ADVERTISEMENT

ನಗರದಲ್ಲಿ ಕಡೇ ಕಾರ್ತೀಕ ಸಂಭ್ರಮ

ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರ, ಕೆಲವೆಡೆ ದೀಪೋ‌ತ್ಸವ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 17:30 IST
Last Updated 3 ಡಿಸೆಂಬರ್ 2018, 17:30 IST
ಹಿನಕಲ್‌ನಲ್ಲಿ ನನ್ನೇಶ್ವರಸ್ವಾಮಿ ದೇವರ ಕಲ್ಯಾಣಿಯಲ್ಲಿ ಕಡೆ ಕಾರ್ತೀಕ ಸೋಮವಾರದ ಅಂಗವಾಗಿ ದೀಪೋತ್ಸವ ನಡೆಯಿತು
ಹಿನಕಲ್‌ನಲ್ಲಿ ನನ್ನೇಶ್ವರಸ್ವಾಮಿ ದೇವರ ಕಲ್ಯಾಣಿಯಲ್ಲಿ ಕಡೆ ಕಾರ್ತೀಕ ಸೋಮವಾರದ ಅಂಗವಾಗಿ ದೀಪೋತ್ಸವ ನಡೆಯಿತು   

ಮೈಸೂರು: ನಗರದಲ್ಲಿ ಕಡೆ ಕಾರ್ತೀಕ ಸೋಮವಾರದ ಸಂಭ್ರಮ ಮನೆ ಮಾಡಿತ್ತು. ಎಲ್ಲ ದೇಗುಲಗಳಲ್ಲೂ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.

ನಗರದಲ್ಲಿರುವ ದೇವಸ್ಥಾನಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಮಾವಿನ ತೋರಣ, ವಿದ್ಯುತ್ ದೀಪಾಲಂಕಾರಗಳು ದೇಗುಲಗಳಿಗೆ ಮೆರುಗು ತಂದು ಕೊಟ್ಟಿದ್ದವು. ಭಕ್ತರು ಬೆಳಿಗ್ಗೆಯಿಂದ ಸಂಜೆಯವರೆಗೆ ದೇವರ ದರ್ಶನ ಪಡೆದರು.

ಹಲವು ದೇಗುಲಗಳಲ್ಲಿ ಸರತಿ ಸಾಲುಗಳು ಕಂಡು ಬಂದವು. ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.

ADVERTISEMENT

ತೊಣಚಿಕೊಪ್ಪಲಿನ ನಾಗಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ 25ನೇ ವರ್ಷದ ವಾರ್ಷಿಕೋತ್ಸವ ನೆರವೇರಿತು. ರುದ್ರಾಭಿಷೇಕ ಹಾಗೂ ಮೃತ್ಯುಂಜಯ ಪೂಜೆಗಳು ಸಾಂಗವಾಗಿ ನಡೆದವು.

ಸುಣ್ಣದ ಕೇರಿಯ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹದೇಶ್ವರ ದೇಗುಲ ಸೇರಿದಂತೆ ಹಲವೆಡೆ ಅಗ್ನಿ ಕೊಂಡೋ ತ್ಸವ ಕಾರ್ಯಕ್ರಮಗಳು ಮಧ್ಯರಾತ್ರಿ ಹಾಗೂ ನಸುಕಿನವರೆಗೂ ನಡೆದವು.

ಶ್ರೀರಾಂಪುರದ ಕಾಲಭೈರವ ಸ್ವಾಮಿ ದೇಗುಲದಲ್ಲಿ ದೀಪಗಳಿಂದ ಶಿವಲಿಂಗದ ಆಕಾರದಲ್ಲಿ ಬಿಡಿಸಿದ್ದು ಮನಮೋಹಕವಾಗಿ ಕಂಡಿತ್ತು.

ತಾಲ್ಲೂಕು ಹಾಗೂ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲೂ ಕಡೆ ಕಾರ್ತೀಕ ಸೋಮವಾರದ ಅಂಗವಾಗಿ ಹಬ್ಬದ ವಾತಾವರಣ ಮೂಡಿತ್ತು. ರೈತರು ತಮ್ಮ ಕೆಲಸಗಳಿಂದ ಬಿಡುವು ತೆಗೆದುಕೊಂಡು ತಮ್ಮ ತಮ್ಮ ಮನೆದೇವರಿಗೆ, ಗ್ರಾಮದೇವತೆಗೆ ಸಮೀಪದ ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಹಲವು ದೇಗುಲಗಳಲ್ಲಿ ದೀಪೋ ತ್ಸವ ಕಣ್ಮನ ಸೆಳೆಯಿತು. ಇಲ್ಲಿನ ಹಿನಕಲ್‌ ಕಲ್ಯಾಣಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ದೀಪಗಳನ್ನು ಬೆಳಗಿಸುವ ಮೂಲಕ ಇಡಿ ಕಲ್ಯಾಣಿಯು ಬೆಳಕಿನಲ್ಲಿ ಮಿಂದೇಳುವಂತೆ ಮಾಡಿದರು.

ಇದೇ ರೀತಿ ಹಲವು ದೇಗುಲಗಳ ಆವರಣಗಳು ದೀಪಗಳಿಂದ ಕಂಗೊಳಿಸಿದವು. ಮನೆಮನೆಗಳಲ್ಲಿ ಹೆಂಗಳೆಯರು ತಮ್ಮ ತಮ್ಮ ಮನೆಯ ಆವರಣವನ್ನು ಶುದ್ಧಿಗೊಳಿಸಿ ಅಂದವಾದ ರಂಗವಲ್ಲಿ ಬಿಡಿಸಿ ಅದಕ್ಕೆ ವಿವಿಧ ವಿನ್ಯಾಸಗಳಲ್ಲಿ ದೀಪಗಳನ್ನಿಟ್ಟು ಅಲಂಕರಿಸಿದರು. ಹಲವು ಶಾಲಾ, ಕಾಲೇಜುಗಳು ರಜೆ ವಿದ್ಯಾರ್ಥಿಗಳಿಗೆ ರಜೆ ನೀಡಿದ್ದವು.

ಅಗ್ರಹಾರ, ಜನತಾನಗರ ಸೇರಿದಂತೆ ಜಿಲ್ಲೆಯ ಗ್ರಾಮಾಂತರ ಭಾಗಗಳಿಂದ ಮಲೆಮಹದೇಶ್ವರಬೆಟ್ಟಕ್ಕೆ ಜನರು ತಂಡೋಪತಂಡವಾಗಿ ತೆರಳಿದ್ದರು. ಎಲ್ಲೆಲ್ಲಿ ಮಹದೇಶ್ವರನ ದೇವಸ್ಥಾನಗಳಿವೆಯೋ ಅಲ್ಲೆಲ್ಲ ಜಾತ್ರೆಯ ಕಳೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.