ಮೈಸೂರು: ‘ಸಚಿವ ಎಸ್.ಟಿ.ಸೋಮಶೇಖರ್ ಅವರು ಕೆಲವು ರಾಜಕೀಯ ನಾಯಕರನ್ನು ವ್ಯಕ್ತಿಗತವಾಗಿ ಟೀಕಿಸಿರುವುದು ತಪ್ಪು. ಯಾರನ್ನೂ ಮಾನಸಿಕವಾಗಿ ನೋಯಿಸಬಾರದು’ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಸ್ತುತ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯು ಮತಸಂತೆಯಾಗಿದೆ’ ಎಂದು ಆರೋಪಿಸಿದರು.
ಮೊನ್ನೆ ಕೆಲವು ಗ್ರಾಮ ಪಂಚಾಯತಿ ಸದಸ್ಯರು ಮನೆಗೆ ಬಂದು 'ಬಜಾರ್' ಎಷ್ಟು ನಡೆಯುತ್ತಿದೆ ಎಂದು ಕೇಳಿದರು. ಹಾಸನದಲ್ಲಿ ₹ 50 ಸಾವಿರದಿಂದ ₹ 1 ಲಕ್ಷದವರೆಗೆ ನಡೆಯುತ್ತಿದೆ. ಇಲ್ಲಿ ಎಷ್ಟು ಎಂದು ಕೇಳಿದರು. ಈ ಚುನಾವಣೆಯನ್ನು ಯಾವ ಸ್ಥಿತಿಗೆ ತಂದು ನಿಲ್ಲಿಸಿದ್ದೇವೆ ಎಂಬುದನ್ನು ಎಲ್ಲ ರಾಜಕೀಯ ನಾಯಕರು ಆತ್ಮಾಲೋಕನ ಮಾಡಿಕೊಳ್ಳಬೇಕು ಎಂದು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚುನಾವಣೆಯಲ್ಲಿ ಸ್ಪರ್ಧಿಸುವವರು ಕನಿಷ್ಠ ₹ 40 ಕೋಟಿಯಿಂದ ₹ 1,700 ಕೋಟಿಯವರೆಗೆ ಆಸ್ತಿ ಘೋಷಿಸಿಕೊಂಡಿದ್ದಾರೆ. ಇಂತಹವರಿಗೆ ಟಿಕೆಟ್ ನೀಡಿದ ರಾಜಕೀಯ ಪಕ್ಷದ ಮುಖಂಡರಿಗೆ ಚುನಾವಣೆಯನ್ನು ದಿಕ್ಕೆಡಿಸುತ್ತಿದ್ದೇವೆ ಎಂದು ಅನ್ನಿಸುವುದಿಲ್ಲವೆ. ಈ ಮೂಲಕ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ರಾಜ್ಯದ ಜನರಿಗೆ ನೀಡುತ್ತಿರುವ ಸಂದೇಶವಾದರೂ ಏನು ಎಂದು ಪ್ರಶ್ನಿಸಿದರು.
ಈಗಾಗಲೇ ಚುನಾಯಿತರಾಗಿರುವ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಚುನಾವಣಾ ಪಾವಿತ್ರ್ಯತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.
ಕೋವಿಡ್ ಹೊಸ ವೈರಸ್ ಈಗಾಗಲೇ ರಾಜ್ಯಕ್ಕೆ ಬಂದಿದೆ. ಶಾಲೆಗಳಲ್ಲಿ ದನ ಕುರಿಗಳನ್ನು ತುಂಬಿದಂತೆ ಮಕ್ಕಳನ್ನು ಕೊಠಡಿಗಳಲ್ಲಿ ಕೂರಿಸುತ್ತಿದ್ದಾರೆ. ಶಿಕ್ಷಣ ಸಚಿವರು ಎಚ್ಚರಿಕೆಯಿಂದ ತೀರ್ಮಾನ ಕೈಗೊಳ್ಳಬೇಕು. 7ನೇ ತರಗತಿವರೆಗೂ ಮನೆಪಾಠವೇ ಮಕ್ಕಳಿಗೆ ಸಾಕು. ತಜ್ಞರ ಸಮಿತಿಯ ಶಿಫಾರಸ್ಸುಗಳನ್ನು ಚಾಚೂತಪ್ಪದೇ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ಸಚಿವ ಎಸ್.ಟಿ.ಸೋಮಶೇಖರ್ ಕೆಲವು ರಾಜಕೀಯ ನಾಯಕರನ್ನು ವ್ಯಕ್ತಿಗತವಾಗಿ ಟೀಕಿಸಿರುವುದು ತಪ್ಪು. ಯಾರನ್ನೂ ಮಾನಸಿಕವಾಗಿ ನೋಯಿಸಬಾರದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.