
ಮೈಸೂರು: ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಎಕ್ಸ್‌ಗ್ರೇಷಿಯ ಪಾವತಿಸಲು ಬಿಡುಗಡೆ ಮಾಡಿರುವ ಹಣ ವಿತರಣೆಯಲ್ಲಿ ಆಗಿರುವ ಅಕ್ರಮದ ತನಿಖೆ ನಡೆಸಿ, ನೈಜ ರೈತರಿಗೆ ಪರಿಹಾರ ಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಸೋಮವಾರ ಕೆಐಡಿಬಿ ಕಚೇರಿ ಮುಂಭಾಗ ಪ್ರತಿಭಟಿಸಿದರು.
ನಗರದ ಗನ್‌ಹೌಸ್‌ನಿಂದ ಮೇಟಗಳ್ಳಿಯ ಕೆಐಎಡಿಬಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಬಳಿಕ ಕಚೇರಿ ಮುಂಭಾಗ ಸಮಾವೇಶಗೊಂಡು ಬೇಡಿಕೆ ಈಡೇರಿಕೆಗೆ ಘೋಷಣೆ ಕೂಗಿದರು.
‘ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದ ಸ.ನಂ 390 ರಿಂದ 430 ರವರೆಗಿನ ಜಮೀನುಗಳು, ಅಡಕನಹಳ್ಳಿ, ತಾಂಡವಪುರ ಗ್ರಾಮದ ಸ.ನಂ.ಗಳನ್ನು ಸೇರಿಸಿ ಒಟ್ಟು 1,123.08 ಎಕರೆ ವಿಸ್ತೀರ್ಣದ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯವರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಸ್ವಾಧೀನದ ವಿಸ್ತೀರ್ಣದಲ್ಲಿ ಫಿಲಂ ಸಿಟಿ ನಿರ್ಮಾಣಕ್ಕಾಗಿಯೂ ಜಾಗ ನೀಡಲಾಗಿದೆ’ ಎಂದರು.
‘ಸ್ವಾಧೀನಪಡಿಸಿಕೊಳ್ಳಲಾದ ವಿಸ್ತೀರ್ಣದ ಪೈಕಿ ಇಮ್ಮಾವು ಗ್ರಾಮದ ಸ.ನಂ.ನ ಇಮ್ಮಾವು ಹುಂಡಿ, ಅಡಕನಹಳ್ಳಿ ಹುಂಡಿ ಗ್ರಾಮದ 700 ರೈತ ಕುಟುಂಬಗಳು, ಕಳೆದ 70– 80 ವರ್ಷಗಳಿಂದ ಬೇಸಾಯ ಮಾಡುತ್ತಾ ಗೇಣಿ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಈ ರೈತರಿಗೆ ಪರಿಹಾರ ದೊರೆಯದ ಕಾರಣ ನಡೆಸಿದ ಹೋರಾಟದ ಫಲವಾಗಿ ಅನಧಿಕೃತ ಸಾಗುವಳಿ ಹೊಂದಿದ್ದ ರೈತರಿಗೆ ತಲಾ ₹4 ಲಕ್ಷ ಎಕ್ಸ್‌ಗ್ರೇಷಿಯ ನೀಡಲು ₹ 18 ಕೋಟಿಯನ್ನು ಜಿಲ್ಲಾಧಿಕಾರಿ ಮೂಲಕ ನಂಜನಗೂಡು ತಹಶೀಲ್ದಾರ್‌ಗೆ ನೀಡಲಾಗಿದೆ. ಆದರೆ, ಪರಿಹಾರವನ್ನು ನೈಜ ರೈತರಿಗೆ ನೀಡದೆ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಬೇರೆ ಬೇರೆ ತಾಲೂಕಿನಲ್ಲಿರುವ ರೈತರಿಗೆ ನೀಡಿದ್ದು, ಭಾರಿ ಭ್ರಷ್ಟಾಚಾರ, ಅಕ್ರಮ ನಡೆದಿದೆ’ ಎಂದು ಆರೋಪಿಸಿದರು.
‘ಎಕ್ಸೆಗ್ರೇಷಿಯ ವಿತರಣೆಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಿ, ಈ ವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು, ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಸುಳ್ಳು ಮಾಹಿತಿ ನೀಡಿ ಪರಿಹಾರ ಪಡೆದುಕೊಂಡಿರುವವರಿಂದ ವಾಪಸ್ ವಸೂಲಿ ಮಾಡಲು ಕ್ರಮ ಜರುಗಿಸಬೇಕು. ರೈತರಿಗೆ ಮಂಡಳಿಯ ತೀರ್ಮಾನದಂತೆ ಪರಿಹಾರ ಪಾವತಿಸಬೇಕು. ಕುಟುಂಬದ ಒಬ್ಬರಿಗೆ ಕೈಗಾರಿಕೆಯಲ್ಲಿ ಉದ್ಯೋಗ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದರು.
ಸಂಘಟನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿಲ್ಲಾಧ್ಯಕ್ಷ ಹೊಸೂರು ಬಸವರಾಜು, ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ಶಿರಮಳ್ಳಿ ಸಿದ್ದಪ್ಪ, ಹೆಜ್ಜಿಗೆ ಪ್ರಕಾಶ್, ಪ್ರೇಮ್‌ರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.