ಮೈಸೂರು: ‘ಯಾವ ಕೆಲಸವೂ ಕೀಳಲ್ಲ, ಸಿಕ್ಕ ಕಾಯಕವನ್ನು ಶ್ರದ್ಧೆಯಿಂದ ಮಾಡಬೇಕು’ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದರು.
ಇಲ್ಲಿನ ‘ಮೈಸೂರು ಕನ್ನಡ ವೇದಿಕೆ’ ಸಂಘಟನೆಯಿಂದ ದೇವರಾಜ ಮೊಹಲ್ಲಾದ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಬಸವ ಜಯಂತಿ ಮತ್ತು ಕಾರ್ಮಿಕ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಕಾಯಕಯೋಗಿ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ದೇಶದಲ್ಲಿ ಲಕ್ಷಾಂತರ ಮಂದಿ ಅಸಂಘಟಿತ ಕಾರ್ಮಿಕರಿದ್ದಾರೆ. ಹೋಟೆಲ್ ಉದ್ಯಮದಲ್ಲಿ ಹೆಚ್ಚಿನದಾಗಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಕೆಲಸಕ್ಕೂ ಗೌರವವಿದೆ. ಶ್ರದ್ಧೆಯಿಂದ ಮಾಡಿದರೆ ಕಾರ್ಮಿಕ ಮಾಲೀಕ ಆಗುವುದಕ್ಕೂ ಅವಕಾಶವಿದೆ’ ಎಂದರು.
‘ಇತ್ತೀಚಿನ ದಿನಗಳಲ್ಲಿ ಕೆಲಸದವರು ಸಿಗುವುದೇ ಕಷ್ಟವಾಗಿದೆ. ಹಿಂದೆಲ್ಲಾ ಮಾಲೀಕರು ಹೇಳಿದಂತೆ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈಗ ಕೆಲಸಗಾರರು ಹೇಳಿದಂತೆ, ಅವರೇ ಹೇಳಿದ ದಿನಗಳಲ್ಲಿ ಕೆಲಸ ಮಾಡಿಸುವಂತ ಕಾಲ ಬಂದಿದೆ. ಪಂಚ ಗ್ಯಾರಂಟಿಗಳ ಕಾರಣದಿಂದಾಗಿಯೂ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಸೌಲಭ್ಯಗಳು ಉಚಿತವಾಗಿ ಸಿಗುತ್ತಿರುವುದರಿಂದ ದುಡಿಮೆಗೆ ಹಿಂದೇಟು ಹಾಕುವುದು ಕಂಡುಬರುತ್ತಿದೆ’ ಎಂದು ಹೇಳಿದರು.
ಪಾಪಯ್ಯ- ಚಟ್ಟ ಕಟ್ಟುವವರು, ಜವರಪ್ಪ -ಗಾರೆ ಕೆಲಸದ ಮೇಸ್ತ್ರಿ, ಮಣಿಕಂಠ- (ವಿಶೇಷ ವ್ಯಕ್ತಿ) ಮೆಕ್ಯಾನಿಕ್ ಕೆಲಸ, ಎಂ.ಎನ್.ಕಿರಣ್ - ಪತ್ರಕರ್ತ, ಮಂಜುಳಾ - ಸೌಂದರ್ಯ ತಜ್ಞೆ, ಆರ್.ಲಕ್ಷ್ಮಿ - ಪೌರಕಾರ್ಮಿಕರು, ಎನ್.ಜೆ.ಹರೀಶ್- ಟೈಲರ್ ವೃತ್ತಿ ಮಾಡುವವರು, ಯೋಗೇಶ್ - ಟೈಲ್ಸ್ ಜೋಡಿಸುವ ಕೆಲಸ ಮಾಡುವವರು, ಸ್ವಾಮಿ ಆಚಾರಿ- ಮರಗೆಲಸ ವೃತ್ತಿ– ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರಪಾಲಿಕೆ ಮಾಜಿ ಸದಸ್ಯ ಗೋಪಿ ಉದ್ಘಾಟಿಸಿದರು. ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಕಾರ್ಯದರ್ಶಿ ನಾಲಾ ಬೀದಿ ರವಿ ಮಾತನಾಡಿದರು.
ವೇದಿಕೆಯ ಪದಾಧಿಕಾರಿಗಳಾದ ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್ ಬಾಬು, ಗೋಪಿ, ಬೀಡಾ ಬಾಬು, ಮದನ್, ಕಾವೇರಮ್ಮ, ಮಾಲಿನಿ, ಎಲ್ಐಸಿ ಸಿದ್ದಪ್ಪ, ಭವಾನಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.