ADVERTISEMENT

ಧರೆಗೆ ದೊಡ್ಡವರ ಉತ್ಸವ–2; ಕಾವ್ಯಗಾನಯಾನಕ್ಕೆ ಜನಸಾಗರ, ಅಭೂತಪೂರ್ವ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 10:42 IST
Last Updated 29 ಫೆಬ್ರುವರಿ 2020, 10:42 IST
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಭಾರತೀಯ ರಿಸರ್ವ್ ಬ್ಯಾಂಕ್‌ನ ನೋಟು ಮುದ್ರಣಾಯಲಯದ ಸಹಯೋಗದಲ್ಲಿ ಮೈಸೂರಿನ ಕಲಾಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಧರೆಗೆ ದೊಡ್ಡವರ ಉತ್ಸವ–2’ರಲ್ಲಿ ಕಂಡಾಯ ಹಾಗೂ ಕಲಾವಿದರ ಸಮಾಗಮ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಭಾರತೀಯ ರಿಸರ್ವ್ ಬ್ಯಾಂಕ್‌ನ ನೋಟು ಮುದ್ರಣಾಯಲಯದ ಸಹಯೋಗದಲ್ಲಿ ಮೈಸೂರಿನ ಕಲಾಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಧರೆಗೆ ದೊಡ್ಡವರ ಉತ್ಸವ–2’ರಲ್ಲಿ ಕಂಡಾಯ ಹಾಗೂ ಕಲಾವಿದರ ಸಮಾಗಮ   

ಮೈಸೂರು: ಪಡುವಣದ ದಿಗಂತದಲ್ಲಿ ದಿನಕರ ಕೆಂಬಣ್ಣದೊಂದಿಗೆ ಇಳಿ ಜಾರುತ್ತಿದ್ದಂತೆ, ನಗರವೂ ಸೇರಿದಂತೆ ಜಿಲ್ಲೆ, ನೆರೆ ಹೊರೆ ಜಿಲ್ಲೆಯ ಮಾದೇಶ್ವರ–ಮಂಟೇಸ್ವಾಮಿ ಭಕ್ತಸಾಗರ ಸಹ ಶುಕ್ರವಾರದ ಇಳಿ ಸಂಜೆ ಹೊತ್ತಲ್ಲಿ ಕಲಾಮಂದಿರದ ಆವರಣದಲ್ಲಿ ಜಮಾಯಿಸಿತು.

ಕೋಟೆ ಆಂಜನೇಯ ಸ್ವಾಮಿ ದೇಗುಲದಿಂದ ಬಂದ ಮಂಟೇಸ್ವಾಮಿ ಪರಂಪರೆಯ ಕಂಡಾಯಗಳನ್ನು ಸಂಪ್ರದಾಯದೊಂದಿಗೆ ಸ್ವಾಗತಿಸುವ ಜತೆ, ವಾದ್ಯಮೇಳದ ವಾದನಕ್ಕೆ ತಕ್ಕಂತೆ ತನ್ನನ್ನೇ ಮರೆತು ನರ್ತಿಸಿ ಸಂಭ್ರಮಿಸಿತು.

ಕಂಡಾಯಗಳು ಕಲಾಮಂದಿರದ ವೇದಿಕೆಯೇರಿದ ಬೆನ್ನಿಗೆ, ಒಂದೆಡೆಯಿಂದ ಮಂಟೇಸ್ವಾಮಿ ಹೊತ್ತ ಕಂಸಾಳೆ ಕಲಾವಿದರ ಪರಿಷೆ ಬಂದರೆ, ಇದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಮಾದೇಶ್ವರನ ಪರಿಷೆ ಪರಿವಾರವೂ ಬಂದು ವೇದಿಕೆಗೇರಿತು.

