ADVERTISEMENT

ಸೋಂಕಿನ ತಾಣವಾದ ಡಯಾಲಿಸಿಸ್ ಕೇಂದ್ರ; ಆರೋಪ

‘ಹೆಪಾಟೈಟಿಸ್ ಸಿ’ ಸೋಂಕಿನಿಂದ ವ್ಯಕ್ತಿ ಸಾವು, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 18:38 IST
Last Updated 26 ಜೂನ್ 2019, 18:38 IST
ಕೆ.ಆರ್.ನಗರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಸೋಂಕಿತ ವ್ಯಕ್ತಿಗಳು, ಸಾರ್ವಜನಿಕರು ಬುಧವಾರ ಧರಣಿ ಕುಳಿತು ಪ್ರತಿಭಟಿಸಿದರು
ಕೆ.ಆರ್.ನಗರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಸೋಂಕಿತ ವ್ಯಕ್ತಿಗಳು, ಸಾರ್ವಜನಿಕರು ಬುಧವಾರ ಧರಣಿ ಕುಳಿತು ಪ್ರತಿಭಟಿಸಿದರು   

ಕೆ.ಆರ್.ನಗರ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರವು ‘ಹೆಪಾಟೈಟಿಸ್ ಸಿ’ ಸೋಂಕಿನ ತಾಣವಾಗಿದೆ ಎಂದು ಆರೋಪಿಸಿ ನೂರಾರು ಮಂದಿ ಆಸ್ಪತ್ರೆ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತರಾಗಿದ್ದ ಸಕ್ಕುಬಾಯಿ ಮಾತನಾಡಿ, ‘ಡಯಾಲಿಸಿಸ್‌ಗೆ ಒಳಗಾದ ಒಬ್ಬರಲ್ಲಿ ‘ಹೆಪಾಟೈಟಿಸ್ ಸಿ’ ಸೋಂಕು ಇತ್ತು. ಅವರ ರಕ್ತ ಪರೀಕ್ಷೆ ನಡೆಸದೇ, ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಎಲ್ಲರಿಗೂ ಡಯಾಲಿಸಿಸ್ ಮಾಡಿದ್ದರಿಂದ 30 ಮಂದಿಗೆ ಸೋಂಕು ಹರಡಿದೆ. ಚಂದ್ರು ಎಂಬುವವರು ಇದೇ ಕಾರಣಕ್ಕೆ ಮೃತಪಟ್ಟಿದ್ದಾರೆ’ ಎಂದು ಆರೋಪಿಸಿದರು.

‘ಹೆಪಟೈಟಿಸ್ ಸಿ ಸೋಂಕಿನ ಚಿಕಿತ್ಸೆಗೆ ವಾರಕ್ಕೆ ₹ 25 ಸಾವಿರ ಬೇಕು. 6 ತಿಂಗಳವರೆಗೂ ಚಿಕಿತ್ಸೆ ಪಡೆಯಬೇಕು. ಸುಮಾರು ₹ 6 ಲಕ್ಷವರೆಗೂ ಹಣ ಬೇಕಾಗುತ್ತದೆ. ಊಟಕ್ಕೆ ಹಣ ಇಲ್ಲದಿರುವಾಗ ಡಯಾಲಿಸಿಸ್‌ಗಾಗಿ ನಿತ್ಯ ಸಾಲ ಸೋಲ ಮಾಡಿ ಜೀವ ಉಳಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ನಮ್ಮದಲ್ಲದ ತಪ್ಪಿಗೆ ಇಷ್ಟು ದೊಡ್ಡ ಮೊತ್ತದ ಚಿಕಿತ್ಸಾ ವೆಚ್ಚ ಭರಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ADVERTISEMENT

ಸರ್ಕಾರಿ ಆಸ್ಪತ್ರೆಗೆ ಬರುವವರು ಬಹುತೇಕ ಬಡ ರೋಗಿಗಳೇ ಆಗಿರುತ್ತಾರೆ. ಆಸ್ಪತ್ರೆಯು ಇವರಿಗೆ ಸೋಂಕು ತಗುಲಿಸಿ ಮತ್ತಷ್ಟು ಬಲಹೀನಗೊಳಿಸಿ, ರೋಗಿಗಳ ಜೀವದ ಜತೆಯಲ್ಲಿ ಚಲ್ಲಾಟವಾಡುತ್ತಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು. ತಪ್ಪು ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಇಂತಹ ಅಚಾತುರ್ಯಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.

ಪುರಸಭೆ ಸದಸ್ಯ ಕೋಳಿ ಪ್ರಕಾಶ್, ಮಧುವನಹಳ್ಳಿ ನಟರಾಜ್, ಮುಖಂಡ ಪ್ರಸನ್ನ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.