕಾನೂನಿನಲ್ಲಿ ಅವಕಾಶವಿಲ್ಲ' ಎಂದರು.

ADVERTISEMENT

'ಮುಖ್ಯಮಂತ್ರಿ ನೀಡಿದ ನಾಮನಿರ್ದೇಶಿತರ ಪಟ್ಟಿಗೆ ಅಂಕಿತ ಹಾಕಿದ ರಾಜ್ಯಪಾಲರು ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲಂಘನೆ ಮಾಡಿದಂತೆ ಆಗಿದೆ. ಈ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ. ಅವರಿಗೆ ಪ್ರತಿಜ್ಞಾವಿಧಿ ಬೋಧಿಸುವಂತಿಲ್ಲ ಎಂದು ಸ್ವೀಕರ್‌ಗೂ ಪತ್ರ ಬರೆಯಲಿದ್ದೇನೆ' ಎಂದು ಹೇಳಿದರು.

ಸಾಹಿತ್ಯ ಕ್ಷೇತ್ರವನ್ನು ದೇವರೇ ಕಾಪಾಡಲಿ: 'ಈ ಒಬ್ಬ ದುರಂತ ನಾಯಕ ರಾಜಕೀಯ ಕ್ಷೇತ್ರವನ್ನು ಬಿಟ್ಟು ಸಾಹಿತ್ಯ ಕ್ಷೇತ್ರಕ್ಕೆ ಹೋಗಿರುವುದರಿಂದ ರಾಜಕೀಯ ಕ್ಷೇತ್ರ ಶುಭ್ರವಾಗಲು ಅವಕಾಶ ದೊರೆತಿದೆ. ಆದರೆ ಸಾಹಿತ್ಯ ಕ್ಷೇತ್ರವನ್ನು ದೇವರೇ ಕಾಪಾಡಬೇಕು' ಎಂದು ಸಾ.ರಾ.ಮಹೇಶ್‌ ಅವರು ಹೆಸರು ಹೇಳದೆಯೇ ವಿಶ್ವನಾಥ್‌ ಬಗ್ಗೆ ವ್ಯಂಗ್ಯವಾಡಿದರು.

'ಸಾಹಿತ್ಯ ಕ್ಷೇತ್ರದಲ್ಲಿರುವ ದಿಗ್ಗಜರೆಲ್ಲ ಆಚೆಗೆ ಬರಬೇಕಲ್ವಾ ಎಂಬ ಸಂಕಟ ಉಂಟಾಗುತ್ತಿದೆ. ಇವರು ರಾಜಕೀಯ ಕ್ಷೇತ್ರದಲ್ಲಿ ಮಾಡಿದಂತೆ ಸಾಹಿತ್ಯ ಕ್ಷೇತ್ರವನ್ನೂ ಕಲುಷಿತಗೊಳಿಸದಿದ್ದರೆ ಸಾಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.