ADVERTISEMENT

ಮಂಟೇಸ್ವಾಮಿ ಪರಂಪರೆಯ ನೀಲಗಾರರು, ಮಾದೇಶ್ವರನ ಭಕ್ತ ಸಮೂಹ ಉಘೇ ಉಘೇ ಘೋಷಣೆಗಳನ್ನು ಮೊಳಗಿಸುವ ಮೂಲಕ ದೈವಿಭಕ್ತಿಯನ್ನು ಪ್ರದರ್ಶಿಸಿದರು. ಇದರೊಟ್ಟಿಗೆ ಸಾಂಸ್ಕೃತಿಕ ಲೋಕವೂ ಅನಾವರಣಗೊಂಡಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆರ್‌ಬಿಐನ ನೋಟು ಮುದ್ರಣಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಧರೆಗೆ ದೊಡ್ಡವರು ಉತ್ಸವ–2ರ ಮಂಟೇಸ್ವಾಮಿ–ಮಾದೇಶ್ವರ ಕಾವ್ಯಗಾನಯಾನಕ್ಕೆ ದೂಪ ಹಾಕುವ ಮೂಲಕ ಚಾಲನೆ ಕೊಡಲಾಯಿತು. ಈ ಹೊತ್ತಿಗೆ ಕಲಾಮಂದಿರವೂ ಭರ್ತಿಯಾಯ್ತು.

ದೂರದ ಊರುಗಳಿಂದ ಮಂಟೇಸ್ವಾಮಿ–ಮಾದೇಶ್ವರನ ಕಾವ್ಯಗಾನಯಾನ ಆಲಿಸಲು ಜನರು ತಂಡೋಪ ತಂಡವಾಗಿ ಕಲಾಮಂದಿರಕ್ಕೆ ದಾಂಗುಡಿಯಿಟ್ಟರು. ಸಿಕ್ಕಲ್ಲಿ ಕೂತರು. ಅಹೋರಾತ್ರಿ ನಿಂತೇ ಆಲಿಸಿದ್ದು ವಿಶೇಷವಾಗಿತ್ತು. ನೆರೆದಿದ್ದ ಎಲ್ಲರಿಗೂ ರಾತ್ರಿಯ ಊಟದ ವ್ಯವಸ್ಥೆಯಿತ್ತು.

ಹೆಮ್ಮೆ: ‘ಮಾದೇಶ್ವರ–ಮಂಟೇಸ್ವಾಮಿ ಕಾವ್ಯ ದಕ್ಷಿಣ ಕರ್ನಾಟಕದ ಹೆಮ್ಮೆ. ಕಥನ ಕ್ರಮ ವೈವಿಧ್ಯಮಯವಾಗಿದೆ. ಸಶಕ್ತವಾಗಿದೆ. ಈ ಎರಡೂ ಬೆಳಕಿನ ಕಾವ್ಯಗಳು. ಅನಕ್ಷರಸ್ಥರು ತಮ್ಮ ಮಾತಿನಲ್ಲೇ ಬರೆದ ಮಹಾಕಾವ್ಯಗಳಿವು. ಶಾಂತಿ–ಸಮಾನತೆಗೆ ಸಾಕಷ್ಟು ಕೊಡುಗೆ ನೀಡಿವೆ’ ಎಂದು ಸಾಹಿತಿ ಹನೂರು ಕೃಷ್ಣಮೂರ್ತಿ ತಿಳಿಸಿದರು.

‘ಈ ಎರಡೂ ಮಹಾಕಾವ್ಯಗಳು ಕನ್ನಡ ಭಾಷೆಯ ಸುದೈವ. ಶೂದ್ರರ ಉದ್ಧಾರಕ್ಕಾಗಿಯೇ ಮಾದೇಶ್ವರ–ಮಂಟೇಸ್ವಾಮಿ ಶ್ರಮಿಸಿದವರು’ ಎಂದು ಜಾನಪದ ವಿದ್ವಾಂಸ ಪಿ.ಕೆ.ರಾಜಶೇಖರ್ ಹೇಳಿದರು.

‘ಸಂವಿಧಾನದಲ್ಲಿ ಇಂದು ಅಡಕವಾಗಿರುವ ಸಮಾನತೆ, ಪ್ರಜಾಪ್ರಭುತ್ವ ಸೇರಿದಂತೆ ಇನ್ನಿತರೆ ಆಶಯ, ತತ್ವಗಳನ್ನು ಈ ಎರಡೂ ಮಹಾಕಾವ್ಯ ಹೊಂದಿವೆ’ ಎಂದು ಸಾಹಿತಿ ಕಾಳೇಗೌಡ ನಾಗವಾರ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.