ADVERTISEMENT

ಕಂಠೇನಹಳ್ಳಿ ಹೊಸ ಬಡಾವಣೆಯಲ್ಲಿ ಹುಳುಮಿಶ್ರಿತ ಪಾಚಿ ನೀರು: ಹಲವರಿಗೆ ಅನಾರೋಗ್ಯ

ಪಂಡಿತ್ ನಾಟಿಕರ್
Published 7 ಆಗಸ್ಟ್ 2025, 2:29 IST
Last Updated 7 ಆಗಸ್ಟ್ 2025, 2:29 IST
ಕೆ.ಆರ್.ನಗರ ಕಂಠೇನಹಳ್ಳಿ ಹೊಸ ಬಡಾವಣೆಯಲ್ಲಿನ ನೀರಿನ ಟ್ಯಾಂಕ್
ಕೆ.ಆರ್.ನಗರ ಕಂಠೇನಹಳ್ಳಿ ಹೊಸ ಬಡಾವಣೆಯಲ್ಲಿನ ನೀರಿನ ಟ್ಯಾಂಕ್   

ಕೆ.ಆರ್.ನಗರ: ಇಲ್ಲಿನ 12ನೇ ವಾರ್ಡ್ ಕಂಠೇನಹಳ್ಳಿ ಹೊಸ ಬಡಾವಣೆ ಸೇರಿದಂತೆ ಹಲವೆಡೆ ಹುಳು ಮಿಶ್ರಿತ ಪಾಚಿ ನೀರು ಸರಬರಾಜು ಆಗುತ್ತಿರುವುದರಿಂದ ಹಲವರು‌ ಅನಾರೋಗ್ಯದಿಂದ ಬಳಲುವಂತಾಗಿದೆ.

ಇಲ್ಲಿನ ಕಂಠೇನಹಳ್ಳಿ ಹೊಸ ಬಡಾವಣೆಯ ನೀರಿನ ಟ್ಯಾಂಕ್‌ನಿಂದ ಬಸವೇಶ್ವರ ಬ್ಲಾಕ್, ಸಾರಿಗೆ ನಗರ, ಕಂಠೇನಹಳ್ಳಿ, ಅಂಬೇಡ್ಕರ್ ಬಡಾವಣೆ, ಅಂಬೇಡ್ಕರ್ ನಗರ, ಈಶ್ವರ ನಗರ, ಗೌತಮ ಬುದ್ಧ ನಗರ ಸೇರಿದಂತೆ ವಿವಿಧ ಬಡಾವಣೆಗಳಿಗೆ ನೀರು ಸರಬರಾಜಾಗುತ್ತಿದೆ.

ಕೆ.ಆರ್.ನಗರ ಕಂಠೇನಹಳ್ಳಿ ಹೊಸ ಬಡಾವಣೆಯಲ್ಲಿನ ನೀರಿನ ಟ್ಯಾಂಕ್ ಕೆಳಗೆ ಹುಳು ಕಸದಿಂದ ಕಲುಶಿತ ನೀರು ತುಂಬಿಕೊಂಡಿರುವುದು

ಟ್ಯಾಂಕ್ ಕೆಳಗೆ ದನಕರುಗಳನ್ನು ಕಟ್ಟುತ್ತಿರುವುದರಿಂದ ಎಲ್ಲೆಂದರಲ್ಲಿ ಸಗಣಿ, ಕಸಕಡ್ಡಿ ಬಿದ್ದಿದೆ. ಟ್ಯಾಂಕ್‌ ಆವರಣದಲ್ಲಿ ತ್ಯಾಜ್ಯವನ್ನು ಎಸೆದಿದ್ದು, ನೀರು ತಿರುಗಿಸಲು ವಾಲ್ವ್‌ ಇರುವ 2 ತೆರೆದ ತೊಟ್ಟಿ ಇದ್ದು, ತೊಟ್ಟಿಯಲ್ಲಿ ಪಾಚಿಕಟ್ಟಿದ ನೀರು, ಹುಳುಗಳು, ಕಸ ತುಂಬಿ ತುಳುಕುತ್ತಿವೆ. ಓವರ್‌ ಹೆಡ್ ಟ್ಯಾಂಕ್‌ಗೆ ಡೋರ್ ಕೂಡ ಇಲ್ಲದಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ನೀರಿನ ಟ್ಯಾಂಕ್ ಶುಚಿಗೊಳಿಸಿ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.


ADVERTISEMENT
ನಲ್ಲಿ ನೀರಿನಲ್ಲಿ ಬಂದಿರುವ ಹುಳುಗಳು
ಪಟ್ಟಣದಲ್ಲಿನ ಎಲ್ಲ ನೀರಿನ ಟ್ಯಾಂಕ್‌ಗಳನ್ನು ವರ್ಷಕ್ಕೆ ಒಂದು ಬಾರಿ ಶುಚಿ ಗೊಳಿಸುತ್ತೇವೆ. ನಲ್ಲಿ ನೀರಿನಲ್ಲಿ ಹುಳುಗಳು ಬರುತ್ತಿರುವ ಬಗ್ಗೆ ಗೊತ್ತಿಲ್ಲ. ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುಗುವುದು
ಸೌಮ್ಯಾ ಎಂಜಿನಿಯರ್ ಪುರಸಭೆ

‘ಟ್ಯಾಂಕ್ ಶುಚಿಗೊಳಿಸಿಲ್ಲ’

‘ಹಲವು ವರ್ಷಗಳಿಂದ ನೀರಿನ ಟ್ಯಾಂಕ್ ಶುಚಿಗೊಳಿಸದೇ ಇರುವುದರಿಂದ ನಲ್ಲಿ ನೀರಿನಲ್ಲಿ ಹುಳುಗಳು ಬರುತ್ತಿವೆ. ಇದರಿಂದ ನಲ್ಲಿ ನೀರು ಬಳಸುವ ಹಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅಧಿಕಾರಿಗಳು ಇತ್ತ ಗಮನ ಹರಿಸಿ ಟ್ಯಾಂಕ್ ಶುಚಿಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ರುದ್ರಮೂರ್ತಿ ಆಗ್ರಹಿಸಿದರು.

‘ಎರಡು ವರ್ಷಗಳಿಂದ ಟ್ಯಾಂಕ್ ಶುಚಿಗೊಳಿಸಿಲ್ಲ’

‘ಟ್ಯಾಂಕ್ ಶುಚಿಗೊಳಿಸುವಂತೆ ಒತ್ತಾಯಿಸಿದ್ದರಿಂದ 2 ವರ್ಷಗಳ ಹಿಂದೆ ಒಂದು ಬಾರಿ ಟ್ಯಾಂಕ್ ಶುಚಿಗೊಳಿಸಿದ್ದರು. ಅಂದಿನಿಂದ ಇತ್ತ ಯಾರೂ ತಿರುಗಿ ನೋಡಿಲ್ಲ ಇದರಿಂದ ನಳದ ನೀರಿನಲ್ಲಿ ಹಲವು ದಿನಗಳಿಂದ ಹುಳುಗಳು ಬರುತ್ತಿವೆ. ಟ್ಯಾಂಕ್ ರಸ್ತೆ ಚರಂಡಿ ಶುಚಿಗೊಳಿಸುವಂತೆ ಹತ್ತಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿ ಶಶಿಕಲಾ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.