
ಮೈಸೂರು: ‘ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪ ಸರಿ ಇದೆ. ಅಲ್ಲಿ ಕಂಡುಬಂದಿರುವ ಅಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ವಿಚಾರಣೆ ನಡೆಸಲಿ’ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ರಾಜ್ಯ ಚುನಾವಣಾ ಆಯೋಗವು ಖಾಸಗಿ ಸಂಸ್ಥೆಯಿಂದ ಅಳಿಸಲಾಗದ ಶಾಯಿಗಾಗಿ ಮಾರ್ಕರ್ ಬಳಸಿದೆ. ಹಲವು ಮತಗಟ್ಟೆಗಳಲ್ಲಿ ಮತದಾರರ ಬೆರಳಿಗೆ ಹಚ್ಚಿರುವ ಶಾಯಿಯ ಗುರುತನ್ನು ನೇಲ್‌ಪಾಲಿಶ್ ರಿಮೂವರ್ ಬಳಸಿ ಅಳಿಸಿ ಹಾಕಿರುವುದು ವರದಿಯಾಗಿರುವುದು ಬಹಳಷ್ಟು ವಿವಾದಕ್ಕೆ ಮಾಡಿಕೊಟ್ಟಿದೆ’ ಎಂದು ಹೇಳಿದ್ದಾರೆ.
‘ವಿಶ್ವದಾದ್ಯಂತ ಹೆಸರು ಮಾಡಿರುವ ದೇಶದ ಹೆಮ್ಮೆಯ ಸಂಸ್ಥೆಯಾದ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್)ಯಿಂದ ಅಳಿಸಲಾಗದ ಶಾಯಿ ಬಳಸದೆ ಖಾಸಗಿಯಾಗಿ ತಯಾರಿಸಿದ ಶಾಯಿ ಬಳಸಿರುವುದು ಅನುಮಾನಾಸ್ಪದವಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆ ಬುಡಮೇಲು ಮಾಡಲು ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗವು ಅವಕಾಶ ಕಲ್ಪಿಸಿದಂತಿದೆ’ ಎಂದು ದೂರಿದ್ದಾರೆ.
‘ರಾಹುಲ್ ಗಾಂಧಿಯವರ ಆರೋಪವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಇನ್ನು ಮುಂದೆ, ಅಳಿಸಲಾಗದ ಶಾಯಿಯನ್ನು ಮೈಲ್ಯಾಕ್‌ನಿಂದಲೇ ಖರೀದಿಸುವಂತೆ ಕಡ್ಡಾಯಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.