ADVERTISEMENT

ಕೈಕೊಟ್ಟ ಸರ್ವರ್; ಬಳಲಿದ ರೋಗಿಗಳು

ಕೆ.ಆರ್.ಆಸ್ಪತ್ರೆಯಲ್ಲಿ ತಪ್ಪದ ಬವಣೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 4:10 IST
Last Updated 28 ಜುಲೈ 2021, 4:10 IST
ಕೆ.ಆರ್.ಆಸ್ಪತ್ರೆಯ ಬಿಲ್ಲಿಂಗ್ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ನೂರಾರು ಮಂದಿ ಮಂಗಳವಾರ ಆಸ್ಪತ್ರೆಯ ಆವರಣದಲ್ಲಿ ಸೇರಿದ್ದರು
ಕೆ.ಆರ್.ಆಸ್ಪತ್ರೆಯ ಬಿಲ್ಲಿಂಗ್ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ನೂರಾರು ಮಂದಿ ಮಂಗಳವಾರ ಆಸ್ಪತ್ರೆಯ ಆವರಣದಲ್ಲಿ ಸೇರಿದ್ದರು   

ಮೈಸೂರು: ಇಲ್ಲಿನ ಕೆ.ಆರ್.ಆಸ್ಪತ್ರೆಯಲ್ಲಿ ಮಂಗಳವಾರ ಬಿಲ್ಲಿಂಗ್ ಮಾಡುವ ತಂತ್ರಾಂಶದಲ್ಲಿ ಬೆಳಿಗ್ಗೆ 2 ಗಂಟೆಗಳ ಕಾಲ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ನೂರಾರು ರೋಗಿಗಳು ಬಳಲಿದರು.‌

ಬಿಲ್ಲಿಂಗ್ ಆಗಲಿಲ್ಲ ಎಂದು ಸ್ಕ್ಯಾನಿಂಗ್, ರಕ್ತಪರೀಕ್ಷೆ ಸೇರಿದಂತೆ ವಿವಿಧ ಪ್ರಯೋಗಾಲಯಗಳ ವರದಿಗೆ, ಹೊರರೋಗಿ ಮತ್ತು ಒಳರೋಗಿಗಳ ದಾಖಲಾತಿಗೆ ಕಾಯುತ್ತಾ ಬಹುತೇಕರು ಬಳಲಿದರು.

ಮಧುಮೇಹದ ಪರೀಕ್ಷೆಗಾಗಿ ಬೆಳಿಗ್ಗೆಯೇ ಉಪಾಹಾರ ಸೇವಿಸದೇ ಬಂದಿದ್ದ ಅನೇಕರು ಸುಸ್ತಾಗಿ ಕುಸಿದರು. ಮತ್ತೆ ಕೆಲವರು ಇತರ ಆರೋಗ್ಯ ಸಮಸ್ಯೆಗಳಿಂದ ನಿಂತ ಜಾಗದಲ್ಲೇ ಕುಳಿತುಕೊಂಡರು. ದಿಢೀರನೆ ಏರ್ಪಟ್ಟ ಈ ಸಮಸ್ಯೆ ಮೊದಲಿಗೆ ಯಾರ ಗಮನಕ್ಕೂ ಬರಲಿಲ್ಲ. ನಂತರ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿ ಕಾಯುವಂತೆ ರೋಗಿಗಳಿಗೆ ಸೂಚಿಸಿದರು.

ADVERTISEMENT

ಆಸ್ಪತ್ರೆಯ ಒಟ್ಟು 5 ಬಿಲ್ಲಿಂಗ್‌ ಕೌಂಟರ್‌ಗಳು ಹಾಗೂ 4 ಹೊರರೋಗಿಗಳ ಕೌಂಟರ್‌ನಲ್ಲಿದ್ದ 14 ನೌಕರರು ರೋಗಿಗಳಿಗೆ ಉತ್ತರಿಸುವಷ್ಟರಲ್ಲಿ ಹೈರಾಣಾದರು. ‘ಬಿಲ್ಲಿಂಗ್‌ ಮಾಡದೇ ಬೇರೆ ದಾರಿಯೇ ಇಲ್ಲ. ನೆಟ್‌ವರ್ಕ್‌ ಬರುವವರೆಗೂ ಕಾಯಲೇಬೇಕು’ ಎಂದು ರೋಗಿಗಳ ಮನವೊಲಿಸುವುದರಲ್ಲಿಯೇ ಮಗ್ನರಾಗಿದ್ದರು.

ಮಂಗಳವಾರ ಒಂದೇ ದಿನ 1,450 ಮಂದಿ ಹೊರರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿದರೆ, 120 ಮಂದಿ ಒಳರೋಗಿಗಳಾಗಿ ದಾಖಲಾದರು. ಈ ಎಲ್ಲರಿಗೂ ಸಕಾಲಕ್ಕೆ ರಶೀದಿ ನೀಡಲು ಆಗದೇ ಸಿಬ್ಬಂದಿಯೂ ಅಸಹಾಯಕರಾಗಿದ್ದರು.

ಹೆಚ್ಚಾದ ತಾಂತ್ರಿಕ ಸಮಸ್ಯೆ

’ಇತ್ತೀಚಿನ ದಿನಗಳಲ್ಲಿ ಈ ಬಗೆಯ ತಾಂತ್ರಿಕ ಸಮಸ್ಯೆ ಹೆಚ್ಚಾಗಿದೆ’ ಎಂದು ಬಿಲ್ಲಿಂಗ್ ಕೌಂಟರ್‌ನ ಹೆಸರು ಬಹಿರಂಗಪಡಿಸಲು ಬಯಸದ ನೌಕರರೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು.

‘ಸಾಮಾನ್ಯವಾಗಿ ಸೋಮವಾರ ಮತ್ತು ಮಂಗಳವಾರವೇ ಇಂಥ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದರೆ, 2 ಗಂಟೆಗಳಷ್ಟು ದೀರ್ಘ ಕಾಲ ಸಮಸ್ಯೆ ಏರ್ಪಟ್ಟಿದ್ದು ಇದೇ ಮೊದಲು. ಬೇರೆ ದಿನಗಳಲ್ಲಿ ಹೆಚ್ಚೆಂದರೆ 30 ನಿಮಿಷಗಳಷ್ಟು ಮಾತ್ರ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ನಂತರ ಕೆಲಸ ಸರಾಗವಾಗಿ ಮುಂದುವರಿಯುತ್ತಿತ್ತು’ ಎಂದು ಪ್ರತಿಕ್ರಿಯಿಸಿದರು.‌

ಈ ಕುರಿತು ‘ಪ್ರಜಾವಾಣಿ’ ಕೆ.ಆರ್.ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜೇಶ್‌ ಅವರನ್ನು ಸಂಪರ್ಕಿಸಿದಾಗ ಅವರು, ‘ಇದು ಕೆ.ಆರ್.ಆಸ್ಪತ್ರೆಗಷ್ಟೇ ಸೀಮಿತವಾದ ಸಮಸ್ಯೆ ಅಲ್ಲ. ಇಡೀ ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಏಕಕಾಲಕ್ಕೆ ಸರ್ವರ್‌ನಲ್ಲಿ ದೋಷ ಕಾಣಿಸಿಕೊಳ್ಳುತ್ತದೆ. ನಾವೇನೂ ಮಾಡಲು ಆಗದು’ ಎಂದು ಹೇಳಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.