ADVERTISEMENT

ಕೇಜ್ರಿವಾಲ್ ಬಂಧನ ಖಂಡನೀಯ | ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರ ಆಕ್ರೋಶ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 5:02 IST
Last Updated 23 ಮಾರ್ಚ್ 2024, 5:02 IST
ಮೈಸೂರಿನ ಪುರಭವನದ ಬಳಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ‘ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ’ ಪ್ರತಿಭಟಿಸಿದರು
ಮೈಸೂರಿನ ಪುರಭವನದ ಬಳಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ‘ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ’ ಪ್ರತಿಭಟಿಸಿದರು   

ಮೈಸೂರು: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಪುರಭವನದ ಬಳಿ ಶುಕ್ರವಾರ ಪ್ರತಿಭಟಿಸಿದರು.

ಪಕ್ಷದ ಮುಖಂಡ ಸೋಸಲೆ ಸಿದ್ದರಾಜು ಮಾತನಾಡಿ, ‘ಮುಂಬರುವ ಐದು ವಿಧಾನಸಭೆ ಚುನಾವಣೆಗಳು ಸೇರಿದಂತೆ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕೇಂದ್ರ ಸರ್ಕಾರ ಹೀಗೆ ಮಾಡುತ್ತಿದೆ. ಸರ್ವಾಧಿಕಾರದ ಅಮಲಿನಲ್ಲಿರುವ ಬಿಜೆಪಿ, ಕೇಂದ್ರದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.

‘ಪಕ್ಷದ ಮುಖಂಡರ ವಿರುದ್ಧ ಉದ್ದೇಶಪೂರ್ವಕ ಆರೋಪ ಮಾಡಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಆದರೆ, ಈವರೆಗೆ ಒಂದೇ ಒಂದು ಪೈಸೆ ಭ್ರಷ್ಟಾಚಾರದ ಹಣ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಂಧನದ ಮೂಲಕ ಪಕ್ಷದ ಕಾರ್ಯವೈಖರಿಯನ್ನು ಕುಂಠಿತಗೊಳಿಸುವ ಪ್ರಯತ್ನವಾಗುತ್ತಿದೆ. ಆದರೆ, ಮತದಾರ ಇವನ್ನು ಗಮನಿಸಿ, ಸೂಕ್ತ ನಿರ್ಧಾರ ಕೈಗೊಳ್ಳುತ್ತಾನೆ’ ಎಂದರು.

ADVERTISEMENT

‘ಅರವಿಂದ ಕೇಜ್ರಿವಾಲ್‌ ಅವರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು. ಸಾಧ್ಯವಾಗದಿದ್ದಲ್ಲಿ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಮಾಳವಿಕ ಗುಬ್ಬಿವಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.