ADVERTISEMENT

ಮೈಸೂರು: ಬರದಲ್ಲೂ ಬೆಳೆ ಭರವಸೆ ನೀಡಿದ ‘ಮೇಳ’

ಕಡಿಮೆ ನೀರಿನಲ್ಲಿ ಭರ್ಜರಿ ಫಸಲು l ಲಾಭದಾಯಕ ‘ಸುಸ್ಥಿರ ಕೃಷಿ’ ಮಾರ್ಗ

ಮೋಹನ್ ಕುಮಾರ ಸಿ.
Published 7 ಫೆಬ್ರುವರಿ 2024, 5:32 IST
Last Updated 7 ಫೆಬ್ರುವರಿ 2024, 5:32 IST
ಸುತ್ತೂರು ಜಾತ್ರಾ ಮಹೋತ್ಸವ ಪ್ರಯುಕ್ತ ಆಯೋಜಿಸಿರುವ ಕೃಷಿಮೇಳದಲ್ಲಿ ಬೆಳೆಯಲಾದ ಪುಷ್ಪಕೃಷಿ
ಸುತ್ತೂರು ಜಾತ್ರಾ ಮಹೋತ್ಸವ ಪ್ರಯುಕ್ತ ಆಯೋಜಿಸಿರುವ ಕೃಷಿಮೇಳದಲ್ಲಿ ಬೆಳೆಯಲಾದ ಪುಷ್ಪಕೃಷಿ   

ಮೈಸೂರು: ಬರದಲ್ಲೂ ಭರ್ಜರಿ ಬೆಳೆ ತೆಗೆಯುವ ಸುಸ್ಥಿರ ಮಾದರಿಯನ್ನು ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವದಲ್ಲಿ ಆಕರ್ಷಣೆಯಾದ ‘ಕೃಷಿಮೇಳ’ ತೋರಿದೆ.

ಮಳೆ ಅಭಾವದಿಂದ ರಾಜ್ಯ ಬರಪೀಡಿತ ಆಗಿರುವುದರಿಂದ ಮೇಳದಲ್ಲಿ ಕಡಿಮೆ ನೀರು ಬೇಡುವ ಬೆಳೆಗಳು ಹಾಗೂ ತರಕಾರಿಗಳ ಬಗ್ಗೆ ವಿಶೇಷ ಆದ್ಯತೆ ನೀಡಲಾಗಿದೆ. ಲಾಭದಾಯಕ ಬೇಸಾಯಕ್ಕೊಂದು ಸುಸ್ಥಿರ ದಾರಿಯನ್ನು ರೈತರಿಗೆ ಮೇಳ ಹುಡುಕಿಕೊಟ್ಟಿದೆ.

ಅತಿ ಕಡಿಮೆ ಅವಧಿಯಲ್ಲಿ, ಅಂದರೆ 90 ದಿನದ ಅವಧಿಯಲ್ಲಿ ಬೆಳೆದ ತಾಕುಗಳು ರೈತರ ಗಮನ ಸೆಳೆಯುತ್ತಿವೆ. ಲಾಭ ತಂದುಕೊಡುವ ಇವುಗಳನ್ನು ನೋಡಿದ ಕೃಷಿಕರು ಅಚ್ಚರಿಗೊಳಗಾದರಲ್ಲದೇ ಐಸಿಎಆರ್ ಜೆಎಸ್‌ಎಸ್ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳು, ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಹನಿ ನೀರಿಗೂ ಭರಪೂರ ತೆನೆ ಸಿಗುವ ಬಗೆಯನ್ನು ತಿಳಿದರು.

ADVERTISEMENT

ಯಾವ್ಯಾವ ಬೆಳೆಗಳು: ಪಡುವಲಕಾಯಿ, ಕುಂಬಳಕಾಯಿ, ಮಂಗಳೂರು ಸೌತೆಕಾಯಿ, ಸೋರೆಕಾಯಿ, ಮೂಲಂಗಿ, ಚಕ್ಕೋತಾ, ಸೊಪ್ಪುಗಳು, ಹೂಕೋಸು, ಎಲೆಕೋಸು, ಅಲಂಕಾರಿಕ ಪುಷ್ಪಗಳು ಇಲ್ಲಿವೆ.

ಕ್ಯೂಆರ್‌ ಕೋಡ್‌ ಅಳವಡಿಕೆ: ವಿಶೇಷ ಕೃಷಿ ಬೆಳೆಗಳ ಮಾದರಿಯ ಬಗ್ಗೆ ಮಾಹಿತಿ ಪಡೆಯಲು ತಜ್ಞರ ಜೊತೆಗೆ ಪ್ರತಿ ಬೆಳೆಗೂ ಕ್ಯೂಆರ್ ಕೋಡ್ ಅಳವಡಿಕೆ ಮಾಡಲಾಗಿದೆ. ಸ್ಕ್ಯಾನ್ ಮಾಡಿದರೆ ಬೆಳೆಯ ವಿಡಿಯೊ ಸಮೇತ ಸಮಗ್ರ ಮಾಹಿತಿ ಪಡೆಯಬಹುದಾಗಿದೆ.

ಬರದಲ್ಲಿ ಜಾನುವಾರಿಗೆ ಮೇವಿನ ಅಭಾವಿರುವುದರಿಂದ ಕಡಿಮೆ ನೀರಿನಲ್ಲಿ ಬೆಳೆಯುವ 21 ಜಾತಿಯ ಮೇವು ತಳಿಗಳ ಪ್ರಾತ್ಯಕ್ಷಿಕೆಗಳೂ ಇಲ್ಲಿರುವುದು ವಿಶೇಷ!

