ಮೈಸೂರು: ಸಿದ್ದರಾಮಯ್ಯನವರೇ ಏಕವಚನದಲ್ಲಿ ಮಾತನಾಡೋದು ಬಿಡಿ. ಎಲ್ಲರನ್ನು ಏಕವಚನದಲ್ಲಿ ಮಾತನಾಡಿಸಬೇಡಿ. ಕುರುಬ ಸಮುದಾಯವನ್ನು ಸರ್ವಾಂಗೀಣ ಬೆಳವಣಿಗೆ ಬಳಸಿಕೊಂಡಿದ್ದೀರಾ. ಅವರ ಪರ ಹೋರಾಟಕ್ಕೆ ಏಕೆ ಹಿಂದೇಟು ಹಾಕುತ್ತಿದ್ದೀರಾ? ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಪ್ರಶ್ನಿಸಿದರು.
ನಾನು ನಿಮಗಿಂತ ರಾಜಕೀಯದಲ್ಲಿ ಹಿರಿಯ. ನನ್ನ ಸಲಹೆ ಸ್ವೀಕರಿಸಿ. ಮುಂದೆಯಾದರು ಎಲ್ಲರನ್ನು ಬಹುವಚನದಲ್ಲಿ ಮಾತನಾಡಿಸಿ. ದೇವರಾಜ ಅರಸು ಅವರಂತೆ ಎಲ್ಲರನ್ನು ಗೌರವಿಸೋದು ಕಲಿಯಿರಿ ಎಂದು ಸಿದ್ದರಾಮಯ್ಯಗೆ ಸಲಹೆ ನೀಡಿದರು.
ಸಿದ್ದರಾಮಯ್ಯ ಸಿಎಂ ಆಗಲು ನಮ್ಮ ಸಮುದಾಯ ತನು ಮನ ಧನ ಎಲ್ಲವನ್ನು ಕೊಟ್ಟಿದೆ. ಅಂತ ಸಮುದಾಯಕ್ಕೆ ಹೋರಾಟ ಯಾಕೇ ಅಂತೀರಲ್ಲ. ಬಹುಶಃ ನೀವು ಹೋರಾಟ ಮಾಡಿಲ್ಲ ಅನ್ಸುತ್ತೆ. ನೀವು ಮಾರ್ಗದರ್ಶನ ಮಾಡಿದ್ರೆ ಈ ಹೋರಾಟ ಇನ್ನು ಎತ್ತರಕ್ಕೆ ಬೆಳೆಯುತ್ತಿತ್ತು ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿದರು.
ಸಿದ್ದರಾಮಯ್ಯನವರೇ ನೀವು ಹೋರಾಟವೇ ಬೇಡ ಅಂತ ಹೇಳೋದು ಎಷ್ಟು ಸರಿ. ಕನಕಗೋಪುರ ಬಿದ್ದಾಗ, ಮಠ ಕಟ್ಟಿದಾಗ ನೀವು ಇರಲಿಲ್ಲ. ಮಠ ಕಟ್ಟೋದು ಅಷ್ಟು ಸುಲಭ ಅಲ್ಲ. ಕಾಗಿನೆಲೆ ಮಹಾಸಂಸ್ಥಾಪಕ ಅಧ್ಯಕ್ಷ ನಾನೇ ಆಗಿದ್ದೇನೆ. ಆಗೆಲ್ಲ ನೀವು ಬರದಿದ್ದರೂ ನಿಮ್ಮ ಹೆಸರು ಹಾಕಿತ್ತು. ನೀವು ಹೋರಾಟಕ್ಕೆ ಬೆಂಬಲ ಸೂಚಿಸಬೇಕಿತ್ತು ಎಂದು ತಿಳಿಸಿದರು.
ದೇಶದಲ್ಲಿ ಯಾರು ಮಾಡದ ಸಾಹಸಕ್ಕೆ ನೀವು ಕೈ ಹಾಕಿದ್ದೀರಿ. ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಮಾಡಿಸಿದ್ದೀರಿ. ಆ ಸಮಿಕ್ಷೆ ವರದಿ ಚರ್ಚೆಗೆ ಬಂದಿದ್ದರೆ ನೀವು ಮತ್ತೆ ಸಿಎಂ ಆಗುತ್ತಿದ್ರೇನೋ? ಇರಲಿ ಅದೆಲ್ಲವು ಮುಗಿದಿದೆ. ಆದರೆ, ಕುರುಬ ಸಮುದಾಯ ಎಸ್‌ಟಿಗೆ ಸೇರುವ ಹೋರಾಟ ಇನ್ನು ಕಠಿಣವಾಗಿ ಆಗಬೇಕಿದೆ. ಅದಕ್ಕಾಗಿ ನಿಮ್ಮ ಸಹಕಾರ ಹಾಗೂ ಬೆಂಬಲ ಬೇಕು. ನಮ್ಮ ಜೊತೆ ಹೋರಾಟಕ್ಕೆ ಬನ್ನಿ ಎಂದು ಸಿದ್ದರಾಮಯ್ಯಗೆ ಬಹಿರಂಗವಾಗಿ ಎಚ್.ವಿಶ್ವನಾಥ್ ಆಹ್ವಾನ ನೀಡಿದರು.
ನಾವು ಯಾರನ್ನು ಟಾರ್ಗೆಟ್ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರನ್ನು ಸಮುದಾಯ ಎಂದು ಅಗೌರವವಾಗಿ ಕಂಡಿಲ್ಲ. ಅವರ ನಾಯಕತ್ವಕ್ಕೆ ಬೆಲೆ ಬಂದಿದ್ದ ಮಠಗಳನ್ನು ಮಾಡಿದ್ದರಿಂದ ಹೋರಾಟ ಮಾಡಿದ ಕಾರಣಕ್ಕೆ ಅವರಿಗೆ ಬಲ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.