ADVERTISEMENT

ಧನುಷ್‌ ಮಿಂಚು: ಕರ್ನಾಟಕ ಜಯಭೇರಿ

ಕೂಚ್‌ ಬಿಹಾರ್ ಟ್ರೋಫಿ: ಇನಿಂಗ್ಸ್‌ ಹಾಗೂ 145 ರನ್‌ ಗೆಲುವು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 14:28 IST
Last Updated 5 ಡಿಸೆಂಬರ್ 2022, 14:28 IST
ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧ ಕರ್ನಾಟಕ ಇನಿಂಗ್ಸ್‌ ಗೆಲ್ಲಲು ಕಾರಣರಾದ ಆರ್‌.ಧನುಷ್‌ ಗೌಡ ಚೆಂಡನ್ನು ತೋರಿಸಿ ಸಹ ಆಟಗಾರರೊಂದಿಗೆ ಸಂಭ್ರಮಿಸಿದರು– ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.
ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧ ಕರ್ನಾಟಕ ಇನಿಂಗ್ಸ್‌ ಗೆಲ್ಲಲು ಕಾರಣರಾದ ಆರ್‌.ಧನುಷ್‌ ಗೌಡ ಚೆಂಡನ್ನು ತೋರಿಸಿ ಸಹ ಆಟಗಾರರೊಂದಿಗೆ ಸಂಭ್ರಮಿಸಿದರು– ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.   

ಮೈಸೂರು: ಧನುಷ್‌ ಗೌಡ ಮಿಂಚಿನ ಬೌಲಿಂಗ್‌ ದಾಳಿಯ (33ಕ್ಕೆ 5) ಬಲದಿಂದ ಕರ್ನಾಟಕ ತಂಡದವರು ಕೂಚ್‌ ಬಿಹಾರ್‌ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಇನಿಂಗ್ಸ್‌ ಹಾಗೂ 145 ರನ್‌ಗಳಿಂದ ಗೆದ್ದರು.

ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೂರನೇ ದಿನವಾದ ಸೋಮವಾರ ಭೋಜನ ವಿರಾಮಕ್ಕೂ ಮೊದಲೇ ಜಮ್ಮು ಮತ್ತು ಕಾಶ್ಮೀರ ತಂಡ 44.2 ಓವರ್‌ಗಳಲ್ಲಿ 149 ರನ್‌ಗಳಿಗೆ ಆಲೌಟ್‌ ಆಯಿತು.

ಚುರುಕಿನ ವಿಕೆಟ್‌ ಕೀಪಿಂಗ್‌: ಉತ್ತಮವಾಗಿ ಇನಿಂಗ್ಸ್‌ ಕಟ್ಟುತ್ತಿದ್ದ ಜಮ್ಮು ತಂಡದ ಅರ್ನವ್ ಗು‍ಪ್ತಾ (35 ರನ್‌) ಹಾಗೂ ರಣ್‌ಜೋತ್‌ ಸಿಂಗ್‌ (43 ರನ್‌) ಜೋಡಿಯನ್ನು ಕರ್ನಾಟಕ ತಂಡದ ನಾಯಕ ಯಶೋವರ್ಧನ್‌ ಪ್ರತಾಪ್‌ ಮುರಿದರು. ವಿಕೆಟ್‌ ಕೀಪರ್‌ ಆಶಿಷ್‌ ಮಹೇಶ್‌ ಪಡೆದ ಆಕರ್ಷಕ ಕ್ಯಾಚ್‌ಗೆ ಅರ್ನವ್‌ ನಿರ್ಗಮಿಸಿದರು. 2ನೇ ಇನಿಂಗ್ಸ್‌ನಲ್ಲಿ ಆಶಿಷ್‌ ಮಹೇಶ್‌ ಚುರುಕಿನ ವಿಕೆಟ್‌ ಕೀಪಿಂಗ್‌(3 ಸ್ಟಂಪ್‌, 4 ಕ್ಯಾಚ್‌) ಮೂಲಕ ಮನಗೆದ್ದರು.

ADVERTISEMENT

ಶಿಸ್ತಿನ ಬೌಲಿಂಗ್ ಮಾಡಿದ ಆರ್‌.ಧನುಷ್‌ ಗೌಡ 5 ವಿಕೆಟ್‌ ಪಡೆದರು. ಮಧ್ಯಮ ಹಾಗೂ ಕೆಳ ಕ್ರಮಾಂಕದ ಆಟಗಾರರಿಗೆಪೆವಿಲಿಯನ್‌ ದಾರಿ ತೋರಿದರು. ಮೊದಲ ಇನಿಂಗ್ಸ್‌ನಲ್ಲಿ ಮಿಂಚಿದ್ದ ಮೊಹಸಿನ್‌ ಖಾನ್‌ 18ಕ್ಕೆ 2 ವಿಕೆಟ್‌‍ಪಡೆದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಜಮ್ಮು ಮತ್ತು ಕಾಶ್ಮೀರ 86; ಕೆಎಸ್‌ಸಿಎ: 105 ಓವರ್‌ಗಳಲ್ಲಿ 380. ಎರಡನೇ ಇನಿಂಗ್ಸ್‌: ಜಮ್ಮು ಮತ್ತು ಕಾಶ್ಮೀರ 149 (ರಣ್‌ಜೋತ್‌ ಸಿಂಗ್‌ 43, ಆರ್‌.ಧನುಷ್‌ ಗೌಡ33ಕ್ಕೆ 5,ಮೊಹಸಿನ್‌ ಖಾನ್‌ 18ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.