ಜೋಳದ ತಳಿಗಳು, ದ್ವಿದಳ ಮೇವಾದ ಅಲಸಂದೆ, ಬಳ್ಳಿ ಸಿಹಿಗೆಣಸು, ಕುದುರೆ ಮೆಂತೆ, ಗಿಣಿಹುಲ್ಲು, ಆಫ್ರಿಕನ್‌ ಜೋಳ ಸೇರಿದಂತೆ ಮೇವುಗಳನ್ನು ಬೆಳೆಯಲಾಗಿದೆ. ಕಡಿಮೆ ಸಮಯದಲ್ಲಿ ಬೆಳೆದು ಹೆಚ್ಚಿನ ಆದಾಯ ತಂದುಕೊಡುವ ತರಕಾರಿಗಳನ್ನು ಬೆಳೆಯಲಾಗಿದೆ. ಸಲಾಡ್‌ ತರಕಾರಿಗಳು, ಟೊಮೆಟೊ, ಮೆಣಸಿನಕಾಯಿ, ಬದನೆ, ಬಳ್ಳಿ– ತರಕಾರಿಗಳ 15 ತಳಿಗಳಿವೆ. ಸೊಪ್ಪುಗಳಿವೆ. ಫಲಪುಷ್ಪಗಳನ್ನೂ ಬೆಳೆಯಲಾಗಿದೆ.

ಕೃಷಿ ಬಹ್ಮಾಂಡ: ಒಂದೇ ಎಕರೆಯಲ್ಲಿ ಕೃಷಿ, ತೋಟಗಾರಿಕೆ. ಮೇವು, ಔಷಧಿ ಸಸ್ಯ, ವಿವಿಧ ಸೊಪ್ಪಿನ ಬೆಳೆಗಳು ಹಾಗೂ ಪಶುಸಂಗೋಪನೆ ಮೂಲಕ ಆರ್ಥಿಕ ಸ್ವಾವಲಂಬನೆಯ ದಾರಿಯನ್ನೂ ತೋರಲಾಗಿದೆ. ಮೇಳದಲ್ಲಿನ 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕೃಷಿ ಪರಿಸರ ಮತ್ತು ಯಂತ್ರೋಪಕರಣಗಳು ಪ್ರದರ್ಶನ ಮಾರಾಟವಿರುವುದು ಇಲ್ಲಿನ ವಿಶೇಷ.

ಕುತೂಹಲದಿಂದ ಕೃಷಿ ಮೇಳ ವೀಕ್ಷಿಸಿದ ನಾಗರಿಕರು
ಕ್ಯೂಆರ್‌ ಕೋಡ್‌ನಲ್ಲಿ ಬೆಳೆ ಮಾಹಿತಿ

ಮಳೆ ಕಡಿಮೆಯಾಗಿದೆ. ಇದನ್ನು ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ. ಅಷ್ಟು ಚೆನ್ನಾಗಿ ಮಾಡಿದ್ದಾರೆ. ಬಿತ್ತನೆ ಬೀಜ ಕೊಳ್ಳುವೆ

-ರಾಚಪ್ಪ ರೈತ ಹಳ್ಳಿಕೆರೆಹುಂಡಿ

ಜಮೀನಿದ್ದರೆ ಇವೆಲ್ಲ ಮಾಡಬಹುದಿತ್ತು. ನನ್ನ ಚಿಕ್ಕ ಖಾಲಿ ನಿವೇಶನದಲ್ಲಿ ಏನೆಲ್ಲ ಬೆಳೆಯಬಹುದೆಂಬ ಮಾಹಿತಿ ಸಿಕ್ಕಿದೆ

-ಸೋಮಣ್ಣ ನಂಜನಗೂಡು

ಬರದಲ್ಲಿ ನವಣೆ ಬೆಳೆಯುತ್ತಿದ್ದೆವು. ಇದೀಗ ಕಬ್ಬು ಬಾಳೆ ಬೆಳೆಯುತ್ತಿದ್ದೇವೆ. ಹೂ ಬೆಳೆಗಳು ಇಷ್ಟವಾದವು -ನಾಗರಾಜ ಮಸಣಾಪುರ ಚಾಮರಾಜನಗರ

ರೈತರ ಗೊಂದಲ ನಿವಾರಣೆ’

‘ಹನಿ ಹನಿ ನೀರಿಗೂ ಭರಪೂರ ತೆನೆ’ ಶೀರ್ಷಿಕೆಯಡಿ ಕೃಷಿ ಮೇಳ ಆಯೋಜಿಸಲಾಗಿದೆ. ಮೈಸೂರು ಹಾಗೂ ಚಾಮರಾಜನಗರ ಭಾಗದ ರೈತರು ಯಾವ ಬೆಳೆ ಬೆಳೆಯಬೇಕೆಂಬ ಗೊಂದಲದಲ್ಲಿದ್ದಾರೆ. ಮೇಳದಲ್ಲಿ ಗೊಂದಲ ನಿವಾರಣೆ ಮಾಡಲಾಗಿದೆ’ ಎಂದು ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ವಿನಯ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಟೊಮೆಟೊ ಮೆಣಸಿನಕಾಯಿ ಬದನೆ ಕೋಸು ಬಳ್ಳಿ ತರಕಾರಿಗಳ 15 ಪ್ರಾತ್ಯಕ್ಷಿಕೆ ತೋರಿಸಲಾಗಿದೆ. ಪುಷ್ಪಕೃಷಿಯೂ ಲಾಭದಾಯಕ ಎಂಬುದನ್ನು ತೋರಿಸಿಕೊಡಲು 35 ಹೂ ಬೆಳೆ ಬೆಳೆಯಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.