ADVERTISEMENT

ಕಸಾಪ ಪ್ರಭುತ್ವದ ಮುಖವಾಣಿ ಆಗದಿರಲಿ: ಪ್ರೊ.ಅರವಿಂದ ಮಾಲಗತ್ತಿ

ಕನ್ನಡಿಗರ ಮುಖವಾಣಿಯಾಗಿ ಕಾರ್ಯ ನಿರ್ವಹಿಸುವಂತೆ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 13:06 IST
Last Updated 29 ಡಿಸೆಂಬರ್ 2022, 13:06 IST
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಸಂಸ್ಥೆಯು ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕುವೆಂಪು ಸಾಹಿತ್ಯ– ಬಹುಮುಖಿ ಚಿಂತನೆ’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಉದ್ಘಾಟಿಸಿದರು. ಡಾ.ಎಂ. ರಾಜಶೇಖರ, ಡಾ.ಡಿ.ಕೆ. ರಾಜೇಂದ್ರ, ಡಾ.ವಿಜಯಕುಮಾರಿ ಎಸ್. ಕರಿಕಲ್ ಇದ್ದರು
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಸಂಸ್ಥೆಯು ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕುವೆಂಪು ಸಾಹಿತ್ಯ– ಬಹುಮುಖಿ ಚಿಂತನೆ’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಉದ್ಘಾಟಿಸಿದರು. ಡಾ.ಎಂ. ರಾಜಶೇಖರ, ಡಾ.ಡಿ.ಕೆ. ರಾಜೇಂದ್ರ, ಡಾ.ವಿಜಯಕುಮಾರಿ ಎಸ್. ಕರಿಕಲ್ ಇದ್ದರು   

ಮೈಸೂರು: ‘ಕನ್ನಡ ಸಾಹಿತ್ಯ ಪರಿಷತ್‌ನ ವಿದ್ಯಮಾನಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಪ್ರಭುತ್ವದ ಚಿಂತನೆಗೆ ಪರಿಷತ್ ಮುಖವಾಣಿ ಆಗುವ ಬದಲು ಕನ್ನಡಿಗರ ಮುಖವಾಣಿ ಆಗಬೇಕು’ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಸಂಸ್ಥೆಯು ಬಿಎಂಶ್ರೀ ಸಭಾಂಗಣದಲ್ಲಿ ಕುವೆಂಪು ಜನ್ಮದಿನೋತ್ಸವದ ಪ್ರಯುಕ್ತ ಗುರುವಾರ ಆಯೋಜಿಸಿದ್ದ ‘ಕುವೆಂಪು ಸಾಹಿತ್ಯ– ಬಹುಮುಖಿ ಚಿಂತನೆ’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

‘ಕುವೆಂಪು ಈಗ ಇದ್ದಿದ್ದರೆ ಸಾಹಿತ್ಯ ಪರಿಷತ್‌ನ ವಿದ್ಯಮಾನಗಳನ್ನು ಹೇಗೆ ನೋಡುತ್ತಿದ್ದರು? ಶೂದ್ರ ತಪಸ್ವಿ ನಾಟಕದಲ್ಲಿ ಶಂಭೂಕನಿಗೆ ರಾಮರಾಜ್ಯದಲ್ಲಿ ನ್ಯಾಯ ಕೊಡಿಸಿದ ಹಾಗೆ, ಇಂದಿನ ಸಂದರ್ಭದಲ್ಲಿ ಶ್ರೀಸಾಮಾನ್ಯನ ಪರ ನಿಲ್ಲುತ್ತಿದ್ದರು’ ಎಂದರು.

