ADVERTISEMENT

ಮೈಸೂರು: ‘ಬಾಂಬೆ’ ತಂಡದಲ್ಲಿ ಬಿರುಕು, ಒಳ ಬೇಗುದಿ?

ಸಚಿವ ಎಸ್‌.ಟಿ.ಸೋಮಶೇಖರ್–ಎಚ್.ವಿಶ್ವನಾಥ್ ನಡುವೆ ಭಿನ್ನಾಭಿಪ್ರಾಯ

ಡಿ.ಬಿ, ನಾಗರಾಜ
Published 16 ಅಕ್ಟೋಬರ್ 2020, 1:59 IST
Last Updated 16 ಅಕ್ಟೋಬರ್ 2020, 1:59 IST
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್   

ಮೈಸೂರು: ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿನ 17 ಶಾಸಕರ ‘ಬಾಂಬೆ’ ತಂಡದಲ್ಲಿ ಬಿರುಕು ಮೂಡಿದ್ದಾಗಿ ತಿಳಿದುಬಂದಿದೆ.

ಆಗ ತಂಡದ ನೇತೃತ್ವ ವಹಿಸಿದ್ದ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮ ಶೇಖರ್ ನಡುವೆ ಈಗ ಆಂತರಿಕ ಭಿನ್ನಾಭಿಪ್ರಾಯ ಉಂಟಾಗಿರುವುದನ್ನು ಮೂಲಗಳು ದೃಢಪಡಿಸಿವೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಅವರನ್ನು ಏಕಾಏಕಿ ಬದಲಾಯಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲೆಯ ಉಸ್ತುವಾರಿಯನ್ನು ಎಸ್‌.ಟಿ.ಸೋಮಶೇಖರ್‌ಗೆ ವಹಿಸುವಲ್ಲಿ ವಿಶ್ವನಾಥ್ ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ರಾಜಕೀಯ ವಲಯದಲ್ಲಿನ ಬಹಿರಂಗ ಗುಟ್ಟು.

ADVERTISEMENT

’ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸೋಮಶೇಖರ್, ವಿಶ್ವನಾಥ್ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತಿದ್ದರು. ದಿನ ಕಳೆದಂತೆ ಮೈಸೂರಿನ ಹಿಡಿತ ಸಾಧಿಸಿದ ಸಚಿವರು, ‘ಹಳ್ಳಿಹಕ್ಕಿ’ಯನ್ನು ದೂರವಿಡಲಾರಂಭಿಸಿದರು. ಇದೀಗ ತಮ್ಮದೇ ಪಟಾಲಂ ಮೂಲಕ ಅಧಿಕಾರ ಚಲಾಯಿಸುತ್ತಿರುವುದು ಇಬ್ಬರ ನಡುವಿನ ಅಸಮಾಧಾನಕ್ಕೆ ಕಾರಣ’ ಎನ್ನುತ್ತವೆ ಅವರ ಆಪ್ತ ವಲಯದ ಮೂಲಗಳು.

ಮೈಸೂರಿನಲ್ಲಿ ಕೋವಿಡ್‌ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಮರಣ ಪ್ರಮಾಣವೂ ಹೆಚ್ಚಿದೆ. ಇಂತಹ ಹೊತ್ತಲ್ಲಿ ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ, ಸಲಹೆ ಪಡೆಯದೆ, ಕೆಲವರ ಮಾತನ್ನಷ್ಟೇ ಕೇಳಿಕೊಂಡು ಸಚಿವ ಸೋಮಶೇಖರ್‌ ದಸರಾ ಆಚರಣೆಗೆ ಮುಂದಾಗಿದ್ದು ಸಹ ಇಬ್ಬರ ನಡುವೆ ಬಿರುಕು ಹೆಚ್ಚಲು ಕಾರಣವಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.