
ಬೆಟ್ಟದಪುರ: ಸಮೀಪದ ಕಿತ್ತೂರು ಗ್ರಾಮದ ದುರ್ಗಾಪರಮೇಶ್ವರಿ ಆದಿಶಕ್ತಿ ಕಿತ್ತೂರಮ್ಮ ಜಾತ್ರಾ ಮಹೋತ್ಸವವು ಗುರುವಾರ ಸಕಲ ಪೂಜಾ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಜಾತ್ರೆಯ ಹಿಂದಿನ ದಿನ ಉತ್ಸವ ಮೂರ್ತಿಯ ದೇವಿಯನ್ನು ಹತ್ತಿರದ ಪುಣ್ಯಕ್ಷೇತ್ರವಾದ ಚುಂಚನಕಟ್ಟೆ ಕಾವೇರಿ ಹೊಳೆಯಲ್ಲಿ ಮಡಿಮಾಡಿ, ಸಕಲ ಪೂಜಾ ವಿಧಾನಗಳು ಹಾಗೂ ಹೋಮ, ಹವನಗಳನ್ನು ನೆರವೇರಿಸಲಾಯಿತು. ಭಕ್ತರ ಮೆರವಣಿಗೆಯೊಂದಿಗೆ ಉತ್ಸವ ಮೂರ್ತಿ ದೇವಿಯನ್ನು ಕಿತ್ತೂರು ಗ್ರಾಮಕ್ಕೆ ತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.
ಜಾತ್ರೋತ್ಸವದಲ್ಲಿ ದೇವಿಯನ್ನು ರಥಕ್ಕೆ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಿ ಭಕ್ತರು ಹರ್ಷೋದ್ಗಾರದಿಂದ ಉಘೇ ಅನ್ನಪೂರ್ಣೇಶ್ವರಿ, ಉಘೇ ಕಿತ್ತೂರಮ್ಮ ಘೋಷಣೆಯೊಂದಿಗೆ ರಥವನ್ನು ಎಳೆದು ಪುನೀತರಾದರು. ಹಣ್ಣು– ಜವನ ಎಸೆದು ಪೂಜೆ ಸಲ್ಲಿಸಿದರು. ತಮ್ಮ ಹರಕೆಯನ್ನು ಸಮರ್ಪಿಸಿದರು.
ಸಚಿವ ಕೆ. ವೆಂಕಟೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಪಿರಿಯಾಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ನಿತಿನ್ ವೆಂಕಟೇಶ್ ಮತ್ತು ಅಭಿಮಾನಿ ಬಳಗದಿಂದ, ಭಕ್ತರಿಗೆ ಪ್ರಸಾದ ಹಾಗೂ ಮಜ್ಜಿಗೆ ಪಾನಕ ವಿತರಣೆ ಮಾಡಲಾಯಿತು. ಕಿತ್ತೂರಿನ 18 ಗ್ರಾಮಗಳ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.