
ಮೈಸೂರು: ‘ಭಾರತೀಯರಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯು ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಸಾಂಕ್ರಾಮಿಕವಲ್ಲದ ರೋಗ(ಎನ್‌ಸಿಡಿ) ಪಟ್ಟಿಯಲ್ಲಿ ಮೂತ್ರರೋಗಗಳನ್ನು ಪರಿಗಣಿಸಿ ಕ್ರಮ ವಹಿಸುವ ಅಗತ್ಯವಿದೆ’ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ಇಲ್ಲಿನ ಹೆಬ್ಬಾಳದ ನಾರ್ತ್ ಅವೆನ್ಯೂ ಹೋಟೆಲ್ ಸಭಾಂಗಣದಲ್ಲಿ ಮೈಸೂರು ಮೂತ್ರಶಾಸ್ತ್ರ ಶಸ್ತ್ರಚಿಕಿತ್ಸಕರ ಸಂಘದಿಂದ ಆಯೋಜಿಸಿದ್ದ ರಾಜ್ಯ ಮೂತ್ರಶಾಸ್ರ್ತಶಸ್ತ್ರ ಚಿಕಿತ್ಸಕರ 30ನೇ ವಾರ್ಷಿಕ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
‘ಮಧುಮೇಹ, ರಕ್ತದೊತ್ತಡ ಅಥವಾ ಮೂತ್ರಪಿಂಡ ಸಮಸ್ಯೆ ಉಳ್ಳವರಲ್ಲಿ ಶೇ 50ರಿಂದ 60ರಷ್ಟು ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಸಾಧ್ಯತೆ ಇರುತ್ತದೆ. ಈ ಕಾಯಿಲೆಗಳು ಸಾರ್ವಜನಿಕ ಸಮಸ್ಯೆಯಾಗಿ ಮಾರ್ಪಟ್ಟಿವೆ. ಇವುಗಳಿಂದ ಸಂಭವಿಸುವ ಹೃದಯಾಘಾತ, ಪಾರ್ಶ್ವವಾಯು ವಾರ್ಷಿಕ ಶೇ 30ರಷ್ಟು ಸಾವುಗಳಿಗೆ ಕಾರಣವಾಗಿದೆ’ ಎಂದು ವಿವರಿಸಿದರು.
‘ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಮಾರುಕಟ್ಟೆ ಒತ್ತಡಗಳ ನಡುವೆ ವೈದ್ಯರು, ರೋಗಿಗಳು ಸಿಲುಕಿದ್ಧಾರೆ. ಸೂಕ್ತ ಚಿಕಿತ್ಸೆ ನೀಡುವುದು, ಪಡೆಯುವುದು ಎರಡೂ ಕಷ್ಟಕರವಾಗಿದೆ. ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಮೂತ್ರಶಾಸ್ತ್ರಜ್ಞರ ಅಗತ್ಯವಿದ್ದು, ವೈದ್ಯಕೀಯ ಶಿಕ್ಷಣದ ಗುಣಮಟ್ಟವೂ ಹೆಚ್ಚಬೇಕಿದೆ. ಬರುವ ದಿನಗಳಲ್ಲಿ ವೈದ್ಯರಿಗೂ ನಿರುದ್ಯೋಗ ಸಮಸ್ಯೆ ಎದುರಾಗಲಿದೆ’ ಎಂದರು.
‘ನೀರಿಕ್ಷಿತ ಪ್ರಮಾಣದಲ್ಲಿ ಅಂಗಾಂಗಗಳ ಬಳಕೆ ನಡೆಯುತ್ತಿಲ್ಲ ಪ್ರತಿ ವೈದ್ಯಕೀಯ ಕಾಲೇಜುಗಳಲ್ಲಿ ಅಂಗಾಂಗ ರಕ್ಷಣೆ, ಬಳಕೆ ವ್ಯವಸ್ಥೆ ಅಭಿವೃದ್ಧಿ ಹೊಂದಬೇಕು. ಜನರಲ್ಲೂ ಅರಿವು ಮೂಡಬೇಕು’ ಎಂದರು.
ವಿವಿಧ ವಿಷಯಗಳ ಮೇಲೆ ವರದಿ ಮಂಡಿಸಿದ ವೈದ್ಯರಿಗೆ ಕರ್ನಾಟಕ ಮೂತ್ರಶಾಸ್ತ್ರ ಶಸ್ತ್ರ ಚಿಕಿತ್ಸಕರ ಅಸೋಸಿಯೇಷನ್ ಅಧ್ಯಕ್ಷ ಡಾ.ಶ್ರೀಕಾಂತ್ ಮೆಹರ್ವಾಡೆ ಪ್ರಶಸ್ತಿ ನೀಡಿದರು.
ಎಂಎಂಸಿ ಮತ್ತು ಆರ್‌ಐ ನಿರ್ದೇಶಕಿ ಕೆ.ಆರ್.ದಾಕ್ಷಾಯಿಣಿ ಮಾತನಾಡಿದರು. ಸಂಘಟನಾ ಸಮಿತಿ ಅಧ್ಯಕ್ಷ ಡಾ.ಎಂ.ಎಸ್.ರಂಗನಾಥ್, ಕಾರ್ಯದರ್ಶಿ ಡಾ.ಜಿ.ಕಿರಣ್ ಕುಮಾರ್ ಹಾಜರಿದ್ದರು.
ಕೇವಲ ಇಬ್ಬರು ವೈದ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಇತರ ಕ್ಷೇತ್ರಗಳಂತೆ ಕನಿಷ್ಠ ಐದು ಮಂದಿಗೆ ನೀಡಬೇಕುಡಾ.ಸಿ.ಎನ್.ಮಂಜುನಾಥ್. ಸಂಸದ
‘750 ಜಿಲ್ಲೆಗಳಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆ’
ಕೇಂದ್ರ ಸರ್ಕಾರವು ದೇಶದ 750 ಜಿಲ್ಲೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ ಅನುಕೂಲ ಆಗಲಿದೆ ಎಂದು ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು. ‘ಕಿಡ್ನಿ ಶಸ್ತ್ರಚಿಕಿತ್ಸೆ ಹಾಗೂ ಕಿಡ್ನಿ ವೈಫಲ್ಯದ ಅರಿವಿನ ಬಗ್ಗೆ ಗ್ರಾಮೀಣ ಮತ್ತು ನಗರವಾಸಿಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬರುತ್ತಿದ್ದು ಸರ್ಕಾರ ಇದನ್ನು ಹೋಗಲಾಡಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.