ADVERTISEMENT

ಎಚ್‌ಡಿಕೆ ನೋಡಿ ನಟನೆ ಕಲಿಯಬೇಕು: ಜಿ.ಟಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 12:34 IST
Last Updated 19 ಜನವರಿ 2021, 12:34 IST
ಜಿ.ಟಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ
ಜಿ.ಟಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ   

ಮೈಸೂರು: ‘ನಟನೆ ಮಾಡುವುದನ್ನು ಎಚ್‌.ಡಿ.ಕುಮಾರಸ್ವಾಮಿ ಅವರನ್ನು ನೋಡಿಯೇ ಕಲಿಯಬೇಕು’ ಎಂದು ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಮಂಗಳವಾರ ಇಲ್ಲಿವ್ಯಂಗ್ಯವಾಡಿದರು.

‘ಮೈಸೂರಿಗೆ ಬಂದು ನನ್ನನ್ನು ಪಕ್ಷದಿಂದ ಕಿತ್ತು ಹಾಕುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಮತ್ತೆ ಏಕೆ ಪದೇಪದೇ ನನ್ನ ವಿಚಾರ ಮಾತನಾಡಬೇಕು?’ ಎಂದು ತಿರುಗೇಟು ನೀಡಿದರು.

‘ಉಸ್ತುವಾರಿ ಸಚಿವರಾಗಿದ್ದಾಗಲೇ ನನ್ನನ್ನು ಕಡೆಗಣಿಸಲಾಗಿತ್ತು. ಇನ್ನು, ಈಗ ಮಾತು ಕೇಳುತ್ತಾರಾ? ಮೈಸೂರಿನ ಹೈಕಮಾಂಡ್‌ (ಸಾ.ರಾ.ಮಹೇಶ್‌) ಮಾತನ್ನು ಮಾತ್ರ ಕೇಳುತ್ತಾರೆ. ನನ್ನನ್ನು ಯಾವುದೇ ಸಭೆಗೆ ಕರೆಯುತ್ತಿಲ್ಲ. ಮಾಧ್ಯಮಕ್ಕೆ ಹೇಳುವುದೊಂದು ಒಳಗೆ ಮಾಡುವುದೊಂದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಧಿಕಾರಕ್ಕೆ ಆಸೆಪಟ್ಟಿದ್ದರೆ ನಾರಾಯಣಗೌಡ, ಎಚ್‌.ವಿಶ್ವನಾಥ್‌, ಗೋಪಾಲಯ್ಯ ಜೊತೆ ನಾನು ಕೂಡ ಬಿಜೆಪಿಗೆ ಹೋಗುತ್ತಿದ್ದೆ. ಹಾಗೆ ಮಾಡಿದ್ದರೆ ಈಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಇರಬಹುದಿತ್ತು’ ಎಂದು ಹೇಳಿದರು.

‘ಎಚ್‌.ಡಿ.ದೇವೇಗೌಡರ ಮನೆಗೆ ಹೋಗಿ ‘ಸಾಕು ಸ್ವಾಮಿ’ ಎಂದು ಕೈ ಮುಗಿದು ಬಂದಿದ್ದೇನೆ. ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಎರಡು ವರ್ಷ ಶಾಸಕನಾಗಿ ಕ್ಷೇತ್ರದ ಕೆಲಸ ಮಾಡಿಕೊಂಡಿರುತ್ತೇನೆ’ ಎಂದರು.

ಜೆಡಿಎಸ್‌ ಸಂಘಟನೆಗಾಗಿರಚಿಸಿರುವ ಸಮಿತಿಗೆ ಸೇರಿಸಿಕೊಳ್ಳದಿರುವ ಕುರಿತು, ‘ನನಗೆ ವಯಸ್ಸಾಯಿತು. ಹೀಗಾಗಿ, ಕಡೆಗಣಿಸಿರಬಹುದು’ ಎಂದು ಪ್ರತಿಕ್ರಿಯಿಸಿದರು.

ವೇದಿಕೆ ಏರಲು ಹಿಂದೇಟು
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ನೇತೃತ್ವದಲ್ಲಿ ಮಂಗಳವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿಆಯೋಜಿಸಿದ್ದ ಕುಂದುಕೊರತೆ ಸಭೆಗೆ ಕೊನೆ ಕ್ಷಣದಲ್ಲಿ ಆಹ್ವಾನ ನೀಡಿದ್ದಕ್ಕೆ ಹಾಗೂ ಬ್ಯಾನರ್‌ನಲ್ಲಿ ಫೋಟೊ ಇಲ್ಲದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿ.ಟಿ.ದೇವೇಗೌಡ, ವೇದಿಕೆ ಮೇಲೆ ಬರಲು ಒಪ್ಪಲಿಲ್ಲ. ‘ಮುಡಾ’ ಅಧ್ಯಕ್ಷ ಎಚ್‌.ವಿ.ರಾಜೀವ್‌ ಅವರುಕ್ಷಮೆಯಾಚಿಸಿದ ಮೇಲೆ ವೇದಿಕೆಗೆ ಬಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.