ADVERTISEMENT

‘ಕವಿಗಳು ನಿರಂಕುಶ ಪ್ರಭುತ್ವ ಹೊಂದಿರುತ್ತಾರೆ. ಆದರೆ, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿತೆ ವಾಚಿಸಬೇಕು, ಹಾಡಬಾರದು ಎಂಬ ನಿರ್ಬಂಧವನ್ನು ಕವಿಗಳಿಗೆ ವಿಧಿಸಲಾಗಿದೆ. ಕವಿಗಳ ಸ್ವಾತಂತ್ರ್ಯಕ್ಕೆ ಅಂಕುಶ ಹಾಕುವ ಪ್ರಯತ್ನವು ಆರೋಗ್ಯಕರ ಸಮಾಜದ ಲಕ್ಷಣವಲ್ಲ’ ಎಂದು ಅಭಿಪ್ರಾಯಪಟ್ಟರು.

‘ವ್ಯಕ್ತಿಯನ್ನು ಶಕ್ತಿಯಾಗಿ ನೋಡುವುದು ಸರಿ. ಆದರೆ, ಶಕ್ತಿಯನ್ನು ದೈವೀಕರಿಸುವುದು ಸರಿಯಲ್ಲ. ದೈವೀಕರಿಸುವ ಪ್ರಕ್ರಿಯೆಯು ಕಲ್ಲಾಗಿಸುವ ಉದ್ದೇಶ ಹೊಂದಿರುತ್ತದೆ. ಕುವೆಂಪು ಸದಾ ಚಲಿಸುವ ನೀರಿನಂತಿದ್ದರು. ಎದುರಾಗುವ ಬಂಡೆಗಳಿಗೆ ಅಪ್ಪಳಿಸಿ ತಮ್ಮದೇ ಹೊಸ ಮಾರ್ಗವನ್ನು ಕಂಡುಕೊಳ್ಳುವ ಶಕ್ತಿ ಅವರಲ್ಲಿತ್ತು’ ಎಂದು ತಿಳಿಸಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡ ನವೋದಯ ಕಾಲದ ಕವಿಗಳು ದಲಿತರ ಕುರಿತು ಪ್ರಖರವಾಗಿ ಪ್ರತಿಪಾದಿಸಿದ್ದರು. ಗಾಂಧೀಜಿ ಚಿಂತನಾ ಕ್ರಮವೇ ಅವರಲ್ಲಿ ಪ್ರಗತಿಪರ ದೃಷ್ಟಿಕೋನ ಮೂಡಲು ಪ್ರೇರಣೆಯಾಗಿತ್ತು. ಆದರೆ, ಪೂನಾ ಒಪ್ಪಂದದ ನಂತರ ಕನ್ನಡ ಸಾಹಿತಿಗಳ ಚಿಂತನಾ ಕ್ರಮ, ವಿಚಾರಗಳಲ್ಲಿ ಪಲ್ಲಟವಾಗತೊಡಗಿತು’ ಎಂದು ಅಭಿಪ್ರಾಯಪಟ್ಟರು.

‘ಸ್ವಾತಂತ್ರ್ಯ ಪೂರ್ವದಲ್ಲಿ ದಲಿತರಿಗೆ ಸಂಬಂಧಿಸಿದಂತೆ ಕ್ರಾಂತಿಕಾರಿಗಳಾಗಿ ಪ್ರಖರವಾಗಿ ಸಾಹಿತ್ಯ ಬರೆದ ಕವಿಗಳು ಸ್ವಾತಂತ್ರ್ಯಾನಂತರ ಜನಾಂಗೀಯ ಮೋಹದಿಂದಾಗಿ ಸೌಮ್ಯ ಭಾಷೆಗೆ ತಿರುಗಿದ್ದರು. ಅರೆ ಸುಧಾರಣಾ ವಾದಿಗಳಾಗಿ ಗೋಚರಿಸಿದರು. ಆದರೆ, ಕುವೆಂಪು ಸ್ವಾತಂತ್ರ್ಯಾನಂತರವೂ ಮತ್ತಷ್ಟು ಪ್ರಖರವಾಗಿ ಬರೆಯುತ್ತಾ ಬೆಳಗಿದ್ದರು’ ಎಂದರು.

ಜಾನಪದ ವಿದ್ವಾಂಸ ಡಾ.ಡಿ.ಕೆ.ರಾಜೇಂದ್ರ ಮಾತನಾಡಿ, ‘ಸತ್ವ, ಸತ್ಯ ಇರುವ ಸಾಹಿತ್ಯವನ್ನು ಮಾತ್ರ ಜನ ಓದುತ್ತಾರೆ. ಕುವೆಂಪು ಸಾಹಿತ್ಯವೂ ಸತ್ವಯುತವಾದದ್ದು. ಅವರು ವ್ಯಕ್ತಿ, ಶಕ್ತಿ ಹಾಗೂ ವಿಚಾರವಂತರಾಗಿ ಕಾಣುತ್ತಾರೆ. ಕೀರ್ತಿಗೆ ಶರಣಾಗದೆ ಟೀಕೆಗಳನ್ನು ಎದುರಿಸುತ್ತಲೇ ಸಾಹಿತ್ಯ ರಚನೆ ಮಾಡಿದ್ದರು. ಅವರ ಸಾಹಿತ್ಯವನ್ನು ಯುವ ಪೀಳಿಗೆ ಓದುತ್ತಾ ಮರು ಮಂಥನ ಮಾಡಬೇಕು’ ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ಎಂ. ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ವಿಜಯಕುಮಾರಿ ಎಸ್. ಕರಿಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಪ್ರಜಾಪ್ರಭುತ್ವದ ಪ್ರತ್ಯುತ್ಪನ್ನ ಕುವೆಂಪು’

‘ಕುವೆಂಪು ಜಲಗಾರ ನಾಟಕದಲ್ಲಿ ಸಮಾನತೆಯ ಪರಿಕಲ್ಪನೆಯನ್ನು ಸಾರಿದ್ದರು. ಪೌರೋಹಿತ್ಯಕ್ಕೆ ಸಂಬಂಧಿಸಿದಂತೆ ಎದುರಾಗುವ ಅನೇಕ ಟೀಕೆಗಳನ್ನು ಒಂಟಿ ಸಲಗನಂತೆ ಎದುರಿಸಿದ್ದರು. ವಿಶ್ವಪಥ, ಆಧ್ಯಾತ್ಮಿಕತೆಗೆ ವೈಜ್ಞಾನಿಕ ಪರಿಕಲ್ಪನೆ ನೀಡಿದ್ದ ಕುವೆಂಪು ಎಲ್ಲ ಮತಗಳನ್ನೂ ದೂರಿದ್ದರು. ಪ್ರತಿ ವ್ಯಕ್ತಿಗೂ ತನ್ನದೇ ಆದ ಮತ ಇರಬೇಕೆಂದು ಪ್ರತಿಪಾದಿಸಿದ್ದರು. ಅಂದರೆ, ವ್ಯಕ್ತಿಗೆ ಸ್ವತಂತ್ರವಾದ ಆಲೋಚನೆ ಇರಬೇಕು ಎಂಬುದು ಅವರ ಆಶಯ. ಅವರು ಪ್ರಜಾಪ್ರಭುತ್ವದ ಪ್ರತ್ಯುತ್ಪನ್ನ ಶಿಶು' ಎಂದು ಪ್ರೊ.ಅರವಿಂದ ಮಾಲಗತ್ತಿ ಬಣ್ಣಿಸಿದರು.

***

ಹೊಸಗನ್ನಡ ಸಾಹಿತ್ಯದ ಯುಗ ಪುರುಷ ಕುವೆಂಪು. ಸಮಾನತೆಯ ಹರಿಕಾರ, ಮನುಜ ಮತ ವಿಶ್ವ ಪಥದ ಸಾರಥಿ.
–ಪ್ರೊ. ಅರವಿಂದ ಮಾಲಗತ್ತಿ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.